Advertisement
ಮಂಗಳವಾರ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯಲ್ಲಿ ಹುಲಿವೇಷಕ್ಕೆ ಅನುಮತಿ ನೀಡಲು ತೀರ್ಮಾನಿಸಲಾಯಿತು. ಒಂದು ತಂಡದಲ್ಲಿ 10 ವೇಷಧಾರಿಗಳಿಗೆ ಮಾತ್ರ ಅವಕಾಶ. ಹರಕೆ ರೂಪದಲ್ಲಿ ದೇವಸ್ಥಾನಗಳ ಆವರಣ ದೊಳಗೆ ನೀಡುವ ಪ್ರದರ್ಶನಕ್ಕೆ ಮಾತ್ರ ಅವಕಾಶವಿದ್ದು ಸಾಮಾಜಿಕ ಅಂತರ ಕಾಪಾಡುವುದು ಸೇರಿದಂತೆ ಮಾರ್ಗಸೂಚಿಗಳನ್ನು ಪಾಲಿಸಬೇಕು. ನಿಗದಿತ ಅವಧಿಯಲ್ಲಿ ಮಾತ್ರ ಪ್ರದರ್ಶನ ನೀಡಬೇಕು. ಮಾರ್ಗಸೂಚಿಗಳ ಉಲ್ಲಂಘನೆಯಾದರೆ ಅಥವಾ ಅಹಿತಕರ ಘಟನೆ ಸಂಭವಿಸಿದರೆ ಸಂಬಂಧಪಟ್ಟ ದೇವಸ್ಥಾನದ ಆಡಳಿತಾದರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದೆಂದು ನಿರ್ಣಯಿಸಲಾಯಿತು.
ಎಲ್ಲ ದೇವಸ್ಥಾನಗಳಲ್ಲಿಯೂ ದೂರು/ಸಲಹೆ ಪೆಟ್ಟಿಯನ್ನು ಭಕ್ತರ ಗಮನಕ್ಕೆ ಬರುವ ಸ್ಥಳದಲ್ಲಿಯೇ ಇಡಬೇಕು. ಈ ಬಗ್ಗೆ 15 ದಿನಗಳೊಳಗೆ ಎಲ್ಲ ದೇವಸ್ಥಾನಗಳು ಕ್ರಮ ಕೈಗೊಳ್ಳಲು ಸೂಚಿಸಬೇಕೆಂದು ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಅವಧಿ ಪೂರ್ಣಗೊಂಡ ಸುಮಾರು 100 ದೇವಸ್ಥಾನಗಳ ವ್ಯವಸ್ಥಾಪನ ಸಮಿತಿಯನ್ನು ಇದೇ ಸಂದರ್ಭದಲ್ಲಿ ರಚಿಸಲಾಯಿತು. ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ವೆಂಕಟೇಶ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಷೆಕೋಡಿ ಸೂರ್ಯನಾರಾಯಣ ಭಟ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಭುವನಾಭಿರಾಮ ಉಡುಪ, ಎಸ್. ಸಂಜೀವ, ಗೋಪಾಲ ಕುತ್ತಾರ್, ದೇವೇಂದ್ರ ಹೆಗ್ಡೆ, ಶಶಿಕಲಾ, ಪೊಳಲಿ ಗಿರಿಪ್ರಕಾಶ್ ತಂತ್ರಿ ಪಾಲ್ಗೊಂಡಿದ್ದರು. ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಗೃಹ ನಿಗಾವಣೆಯಲ್ಲಿರುವ ಜಿಲ್ಲಾಧಿಕಾರಿಯವರು ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಂಡರು.