Advertisement

ಅಗತ್ಯವಿದ್ದಲ್ಲಿ ಟ್ಯಾಂಕರ್‌ ನೀರಿಗೆ ಜಿಲ್ಲಾಧಿಕಾರಿ ಸೂಚನೆ

11:13 AM Jun 02, 2019 | Team Udayavani |

ಧಾರವಾಡ: ಜಿಲ್ಲೆಯ ಪ್ರತಿಯೊಬ್ಬ ವ್ಯಕ್ತಿಗೂ ಪ್ರತಿದಿನ ಕನಿಷ್ಠ 55 ಲೀಟರ್‌ ನೀರು ಪೂರೈಸಲೇಬೇಕು. ಈ ಪ್ರಮಾಣದ ನೀರಿನ ಕೊರತೆ ಇರುವ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕವಾದರೂ ಕುಡಿಯುವ ನೀರು ಪೂರೈಸುವಂತೆ ಜಿಲ್ಲಾಧಿಕಾರಿ ದೀಪಾ ಚೋಳನ್‌ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದರು.

Advertisement

ಜೂ. 12ರಂದು ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಎಲ್ಲ ಜಿಲ್ಲೆಗಳ ಡಿಸಿ ಮತ್ತು ಸಿಇಒಗಳ ವಿಶೇಷ ಸಮ್ಮೇಳನ ಏರ್ಪಡಿಸಿರುವ ಹಿನ್ನೆಲೆಯಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಪೂರೈಕೆ ನೀತಿ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಗೆ ಪ್ರತಿದಿನ ಕನಿಷ್ಠ 55 ಲೀಟರ್‌ ನೀರು ಅಗತ್ಯವಿದೆ. ಈ ಪ್ರಮಾಣದ ನೀರಿನ ಸೌಲಭ್ಯವಿರದ ಗ್ರಾಮಗಳಿಗೆ ತಕ್ಷಣದಿಂದಲೇ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಸಬೇಕು. ಹೆಚ್ಚು ಜಲಮೂಲ ಇರುವ ಕೊಳವೆಬಾವಿಗಳನ್ನು ಬಾಡಿಗೆ ಪಡೆದು ಸಾರ್ವಜನಿಕರಿಗೆ ನೀರು ಒದಗಿಸಬೇಕು. ಮೇವು ಮತ್ತು ಕೊಳವೆಬಾವಿಗಳ ಬಾಕಿ ಮೊತ್ತವನ್ನು ವಿಳಂಬ ಮಾಡದೇ ಪಾವತಿ ಮಾಡಬೇಕು ಎಂದರು.

ಸದ್ಯಕ್ಕೆ ಕೆಲವು ಹಳ್ಳಿಗಳಲ್ಲಿ ಪ್ರತಿವ್ಯಕ್ತಿಗೆ ತಲಾ 35 ಲೀಟರ್‌ ವರೆಗೂ ನೀರು ಪೂರೈಕೆಯಾಗುತ್ತಿದೆ. ಅಂತಹ ಗ್ರಾಮಗಳನ್ನು ಪಟ್ಟಿ ಮಾಡಿ ಅವುಗಳಿಗೆ ಟ್ಯಾಂಕರ್‌ ಅಥವಾ ಪರ್ಯಾಯ ಮೂಲಗಳ ಮೂಲಕ ನೀರು ಪೂರೈಸಬೇಕು. ಟಾಸ್ಕ್ಫೋರ್ಸ್‌ ಅಡಿ ಕೊಳವೆಬಾವಿಗಳನ್ನು ಆಳಗೊಳಿಸುವ ಮತ್ತು ಪುನಶ್ಚೇತನಗೊಳಿಸುವ ಕಾಮಗಾರಿಗಳು ಬಹುತೇಕ ಯಶಸ್ವಿಯಾಗಿ ನಡೆಯುತ್ತಿವೆ. ಈ ಕೊಳವೆಬಾವಿಗಳ ಪ್ರಯೋಜನ ಗ್ರಾಮೀಣ ಜನರಿಗೆ ಸಿಗಬೇಕು ಎಂದು ಸೂಚಿಸಿದರು.

ಬೀಜ ದಾಸ್ತಾನಿಗೆ ಸೂಚನೆ: ಮುಂಗಾರು ಹಂಗಾಮಿಗೆ ಬೀಜ, ರಸಗೊಬ್ಬರ ದಾಸ್ತಾನು, ಇನ್‌ಪುಟ್ ಸಬ್ಸಿಡಿ ಪಾವತಿ, ಸಾಮಾಜಿಕ ಭದ್ರತಾ ಯೋಜನೆಗಳಲ್ಲಿನ ಫಲಾನುಭವಿಗಳಿಗೆ ಆಧಾರ್‌ ಸಂಪರ್ಕ ಕಲ್ಪಿಸಬೇಕು. 94ಸಿ ಮತ್ತು 94ಸಿಸಿ ಅಡಿ ಬಾಕಿ ಇರುವ ಅಕ್ರಮ ಸಕ್ರಮ ಯೋಜನೆಯ ಕಾರ್ಯಗಳನ್ನು ಪೂರ್ಣಗೊಳಿಸಬೇಕು. ಅರಣ್ಯ ಹಕ್ಕು ಕಾಯ್ದೆಯಡಿ ಗ್ರಾಮಮಟ್ಟದ ಸಮಿತಿಗಳ ಪುನಾರಚನೆ ಆಗಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

Advertisement

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸ್ಮಶಾನ ಭೂಮಿ ಅಭಿವೃದ್ಧಿ, ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿ, ಮಾತಪೂರ್ಣ, ಮಾತೃಶ್ರೀ, ಅನ್ನಭಾಗ್ಯ, ಅನಿಲ ಭಾಗ್ಯ ಹಾಗೂ ನಗರೋತ್ಥಾನ ಸೇರಿದಂತೆ ವಿವಿಧ ಯೋಜನೆ ಪ್ರಗತಿ ಮಾಹಿತಿಯನ್ನು ನಿಗದಿತ ಮಾದರಿಯಲ್ಲಿ ಹಾಗೂ ಸೂಕ್ತ ಟಿಪ್ಪಣಿಯೊಂದಿಗೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಕೂಡಲೇ ಸಲ್ಲಿಸಬೇಕು ಎಂದು ಡಿಸಿ ಸೂಚಿಸಿದರು.

ಪಾಲಿಕೆ ಆಯುಕ್ತ ಪ್ರಶಾಂತಕುಮಾರ್‌ ಮಿಶ್ರಾ, ಅಪರ ಜಿಲ್ಲಾಧಿಕಾರಿ ಡಾ| ಸುರೇಶ ಇಟ್ನಾಳ, ಎಸಿ ಮಹಮ್ಮದ್‌ ಜುಬೇರ್‌, ಉಪಅರಣ್ಯ ಸಂರಕ್ಷಣಾಧಿಕಾರಿ ಮಹೇಶಕುಮಾರ ಸೇರಿದಂತೆ ಜಿಲ್ಲೆಯ ಎಲ್ಲ ತಹಶೀಲಾರರು, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next