ಶಿರಸಿ: ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಸೋಲಿಗೆ ಜಿಲ್ಲಾ ನಾಯಕರು ಸ್ವತಃ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಹೇಳಿದರು.
ಅವರು ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿ, ನಾನೊಬ್ಬ ಕಾಂಗ್ರೆಸ್ ಕಾರ್ಯಕರ್ತ. ಪಕ್ಷ ಹಾಗೂ ನಾಯಕರು ಹೇಳಿದ ಕೆಲಸ ಮಾಡುತ್ತೇನೆ. ನಂಬಿಕೆ ಇಡುವ ಮನುಷ್ಯ. ಯಾವತ್ತಿಗೂ ಇಟ್ಟ ನಂಬಿಕೆಗೆ ದ್ರೋಹ ಮಾಡಲಾರೆ. ಬಂಗಾರಪ್ಪ ಅವರಿಂದ ಕಲಿತದ್ದು ಇದನ್ನೇ. ಖುರ್ಚಿಗಾಗಿ ಕುಳಿತವನೂ ಅಲ್ಲ. ಪಕ್ಷದ ಏಳ್ಗೆಗೆ ಕೆಲಸ ಮಾಡುತ್ತಿದ್ದೇನೆ. ಮುಂದೆಯೂ ಮಾಡುತ್ತೇನೆ. ಜನರೊಟ್ಟಿಗೆ ಇದ್ದು ಕೆಲಸ ಮಾಡುತ್ತೇನೆ. ಭೀಮಣ್ಣ ಬದಲಾಗೋದಿಲ್ಲ ಎಂದ ಅವರು ಸೋಲಿನ ಕುರಿತು ಜಿಲ್ಲೆಯ ನಾಯಕರು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ ಎಲ್ಲ ಹಂತದ ನಾಯಕರ ಜೊತೆ ಸೇರಿ ಪಕ್ಷ ಸಂಘಟನೆ ಮಾಡಿದ್ದೇವೆ. ಒಂದು ವಯಕ್ತಿಕ ಸೋಲು ಅಳಕು, ಭಯವಿಲ್ಲ. ನಾಯಕರು ಕೊಟ್ಟ ಸಂದೇಶ, ಆದೇಶ ಪಾಲನೆ ಮಾಡಿದ್ದೇವೆ. ಪಕ್ಷದ ಸಂಘಟನೆಗೆ ಸದಸ್ಯರ ಜೊತೆ ಇದ್ದು ಕೆಲಸ ಮಾಡಿದ್ದೇವೆ ಎಂದ ಭೀಮಣ್ಣ, ಮೊನ್ನೆ ಚುನಾವಣೆಯಲ್ಲಿ ಆಕಾಂಕ್ಷಿಯಾಗಿಲ್ಲ. ಕೊನೇ ಹಂತದಲ್ಲಿ ಟಿವಿಯಲ್ಲಿ ಬಂದಾಗ ಗೊತ್ತಾಗಿದೆ ಎಂದರು.
ಗ್ರಾಮ ಪಂಚಾಯತದಲ್ಲಿ ಬೆಂಬಲಿತರು ಕಡಿಮೆ ಇದ್ದರೂ 1300 ಮತಗಳಿಗೂ ಅಧಿಕ ಮತ ಬಂದಿದೆ. ಇದು ಪಕ್ಷದ ಬಲವರ್ಧನೆಯ ಸೂಚಕ. ಆದರೆ, ಯಾವತ್ತೂ ಒಬ್ಬರಿಂದ ಚುನಾವಣೆಯಲ್ಲ. ಸಮೂಹ ಜವಬ್ದಾರಿಯಿಂದ ನೋಡಬೇಕು. ಹತ್ತಾರು ವರ್ಷಗಳ ರಾಜಕಾರಣದಲ್ಲಿ ಏರು ಪೇರು ನೋಡಿದ್ದೇನೆ. ಎಲ್ಲರೂ ಸೇರಿ ಸಾಧಿಸಿದರೆ ಕಾಂಗ್ರೆಸ್ ಗೆ ಗೆಲುವು ದೂರವಲ್ಲ ಎಂದರು.
ಈ ವೇಳೆ ಎಸ್.ಕೆ.ಭಾಗವತ, ದೀಪಕ ದೊಡ್ಡೂರು, ಪ್ರವೀಣ ಮಣ್ಮನೆ ಇತರರು ಇದ್ದರು.