Advertisement

ಕೋಟಿವೃಕ್ಷ ಅಭಿಯಾನ ಯಶಸ್ಸಿಗೆ ಜಿಲ್ಲಾಧಿಕಾರಿ ಪಾಟೀಲ ಮನವಿ

11:44 AM Jul 09, 2019 | Suhan S |

ವಿಜಯಪುರ: ಜಿಲ್ಲೆಯಲ್ಲಿ ಬರುವ ಆಗಸ್ಟ್‌ 4ರಂದು ಕೋಟಿವೃಕ್ಷ ಅಭಿಯಾನದಡಿ ವೃಕ್ಷೋತ್ಥಾನ-ಮ್ಯಾರಥಾನ್‌ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜಿಲ್ಲೆಯ ಅರಣ್ಯ ಪ್ರದೇಶ ಹೆಚ್ಚಿಸುವ ಉದ್ದೇಶ ಮಾತ್ರವಲ್ಲದೇ ಜಿಲ್ಲೆಯ ಜನರ ಆರೋಗ್ಯ, ಉತ್ತಮ ಪರಿಸರ ರೂಪಿಸುವಲ್ಲಿಯೂ ಸಹಕಾರಿಯಾಗಲಿದ್ದು, ಈ ಕಾರ್ಯಕ್ರಮದ ಯಶಸ್ವಿಗೆ ಸಂಘ-ಸಂಸ್ಥೆಗಳು ಸೇರಿದಂತೆ ಸಾರ್ವಜನಿಕರು ಕೈ ಜೋಡಿಸುವಂತೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಕೋರಿದ್ದಾರೆ.

Advertisement

ಪ್ರವಾಸೋದ್ಯಮ ಇಲಾಖೆ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದ ಸಹಭಾಗಿತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಕೋಟಿವೃಕ್ಷ ಅಭಿಯಾನ ಕಾರ್ಯಕ್ರಮ ಆಯೋಜಿಸುವ ಕುರಿತ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ವೃಕ್ಷೋತ್ಥಾನ ಅಂಗವಾಗಿ ಹಮ್ಮಿಕೊಂಡಿರುವ ವಿವಿಧ ವಿಭಾಗಗಳ ಮ್ಯಾರಥಾನ್‌ಗಳಲ್ಲಿ ಸಾರ್ವಜನಿಕರು ಸಾಮಾಜಿಕ ಜವಾಬ್ದಾರಿಯೊಂದಿಗೆ ಭಾಗವಹಿಸಬೇಕು. ಪ್ರತಿಯೊಬ್ಬರು ಒಂದೊಂದು ಸಸಿ ನೆಡಬೇಕು ಹಾಗೂ ಅದನ್ನು ಪೋಷಿಸಬೇಕು. ಸರ್ವರ ಸಹಭಾಗಿತ್ವದಿಂದ ವೃಕ್ಷೋತ್ಥಾನ ಯಶಸ್ವಿಗೆ ಕೈ ಜೋಡಿಸಬೇಕು ಎಂದರು.

ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಶಿಕ್ಕಲಗಾರ ಮಾತನಾಡಿ, ಅರಣ್ಯ ಇಲಾಖೆಯಿಂದ ಈವರೆಗೆ 73 ಲಕ್ಷ ಸಸಿಗಳನ್ನು ಜಿಲ್ಲೆಯಾದ್ಯಂತ ಬೆಳೆಸಲಾಗಿದೆ. ಕೋಟಿವೃಕ್ಷ ಅಭಿಯಾನಕ್ಕೆ ಪೂರಕವಾಗಿ ನಮ್ಮ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ ಎಂದು ಇಲಾಖೆಯಲ್ಲಿ ಕೈಗೊಂಡ ಕಾರ್ಯಕ್ರಮಗಳ ಕುರಿತು ವಿವರಿಸಿದರು.

ಬಿಎಲ್ಡಿಇಎ ಸಂಸ್ಥೆ ದೈಹಿಕ ಶಿಕ್ಷಣ ಪ್ರಾಧ್ಯಾಪಕ ಎಚ್.ಎಸ್‌. ಕೋರಿ ಮಾತನಾಡಿ, ವೃಕ್ಷೋತ್ಥಾನ ಅಂಗವಾಗಿ ಆಗಸ್ಟ್‌ 4ರಂದು ಹಾಫ್‌ ಮ್ಯಾರಾಥಾನ್‌-2019 ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಯಶಸ್ವಿಗಾಗಿ ವಿವಿಧ ವಿಭಾಗಗಳ 18 ಸಮಿತಿಗಳನ್ನು ರಚಿಸಲಾಗಿದೆ. ಜಿಲ್ಲಾಡಳಿತ, ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿದೆ ಎಂದರು.

Advertisement

ಜಿಲ್ಲೆಯಲ್ಲಿ ಕ್ರೀಡಾಪಟುಗಳಿಗೆ ಕೊರೆಯಿಲ್ಲ. ಆದರೆ ಅವರಿಗೆ ಕ್ರೀಡೆಗೆ ವ್ಯವಸ್ಥಿತ ಆಯೋಜನೆಯ ಅಗತ್ಯವಿದೆ. ಜಿಲ್ಲೆ, ರಾಜ್ಯ ಸೇರಿದಂತೆ ದೇಶದ ವಿವಿಧ ಭಾಗಗಳಿಂದ 15 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಸುಮಾರು 500 ಸ್ವಯಂ ಸೇವಕರು, 150 ದೈಹಿಕ ಶಿಕ್ಷಕರ ಅಗತ್ಯವಿದೆ. ಭಾಗವಹಿಸುವವರಿಗೆ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಮ್ಯಾರಾಥಾನ್‌ನಲ್ಲಿ ಭಾಗವಹಿಸುವ ಎಲ್ಲರಿಗೂ ಪದಕ ನೀಡಲಾಗುವುದು ಎಂದು ಮ್ಯಾರಾಥಾನ್‌ ಕುರಿತು ವಿವಿಧ ಮಾಹಿತಿ ನೀಡಿದರು.

ಮಾಜಿ ಶಾಸಕ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ವೃಕ್ಷೋತ್ಥಾನದಲ್ಲಿ ಎಲ್ಲರೂ ಸ್ವಯಂ ಪ್ರೇರಿತವಾಗಿ ಭಾಗವಹಿಸಬೇಕು. ಈ ಕುರಿತು ವಿವಿಧ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ಒದಗಿಸಬೇಕು. ಈಗಾಗಲೇ 75 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಕೋಟಿವೃಕ್ಷ ಯೋಜನೆಗೆ ಇನ್ನೂ 25 ಲಕ್ಷ ಸಸಿ ನೆಡುವ ಅಗತ್ಯವಿದೆ. ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಸಸಿ ನೆಡಲು ಮುಂದಾಗಬೇಕು ಎಂದು ಹೇಳಿದರು.

ಸಿದ್ದೇಶ್ವರ ಸಂಸ್ಥೆ ಸಂ.ಗು. ಸಜ್ಜನ ಮಾತನಾಡಿ, ಸಚಿವ ಎಂ.ಬಿ. ಪಾಟೀಲ ಅವರ ವಿಶೇಷ ಆಸಕ್ತಿಯಿಂದ ಸಿದ್ದೇಶ್ವರ ಸ್ವಾಮಿಗಳ ಆಶೀರ್ವಾದದಿಂದ ಕೋಟಿ ವೃಕ್ಷ ಅಭಿಯಾನ ಯಶಸ್ವಿಯತ್ತ ಸಾಗುತ್ತಿದ್ದು, ಮುಂದಿನ ಪೀಳಿಗೆಗೆ ಉತ್ತಮ ಪರಿಸರದ ಕೊಡುಗೆ ನೀಡುವ ನಿಟ್ಟಿನಲ್ಲಿ ಎಲ್ಲರೂ ಜೊತೆಗೂಡಿ ಸಸಿಗಳನ್ನ ನೆಡುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು. ಹಾಫ್‌ ಮ್ಯಾರಾಥಾನ್‌-2019 ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು. ಮುರುಗೇಶ ಪಟ್ಟಣಶೆಟ್ಟಿ, ಉಪ ಮೇಯರ್‌ ಗೋಪಾಲ ಘಟಕಾಂಬಳೆ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸ್ವಯಂ ಸೇವಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next