ಗದಗ: ಕೆರೆಗಳ ಒತ್ತುವರಿ ತೆರವುಗೊಳಿಸುವುದು ಮತ್ತು ಕೆರೆಗಳ ಪುನರುಜ್ಜೀವನಗೊಳಿಸಿ, ಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಗಳಿಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೂಚಿಸಿದರು.
ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಕುರಿತು ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಕುರಿತು ಕಾರ್ಯನಿರ್ವಹಣಾ ಪ್ರಾಧಿಕಾರವನ್ನು ರಚಿಸಲಾಗಿದೆ. ಕೆರೆಗಳ ಸಮಗ್ರ ಅಭಿವೃದ್ಧಿ ಮತ್ತು ಜೀರ್ಣೋದ್ಧಾರಕ್ಕೆ ಸಂಬಂಧಪಟ್ಟ ಇಲಾಖೆಗಳು, ಸಂಸ್ಥೆಗಳ ಜೊತೆಗೆ ಸಮನ್ವಯತೆ ಸಾಧಿಸಬೇಕು. ಕೆರೆಗಳ ಸಂರಕ್ಷಣೆ ಮತ್ತು ಜೀರ್ಣೋದ್ಧಾರಕ್ಕೆ ಪ್ರಾಥಮಿಕ ಕೆಲಸವೆಂದರೆ, ಸಮೀಕ್ಷೆ ಮತ್ತು ಕೆರೆ ಪ್ರದೇಶದ ಗಡಿ ಗುರುತಿಸುವುದಾಗಿದೆ. ಕೆರೆ ಪ್ರದೇಶದಲ್ಲಿ ಯಾವುದೇ ಒತ್ತುವರಿಗಳು ಆಗದಿರುವುದನ್ನು ಖಚಿತಪಡಿಸಿ ತೆರವುಗೊಳಿಸಬೇಕು. ತೀವ್ರ ನೀರಿನ ಕೊರತೆ ನೀಗಿಸಲು, ಸಸ್ಯ ಸಂಪತ್ತಿಗೆ, ಪ್ರಾಣಿ ಸಂಪತ್ತಿಗೆ ಕುಡಿಯುವುದಕ್ಕೆ ನೀರು ಮತ್ತು ಜಾನುವಾರುಗಳ ಬಳಕೆಗೆ ನೀರಿನ ಲಭ್ಯತೆಗಾಗಿ ಜಲಮೂಲವಾದ ಕೆರೆಗಳ ಸಂರಕ್ಷಣೆ ಮತ್ತು ಪುನಶ್ಚೇತನಗೊಳಿಸುವುದು ಅಗತ್ಯ ಎಂದು ಹೇಳಿದರು.
ಜಿಲ್ಲೆಯ ಎಲ್ಲ ಇಲಾಖೆಗಳ ಒಟ್ಟು 227 ಕೆರೆಗಳಿವೆ ಎಂದು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಕಾರಿ ಅಭಿಯಂತರ ವಿಜಯಕುಮಾರ್ ಎಂ. ಅವರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿ.ಪಂ.ಉಪ ಕಾರ್ಯದರ್ಶಿ ಪ್ರಾಣೇಶ್ ರಾವ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಇದ್ದರು.
••ಜಿಲ್ಲೆ ಕೆರೆ ಸಂರಕ್ಷಣೆ-ಅಭಿವೃದ್ಧಿ ಕುರಿತು ಕಾರ್ಯನಿರ್ವಹಣಾ ಪ್ರಾಧಿಕಾರ ರಚನೆ
••ಜಿಲ್ಲೆಯಲ್ಲಿವೆ ಎಲ್ಲ ಇಲಾಖೆಗಳ ಒಟ್ಟು 227 ಕೆರೆ
••ಸಮೀಕ್ಷೆ-ಕೆರೆ ಪ್ರದೇಶದ ಗಡಿ ಗುರುತಿಸಲು ಸೂಚನೆ
••ಒತ್ತುವರಿ ಖಚಿತಪಡಿಸಿಕೊಂಡು ತೆರವುಗೊಳಿಸಲು ಆದೇಶ