ಮಡಿಕೇರಿ: ಬಲಮುರಿ ನದಿಯಲ್ಲಿ ವಾಹನಗಳನ್ನು ತೊಳೆಯುವುದನ್ನು ಸಂಪೂರ್ಣವಾಗಿ ನಿಷೇಧಿ ಸಬೇಕು. ಪಿ.ಡಿ.ಒ. ಅವರಿಂದ ವರದಿ ತರಿಸಿಕೊಂಡು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಕೊಡಗು ಜಿಲ್ಲೆಯ ಕಾವೇರಿ ನದಿ ನೀರಿನ ಸಂರಕ್ಷಣೆ ಬಗ್ಗೆ ಬುಧವಾರ ನಡೆದ ಸಭೆಯಲ್ಲಿ ಪರಿಸರ ಅಧಿಕಾರಿಯವರಿಗೆ ಜಿಲ್ಲಾಧಿಕಾರಿ ಡಾ| ರಿಚರ್ಡ್ ವಿನ್ಸೆಂಟ್ ಡಿ’ಸೋಜಾ ಅವರು ಸೂಚನೆ ನೀಡಿದ್ದಾರೆ.
ಹಾರಂಗಿ ಹಿನ್ನೀರಿಗೆ ಕಾಫಿ ತ್ಯಾಜ್ಯವನ್ನು ಬಿಡುತ್ತಿರುವ ದೂರು ಕೇಳಿ ಬಂದಿದ್ದು, ಪರಿಸರ ಅಧಿಕಾರಿಯವರು ಸ್ಥಳ ಪರಿಶೀಲನೆ ಮಾಡಿ ಕ್ರಮಕೈಗೊಳ್ಳುವಂತೆ ಸೂಚಿಸಿದರು. ಜಿಲ್ಲೆಯಲ್ಲಿ ಹೆಚ್ಚು ಶುಂಠಿ ತೊಳೆಯುವ ಘಟಕಗಳನ್ನು ಪರಿಶೀಲಿಸಿ ಶುಂಠಿ ತೊಳೆದ ತ್ಯಾಜ್ಯದ ನೀರನ್ನು ನದಿಗೆ ಬಿಡದಂತೆ ಕ್ರಮಕೈಗೊಳ್ಳುವಂತೆ ಪರಿಸರ ಅಧಿಕಾರಿಗೆ ತಿಳಿಸಿದರು.
ಜಿಲ್ಲೆಯಲ್ಲಿ ಕಾವೇರಿ ನದಿಯು 84 ಕಿ.ಮೀ. ಹರಿವು ವ್ಯಾಪ್ತಿಯನ್ನು ಒಳಗೊಂಡಿದ್ದು, ನದಿ ತಟದಲ್ಲಿ ಬರುವಂತಹ ಪಟ್ಟಣ ಗ್ರಾಮಗಳಲ್ಲಿ ಸಾರ್ವಜನಿಕರ ಸಂಪರ್ಕ ಸಭೆಯನ್ನು ಕರೆದು ಅಹವಾಲುಗಳನ್ನು ಸ್ವೀಕರಿಸಿ ನದಿಯ ಮಾಲಿನ್ಯವನ್ನು ತಡೆಗಟ್ಟುವಲ್ಲಿ ಸೂಕ್ತ ಸಹಕಾರವನ್ನು ಸಾರ್ವಜನಿಕರಿಂದ ಪಡೆದು ನದಿಗೆ ತ್ಯಾಜ್ಯವನ್ನು ಬಿಡದಂತೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡು ನದಿಯ ರಕ್ಷಣೆಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾರು ಲತಾ ಸೋಮಲ್ ಅವರು ಮಾತನಾಡಿ ಪಿ.ಡಿ.ಒ.ಗಳು ಉತ್ತ ಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರುಗಳು ಸ್ವತ್ಛ ಭಾರತ ಯೋಜನೆಯಡಿ ಬರುವಂತಹ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ.
ಅವರಿಗೆ ಸೂಕ್ತ ಸಲಹೆಗಳನ್ನು ನೀಡುವಂತೆ ನದಿ ಸ್ವತ್ಛತಾ ಆಂದೋಲನಕ್ಕೆ ಸಂಬಂಧಿಸಿದ ವಿವರಗಳನ್ನು ಅವರೊಂದಿಗೆ ಹಂಚಿಕೊಂಡು ಅವರ ಸಹಕಾರವನ್ನು ಪಡೆಯುವಂತೆ ಕಾವೇರಿ ನದಿ ಸ್ವತ್ಛತಾ ಆಂದೋಲನ ಸಂಚಾಲಕರಾದ ಎಂ.ಎನ್. ಚಂದ್ರಮೋಹನ್ ಅವರಿಗೆ ತಿಳಿಸಿದರು.
ಯಾವ ಯಾವ ಪಂಚಾಯಿತಿಗಳಲ್ಲಿ ನದಿ ಸ್ವತ್ಛತೆಗೆ ಸಂಬಂಧಿಸಿದ ಸಮಸ್ಯೆಗಳಿವೆ ಎಂಬುದರ ಬಗ್ಗೆ ಪಟ್ಟಿ ಮಾಡಿ ಸಂಬಂಧಿಸಿದ ಪಿ.ಡಿ.ಒ. ಅವರೊಂದಿಗೆ ಕೈಜೋಡಿಸಿ ಸ್ವತ್ಛತೆ ಕೆಲಸವನ್ನು ಮಾಡುವಂತಾಗಬೇಕು. ಸ್ವತ್ಛ ಭಾರತ ಅಭಿಯಾನದಲ್ಲಿ ಎಲ್ಲರೂ ಮುತುವರ್ಜಿವಹಿಸಿ ಎಲ್ಲರ ಸಹಕಾರದಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು ಎಂದು ಕಾವೇರಿ ನದಿ ಸ್ವತ್ಛತಾ ಆಂದೋಲನದ ಸಂಚಾಲಕರಿಗೆ ಸಲಹೆ ನೀಡಿದರು.
ಸಭೆಯಲ್ಲಿ ಪೊಲೀಸ್ ಉಪ ಅಧೀಕ್ಷಕರು, ಪರಿಸರ ಅಧಿಕಾರಿ, ಮಡಿಕೇರಿ ತಾ. ತಹಶೀಲ್ದಾರರು, ಪ್ರವಾಸೋ ದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಇತರರು ಹಾಜರಿದ್ದರು.