ಬೆಂಗಳೂರು: ಖರೀದಿಯ ವಾರಂಟಿ ಅವಧಿಯೊಳಗೆ ಮೊಬೈಲ್‌ನಲ್ಲಿ ಕಾಣಿಸಿಕೊಂಡ ದೋಷ ಸರಿಪಡಿಸಲು ಹಿಂದೇಟು ಹಾಕಿದ ಪ್ರತಿಷ್ಠಿತ ಮೊಬೈಲ್ ಕಂಪನಿಗೆ ನಗರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ 30,000 ರೂ. ದಂಡ ವಿಧಿಸಿದೆ ಆದೇಶ ಹೊರಡಿಸಿದೆ.
ಬೆಂಗಳೂರಿನ ನಗರ ನಿವಾಸಿಯೊಬ್ಬರು 2021ರ ಅ.29ರಂದು ಪ್ರತಿಷ್ಠಿತ ಕಂಪನಿಯ ಫೋನ್ ಖರೀದಿಸಿದ್ದರು. 2022ರ ಆ.18ರಂದು ಮೊಬೈಲ್ ಸ್ಪೀಕರ್ ಹಾಗೂ ಬ್ಯಾಟರಿ ದೋಷ ಕಾಣಿಸಿಕೊಂಡಿದೆ. ಈ ವೇಳೆ ಇಂದಿರ ನಗರ ಮೊಬೈಲ್ ಕೇರ್‌ಗೆ ಸರ್ವಿಸ್ ನೀಡಲಾಗಿತ್ತು. ಈ ವೇಳೆ ಸೆಂಟರ್ ನವರು ಬ್ಯಾಟರಿ ಹಾಗೂ ಸ್ಟೀಕರ್‌ನಲ್ಲಿ ದೋಷವಿದ್ದು, 7ದಿನಗಳ ಒಳಗೆ ಸರಿಪಡಿಸುವುದಾಗಿ ಭರವಸೆ ನೀಡಿದ್ದರು.
ಹೆಚ್ಚುವರಿ ಹಣಕ್ಕೆ ಬೇಡಿಕೆ: 2022 ಆ.25ರಂದು ಮೊಬೈಲ್ ತೆಗೆದುಕೊಂಡು ಹೋಗುವಂತೆ ಕರೆ ಮಾಡಿದ್ದರು. ಇದಾದ 5 ದಿನದೊಳಗೆ ಸಮಸ್ಯೆ ಮರುಕಳಿಸಿದೆ. ತಕ್ಷಣ ದೂರುದಾರರು ಫೋನ್ ಹಿಂದಿರುಗಿಸಿದ್ದಾರೆ. ಕೆಲ ದಿನಗಳ ಬಳಿಕ ಸರ್ವೀಸ್ ಕೇರ್ ನವರು ಫೋನ್ ಮೆಷ್‌ನಲ್ಲಿ ದೂಳು ಮತ್ತು ಅಂಟು ಅಂಟಿಕೊಂಡಿದ್ದು, ಇದರಿಂದಾಗಿ ವಾರಂಟಿ ಬಳಕೆ ಮಾಡಲಾಗದು. ಸರಿಪಡಿಸಲು ಹೆಚ್ಚುವರಿ ಹಣ ನೀಡುವಂತೆ ತಿಳಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ದೂರುದಾರರು, ಈ ಹಿಂದೆ ಸ್ಪೀಕರ್ ಬದಲಾಯಿಸಿರುವುದಾಗಿ ಕರೆ ಮಾಡಿ ತಿಳಿಸಿದ್ದರು. ಆದರೆ, ಇದೀಗ ವಾರಂಟಿ ಬಳಕೆ ಮಾಡುವುದಕ್ಕೆ ಸಾಧ್ಯವಿಲ್ಲ ಎನ್ನಲಾಗುತ್ತಿದೆ ಎಂದು ತಿಳಿಸಿ ಮೊಬೈಲ್ ಅನ್ನು ಸರ್ವಿಸ್ ಸೆಂಟರ್‌ನವರಿಗೆ ಹಿಂದಿರುಗಿಸಿದ್ದರು. ನಂತರ ಮೊಬೈಲ್ ಕಂಪನಿಯನ್ನು ಹಲವು ಬಾರಿ ಸಂಪರ್ಕಿಸಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದರಿಂದ ಬೇಸರಗೊಂಡು ದೂರುದಾರ ಗ್ರಾಹಕರ ಪರಿಹಾರ ವೇದಿಕೆಯಲ್ಲಿ ದೂರು ದಾಖಲಿಸಿದ್ದರು.
ಎರಡು ಕಡೆಯ ವಾದ -ಪ್ರತಿವಾದ ಆಲಿಸಿದ ಆಯೋಗದ ಅಧ್ಯಕ್ಷೆ ಎಂ.ಶೋಭಾ ನೇತೃತ್ವದ ವಿಚಾರಣಾ ಪೀಠ ಪ್ರತಿಷ್ಠಿತ ಮೊಬೈಲ್ ಸರ್ವೀಸ್ ಕೇಂದ್ರದವರು ಮೊದಲ ಬಾರಿಯೇ ದೂಳು ಮತ್ತು ಅಂಟು ಇರುವುದನ್ನು ಗಮನಿಸಿ, ವಾರಂಟಿಯಲ್ಲಿ ಸರಿ ಪಡಿಸಲು ಸಾಧ್ಯವಿಲ್ಲ ಎನ್ನುವುದಾಗಿ ಸ್ಪಷ್ಟವಾಗಿ ತಿಳಿಸಬಹುದಾಗಿತ್ತು. ಆದರೆ, ಒಮ್ಮೆ ಸರಿಪಡಿಸಲಾಗಿದೆ ಎನ್ನುವುದಾಗಿ ತಿಳಿಸಿ, ಮತ್ತೆ ಸಮಸ್ಯೆ ಕುರಿತು ವಿವರಿಸಿದ್ದಾರೆ. ಜತೆಗೆ ಅವರ ತಪ್ಪನ್ನು ಮುಚ್ಚಿ ಹಾಕಿಕೊಳ್ಳಲು ದೂರುದಾರರ ಮೇಲೆ ಹೊರೆ ವರ್ಗಾಯಿಸಲು ಪ್ರಯತ್ನ ಮಾಡಿದ್ದಾರೆ. ಇದು ಕಾನೂನು ಬಾಹಿರ ವ್ಯವಹಾರವಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.
ಮೊಬೈಲ್ ಇಲ್ಲದೇ ದೂರುದಾರರು ಅನುಭವಿಸಿರುವ ಆರ್ಥಿಕ ನಷ್ಟ ಪರಿಹಾರವಾಗಿ 20,000 ರೂ. ಹಾಗೂ ಕಾನೂನು ಹೋರಾಟದ ವೆಚ್ಚವಾಗಿ 10,000 ಸೇರಿ ಒಟ್ಟು 30 ಸಾವಿರ ರೂ. ನೀಡಬೇಕು. ಜತೆಗೆ ಮೊಬೈಲ್‌ನ ಸಂಪೂರ್ಣ ವೆಚ್ಚ 79,900 ರೂ. ಹಿಂದಿರುಗಿಸಬೇಕು ಎಂದು ಆದೇಶ ಹೊರಡಿಸಿದೆ.