Advertisement

ನಂದಿಹಳ್ಳಿಯಲ್ಲಿ ಜಿಲ್ಲಾಧಿಕಾರಿ ಸಂಧಾನ ಸಭೆ

04:54 PM May 24, 2022 | Team Udayavani |

ಕಾರಟಗಿ: ಗುಂಪು ಘರ್ಷಣೆ ನಡೆದ ತಾಲೂಕಿನ ನಂದಿಹಳ್ಳಿ ಗ್ರಾಮಕ್ಕೆ ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಸುರಳ್ಕರ್‌ ಹಾಗೂ ಅಧಿಕಾರಿಗಳು ಸೋಮವಾರ ಭೇಟಿ ಸಂಧಾನ ಸಭೆ ನಡೆಸಿದರು.

Advertisement

ಸಭೆಯಲ್ಲಿ ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಸುರಳ್ಕರ್‌ ಮಾತನಾಡಿ, ಶನಿವಾರ ರಾತ್ರಿ ನಡೆದ ಘಟನೆ ಮರಳು ಸಾಗಾಟಕ್ಕೆ ಸಂಬಂಧಿಸಿದಂತೆ ನಡೆದಿದ್ದು, ಇದು ಕಾನೂನು ಬಾಹಿರ ಚಟುವಟಿಕೆಯಾಗಿದೆ. ಗ್ರಾಮದ ಯಾರೇ ಆಗಲಿ ಮರಳು ಸಾಗಾಟದಲ್ಲಿ ತೊಡಗಿಸಿಕೊಳ್ಳಬಾರದು. ಈಗಾಗಲೇ ಜಿಲ್ಲಾಡಳಿತ ಸಂಪೂರ್ಣ ನಿಗಾವಹಿಸಿದ್ದು, ಅಕ್ರಮದಲ್ಲಿ ತೊಡಗುವವರ ಮೇಲೆ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದರು.

ಹಲ್ಲೆಗೊಳಗಾದವರಿಗೆ ಪಶು ಇಲಾಖೆಯಿಂದ ಪಶುಪಾಲನೆಗೆ, ಕಿರಾಣಿ ಅಂಗಡಿ ತೆರೆಯುವವರಿಗೆ ಸೇರಿದಂತೆ ಯಾವುದೇ ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವವರಿಗೆ ಆದಿ ಜಾಂಬವ ನಿಗಮದಿಂದ ಸಾಲ ಸೌಲಭ್ಯ, ಧನ ಸಹಾಯ, ಇನ್ನು ದಲಿತರು ಸೇರಿದಂತೆ ಎಲ್ಲರಿಗೂ ನಿವೇಶನ ನೀಡುವುದಕ್ಕೆ ಕ್ರಮವಹಿಸುವುದಾಗಿ ಭರವಸೆ ನೀಡಿದರು.

ನಿನ್ನೆಯ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದ್ದು, ಅಪರಾಧಿಗಳನ್ನು ಗುರುತಿಸಿ ಸೂಕ್ತ ಕ್ರಮಕ್ಕೆ ಮುಂದಾಗುತ್ತೇವೆ. ಘಟನೆ ಹಿನ್ನೆಲೆ ಜಿಲ್ಲಾಡಳಿತ ಸೂಕ್ತ ನಿಗಾ ವಹಿಸಿದೆ. ಸಾಮರಸ್ಯ ಮೂಡಿಸಲು ಇನ್ನೊಂದು ಸಾರಿ ಬೇಕಾದರೂ ಸಂಧಾನ ಸಭೆ ಏರ್ಪಡಿಸುವುದಾಗಿ ತಿಳಿಸಿದ ಅವರು, ಸಭೆಯಲ್ಲಿ ಉಪಸ್ಥಿತರಿದ್ದ ವಿವಿಧ ಇಲಾಖೆಯ ತಾಲೂಕು ಅಧಿಕಾರಿಗಳಿಗೆ ಸಮಸ್ಯೆಯನ್ನು ನಿಭಾಯಿಸಿ. ಘಟನೆ ಮರುಕಳಿಸದಂತೆ ಎಚ್ಚರ ವಹಿಸುವಂತೆ ಸೂಚನೆ ನೀಡಿದರು.

ದಲಿತ ಮುಖಂಡರಾದ ಎಚ್‌.ಎನ್‌. ಬಡಿಗೇರ್‌ ಮತ್ತು ಯಲ್ಲಪ್ಪ ಕಟ್ಟಿಮನಿ ಮಾತನಾಡಿ, ಇತ್ತೀಚಿಗೆ ನಂದಿಹಳ್ಳಿ ಸೇರಿ ವಿವಿಧೆಡೆ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮುಖ್ಯವಾಗಿ ದಲಿತರಿಗೆ ರಕ್ಷಣೆಯೊಂದಿಗೆ ಕೇರಿಗಳಿಗೆ ಮೂಲ ಸೌಕರ್ಯ ಹಾಗೂ ಹಲ್ಲೆಗೊಳಗಾದವರಿಗೆ ಆಹಾರ ಕಿಟ್‌, ಧನ ಸಹಾಯ, ಸ್ವಯಂ ಉದ್ಯೋಗಕ್ಕೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡರು.

Advertisement

ಜಿಪಂ ಸಿಇಒ ಪೌಜಿಯಾ ತರನ್ನುಮ್‌, ಎಸ್‌ಪಿ ಅರುಣಾಂಗುÏ ಗಿರಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಚಿದಾನಂದಪ್ಪ, ತಹಸೀಲ್ದಾರ್‌ ರವಿ ಅಂಗಡಿ, ಇಒ ಡಾ| ಆರ್‌. ಮೋಹನ್‌, ಡಿವೈಎಸ್‌ಪಿ ಆರ್‌.ಎಸ್‌. ಉಜ್ಜಿನಿಕೊಪ್ಪ, ಪಿಐ ವೀರಭದ್ರಯ್ಯ ಹಿರೇಮಠ, ಸಮಾಜ ಕಲ್ಯಾಣ ಇಲಾಖೆ ತಾಲೂಕಾಧಿಕಾರಿ ತುಗಲೆಪ್ಪ ದೇಸಾಯಿ, ಸಿಬ್ಬಂದಿ ಗಂಗಪ್ಪ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ, ಸದಸ್ಯ ಜಡಿಯಪ್ಪ ಬೂದಗುಂಪಾ, ಭರತರಾಜ್‌ ಗಂಗಾವತಿ ಇನ್ನಿತರರು ಇದ್ದರು.

ಕಾರಟಗಿ ತಾಲೂಕು ಶಾಂತಿ ಸುವ್ಯವಸ್ಥೆಗೆ ಹೆಸರಾಗಿದೆ. ಆದರೆ ಇತ್ತೀಚಿಗೆ ಮರಳು ತುಂಬುವ ಸಂಬಂಧ ಕೆಲವರು ಗಲಾಟೆ ಮಾಡಿ ಗೊಂದಲ ಮೂಡಿಸುತ್ತಿದ್ದಾರೆ. ಈ ಅಕ್ರಮ ತಡೆಯಲು ಜಿಲ್ಲಾಡಳಿತ ಸದಾ ಎಚ್ಚರಿಕೆಯಿಂದ ಇರುತ್ತದೆ. ಈ ರೀತಿಯ ಘಟನೆಗಳು ಮರುಕಳಿಸಬಾರದು. ಎಲ್ಲರೂ ಸಹೋದರ ಭಾವನೆಯಿಂದ ಇರಬೇಕು. ಪರಸ್ಪರ ಗೌರವ ವಿನಿಮಯವಾಗಲೇಬೇಕು. ನಾವೆಲ್ಲರೂ ಈ ನಿಟ್ಟಿನಲ್ಲಿ ಕೆಲಸ ಮಾಡೋಣ. ಶಾಂತಿಯನ್ನು ಕಾಪಾಡೋಣ.    –ವಿಕಾಸ್‌ ಕಿಶೋರ್‌ ಸುರಳ್ಕರ್‌, ಜಿಲ್ಲಾಧಿಕಾರಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next