Advertisement

ಬಿಡದಿಯ ಪುನೀತ್‌ ಫಾರಂಗೆ ಜಿಲ್ಲಾಧಿಕಾರಿ ಭೇಟಿ

04:57 PM Oct 30, 2021 | Team Udayavani |

 ರಾಮನಗರ: ದಿವಂಗತ ನಟ ಪುನಿತ್‌ ರಾಜ್‌ ಕುಮಾರ್‌ ಅವರ ಅಂತ್ಯ ಸಂಸ್ಕಾರ ರಾಮನಗರ ಜಿಲ್ಲೆ ಬಿಡದಿ ಹೋಬಳಿ ಶೇಷಗಿರಿಹಳ್ಳಿಯ ಪುನೀತ್‌ ಫಾರಂ ನಡೆಯಲಿದೆಯೇ? ಡಾ.ರಾಜ್‌ ಕುಮಾರ್‌ ಕುಟುಂಬಕ್ಕೆ ಸೇರಿದ ಪುನೀತ್‌ ಫಾರಂಗೆ ಜಿಲ್ಲಾಡಳಿತ ಮತ್ತು ಪೊಲೀಸ್‌ ಅಧಿಕಾರಿಗಳು ಭೇಟಿ ಕೊಟ್ಟು ಪರೀಶಿಲನೆ ನಡೆಸಿದ್ದು ಈ ಅನುಮಾನಕ್ಕೆ ಕಾರಣವಾಗಿದೆ.

Advertisement

ಫಾರಂಗೆ ಅಧಿಕಾರಗಳ ತಂಡ ಭೇಟಿ: ಜಿಲ್ಲಾಧಿಕಾರಿ ಡಾ.ರಾಕೇಶ್‌ ಕುಮಾರ್‌, ಕೇಂದ್ರವಲಯ ಐಜಿಪಿ ಚಂದ್ರಶೇಖರ್‌ ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಎಸ್‌.ಗಿರೀಶ್‌ ಮತ್ತು ಕಂದಾಯ ಅಧಿಕಾರಿಗಳ ತಂಡ ಫಾರಂಗೆ ಭೇಟಿ ಕೊಟ್ಟಿದ್ದರು. ಬೆಂಗಳೂರಿನಲ್ಲಿ ಡಾ.ರಾಜ್‌ ಕುಮಾರ್‌ ಅವರ ಸಮಾಧಿ ಪಕ್ಕ ದಲ್ಲೇ ಪುನೀತ್‌ ರಾಜ್‌ಕುಮಾರ್‌ ಅವರ ಅಂತ್ಯ ಸಂಸ್ಕಾರಕ್ಕೆ ಸರ್ಕಾರ ಅನುಮತಿ ನೀಡಿದೆ. ಆದರೆ ಅವರ ಕುಟುಂಬ ಸದಸ್ಯರ ಅಭಿಪ್ರಾಯ ಇನ್ನು ವ್ಯಕ್ತವಾಗಿಲ್ಲ. ಕುಟುಂಬ ಸದಸ್ಯರು ಹಾಗೊಮ್ಮೆ ಪುನೀತ್‌ ಫಾರಂನಲ್ಲಿ ಅಂತ್ಯ ಸಂಸ್ಕಾರ ನಡೆಸಲು ನಿರ್ಧರಿಸಿದರೆ, ಪುನೀತ್‌ ಫಾರಂನಲ್ಲಿ ಅಗತ್ಯ ವ್ಯವಸ್ಥೆ ಆರಂಭವಾಗಲಿದೆ.

ಫಾರಂ ಮನೆ ನೆನಪು: 1975ರಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರು ಜನನ ತಾಳಿದ ವರ್ಷದಲ್ಲೇ ಡಾ.ರಾಜ್‌ಕುಮಾರ್‌ ಅವರು ಈ ಭೂಮಿಯನ್ನು ಖರೀದಿಸಿದ್ದರು. ಪುನೀತ್‌ ರಾಜಕುಮಾರ್‌ ಅವರು ತಮ್ಮ ಬಾಲ್ಯದ ದಿನಗಳಲ್ಲಿ ಇದೇ ಮನೆ ಯಲ್ಲಿ ಹೆಚ್ಚಾಗಿ ಕಳೆದಿದ್ದರು ಎನ್ನಲಾಗಿದೆ. ಶೇಷಗಿರಿಹಳ್ಳಿಯ ಸರ್ವೆ ಸಂಖ್ಯೆ 72 ಮತ್ತು 73ರಲ್ಲಿ ಒಟ್ಟು 22 ಎಕರೆ ಭೂಮಿ ಯನ್ನು ಖರೀದಿಸಿದ್ದರು. ತದನಂತರದ ವರ್ಷಗಳಲ್ಲಿ 7 ಎಕರೆ ಭೂಮಿಯನ್ನು ಡಾ.ರಾಜ್‌ಕುಮಾರ್‌ ಮಾರಾಟ ಮಾಡಿದ್ದರು. ಉಳಿದ 15 ಎಕರೆ ಭೂಮಿಯನ್ನು ಅವರು ತಮ್ಮ ಐದೂ ಮಂದಿ ಮಕ್ಕಳಿಗೆ ಭಾಗ ಮಾಡಿಕೊಟ್ಟಿದ್ದಾರೆ.

ಇದನ್ನೂ ಓದಿ:- ಸಾರ್ವಜನಿಕರಿಗೆ ನಿಸ್ವಾರ್ಥ ಸೇವೆ ಒದಗಿಸಿ

Advertisement

ಎಲ್ಲರ ಹೆಸರಿಗೂ ಭೂಮಿ ಖಾತೆಯಾಗಿದೆ. ರಾಘವೇಂದ್ರ ರಾಜಕುಮಾರ್‌ ಅವರಿಗೆ 2 ಎಕರೆ 19 ಕುಂಟೆ ಭೂಮಿ, ಲಕ್ಷ್ಮಿ ಗೋವಿಂದರಾಜ್‌ ಅವರಿಗೆ 3 ಎಕರೆ 1 ಕುಂಟೆ, ಪೂರ್ಣಿಮ ರಾಂಕುಮಾರ್‌ ಅವರಿಗೆ 2 ಎಕರೆ 15 ಕುಂಟೆ, ಶಿವರಾಜ್‌ ಕುಮಾರ್‌ ಅವರಿಗೆ 1 ಎಕರೆ, ಪುನೀತ್‌ರಾಜ್‌ ಕುಮಾರ್‌ ಅವರಿಗೆ 2 ಎಕರೆ ಭೂಮಿ ಯನ್ನು ಭಾಗವಾಗಿ ಕೊಡಲಾಗಿದೆ ಎಂಬ ಮಾಹಿತಿ ದೊರಕಿದೆ. ಬೆಂಗಳೂರು ಮೈಸೂರು ಹೆದ್ದಾರಿ ರಸ್ತೆ ವಿಸ್ತರಣೆಯಾಗುತ್ತಿದ್ದು, 1 ಎಕರೆಯಷ್ಟು ಪ್ರಮಾಣದ ಭೂಮಿ ಸ್ವಾಧೀನವಾಗಿದ್ದು, 13.8 ಎಕರೆ ಭೂಮಿ ಮಾತ್ರ ಕುಟುಂಬದ ಬಳಿ ಇದೆ.

ವಿಶ್ರಾಂತಿ ಪಡೆಯುತ್ತಿದ್ದ ಅಪ್ಪಾಜಿ: ಪುನೀರ್‌ ಫಾರಂನಲ್ಲಿ ಡಾ.ರಾಜ್‌ ಕುಟುಂಬ ಮನೆಯೊಂದನ್ನು ನಿರ್ಮಿಸಿಕೊಂಡಿದ್ದಾರೆ. ಡಾ.ರಾಜ್‌ಕುಮಾರ್‌ ಅವರು ಆಗಾಗ್ಗೆ ಇಲ್ಲಿಗೆ ಭೇಟಿ ಕೊಟ್ಟು ವಿಶ್ರಾಂತಿ ಪಡೆಯುತ್ತಿದ್ದರು. ಈ ಜಮೀನು ಪುನೀತ್‌ ರಾಜ್‌ಕುಮಾರ್‌ ಅವರ ಮೆಚ್ಚಿನ ಸ್ಥಳವೂ ಆಗಿತ್ತು. ರಾಜ್‌ ಕುಮಾರ್‌ ಅವರ ತಾಯಿ ಲಕ್ಷ್ಮಮ್ಮ ಮತ್ತು ಸಹೋದರ ವರದರಾಜು ಅವರ ಸಮಾಧಿಯೂ ಇದೇ ಫಾರಂನಲ್ಲಿದೆ. ಡಾ. ರಾಜ್‌ಕುಮಾರ್‌ ಅವರು ನಿಧನ ಹೊಂದಿದಾಗ ಅವರ ಪಾರ್ಥಿವ ಶರೀರವನ್ನು ಪುನೀತ್‌ ಫಾರಂನಲ್ಲೇ ಸಮಾಧಿ ಮಾಡಬೇಕು ಎಂಬ ಕಾರಣಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಅಂತ್ಯ ಸಂಸ್ಕಾರವನ್ನು ಬೆಂಗಳೂರಿನಲ್ಲಿ ನೆರೆವೇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next