Advertisement

ಕೊನೇ ಹಂತಕ್ಕೆ ಜಿಲ್ಲಾಡಳಿತ ಭವನ ಕಾಮಗಾರಿ  

03:27 PM Apr 30, 2022 | Team Udayavani |

ಬಳ್ಳಾರಿ: ನಗರದ ಸರ್ಕಾರಿ ಅತಿಥಿ ಗೃಹ ಆವರಣದಲ್ಲಿ ಅತ್ಯಂತ ಸುಂದರವಾಗಿ ನಿರ್ಮಾಣವಾಗುತ್ತಿರುವ ಜಿಲ್ಲಾಡಳಿತ ಭವನ ಕಾಮಗಾರಿ ಕೊನೆ ಹಂತಕ್ಕೆ ತಲುಪಿದ್ದು ಶೀಘ್ರದಲ್ಲೇ ಉದ್ಘಾಟನೆಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.

Advertisement

ಸಾರ್ವಜನಿಕರ ಅನುಕೂಲಕ್ಕಾಗಿ ಆಡಳಿತಾತ್ಮಕ ದೃಷ್ಟಿಯಿಂದ ಎಲ್ಲ ಇಲಾಖೆಗಳನ್ನು ಒಂದೇ ಸೂರಿನಡಿ ಸೇರಿಸಬೇಕು ಎಂಬ ಉದ್ದೇಶದಿಂದ ಸರ್ಕಾರಿ ಅತಿಥಿಗೃಹ ಆವರಣದಲ್ಲಿ ಈ ಬೃಹತ್‌ ಜಿಲ್ಲಾಡಳಿತ ಭವನವನ್ನು ನಿರ್ಮಿಸಲಾಗಿದೆ. ಇದರಿಂದ ಸ್ವಂತ ಕಟ್ಟಡವಿಲ್ಲದೆ ನಗರದ ವಿವಿಧ ಬಡಾವಣೆಗಳಲ್ಲಿ ಬಾಡಿಗೆ ಕಟ್ಟಡಗಳಲ್ಲಿ ಇರುವ ಎಲ್ಲ ಇಲಾಖೆಗಳು ಜಿಲ್ಲಾಡಳಿತ ಭವನಕ್ಕೆ ಬರಲಿದ್ದು, ಸಾಲಸೌಲಭ್ಯ, ವಿದ್ಯಾರ್ಥಿ ವೇತನ, ವಿವಿಧ ಯೋಜನೆಗಳಿಗಾಗಿ ನಗರದ ಮೂಲೆ ಮೂಲೆಗಳಲ್ಲಿ ಇರುವ ಕಚೇರಿಗಳನ್ನು ಸಾರ್ವಜನಿಕರು ಹುಡುಕಿಕೊಂಡು ಹೋಗುವುದು ಇನ್ನುಮುಂದೆ ಕೊನೆಯಾಗಲಿದೆ.

ಸ್ವತಂ ಕಚೇರಿಗಳಲ್ಲಿದೆ ನಗರದ ಹಲವು ಪ್ರದೇಶಗಳಲ್ಲಿ ಬಾಡಿಗೆ ಕಟ್ಟಡದಲ್ಲಿರುವ ಕಚೇರಿಗಳಿಗೆ ಸ್ವಂತ ಕಚೇರಿ ಒದಗಿಸಲು ಮತ್ತು ಜಿಲ್ಲಾಧಿಕಾರಿಗಳ ಕೋರ್ಟ್‌ ಸೇರಿದಂತೆ ಇನ್ನಿತರ ಕಚೇರಿಗಳಿಗಾಗಿ ಈ ಜಿಲ್ಲಾಡಳಿತ ಭವನ ನಿರ್ಮಾಣ ಮಾಡಲಾಗಿದೆ. ದಶಕದ ಹಿಂದೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜಿ.ಜನಾರ್ಧನರೆಡ್ಡಿ ಅವರು ಡಿಸಿ, ಎಡಿಸಿ, ಎಸಿ ಕಚೇರಿಗಳನ್ನು ಒಳಗೊಂಡಂತೆ ಜಿಲ್ಲಾ ಮಟ್ಟದ ಎಲ್ಲ ಕಚೇರಿಗಳು ಒಂದೇ ಸೂರಿನಡಿ ತರುವ ಉದ್ದೇಶದಿಂದ ಈ ಜಿಲ್ಲಾಡಳಿತದ ಭವನ ನಿರ್ಮಿಸಲು ಸಂಕಲ್ಪ ಮಾಡಿದ್ದರು.

2010ರಲ್ಲಿ ಅಂದಿನ ಸಿಎಂ ಯಡಿಯೂರಪ್ಪನವರು, ನಗರದ ಕೆರೆ ಪ್ರದೇಶದಲ್ಲಿ ಜಿಲ್ಲಾಡಳಿತ ಭವನ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಿದ್ದರಾದರೂ, ಕಾರಣಾಂತರಗಳಿಂದ ಆ ಭವನವನ್ನು ನಗರದ ಸರ್ಕಾರಿ ಅತಿಥಿಗೃಹ ಆವರಣದಲ್ಲಿ ನಿರ್ಮಿಸಲಾಗಿದೆ. ಕಟ್ಟಡ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಬಣ್ಣವನ್ನು ಬಳಿಯಲಾಗಿದೆ. ಕೊನೆಯ ಹಂತದ ಕಾಮಗಾರಿಗಳು ಬಾಕಿ ಉಳಿದಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ.

ನೂತನ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರ ಕಚೇರಿಗಳನ್ನು ಹಾಲಿ ಐಸಿಹಾಸಿಕ ಕಟ್ಟಡದಲ್ಲೇ ಮುಂದುವರೆಸಿ, ಇನ್ನುಳಿದ ಎಲ್ಲ ಸರ್ಕಾರಿ ಕಚೇರಿಗಳನ್ನು ನೂತನ ಭವನಕ್ಕೆ ಸ್ಥಳಾಂತರಿಸುವ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಅದರಂತೆ ಈ ಕಟ್ಟಡಕ್ಕೆ ಬರಬೇಕಾದ ಕಚೇರಿಗಳಿಗೆ ಈಗಾಗಲೇ ಸ್ಥಳವನ್ನು ಸಹ ನಿಯುಕ್ತಿಗೊಳಿಸಲಾಗಿದೆ. ನೆಲ, ಮೊದಲ ಮತ್ತು ಎರಡನೆ ಮಹಡಿಗಳನ್ನು ಹೊಂದಿರುವ ಜಿಲ್ಲಾಡಳಿತ ಭವನ ಕಟ್ಟಡ ವಿಜಯನಗರ ಶೈಲಿಯನ್ನು ಹೊಂದಿದೆ. ಕಟ್ಟಡದ ನಡು ಮಧ್ಯೆ ನಿರ್ಮಿಸಿರುವ ಗುಮ್ಮಟದ ಮೇಲೆ 10 ಅಡಿಯ ದೇಶದ ಸಿಂಹಲಾಂಚನವನ್ನು ಅಳವಡಿಸಲಾಗಿದೆ. ರಾಜಕುಮಾರ್‌ ರಸ್ತೆಯಿಂದ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ನಡೆಯುತ್ತಿದೆ. ಕಟ್ಟಡದ ಮುಂದೆ ನೀರಿನ ಕಾರಂಜಿ, ಉದ್ಯಾನವನ, ಹಸರೀಕರಣ ಕಾಮಗಾರಿ ಬಾಕಿ ಉಳಿದಿದೆ.

Advertisement

ಕೋವಿಡ್‌, ಮರಳಿನ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಕುಂಟುತ್ತಲೇ ಸಾಗಿ ಬಂದ ಈ ಕಟ್ಟಡದ ಕಾಮಗಾರಿ ಮುಗಿದು ಕಳೆದ ನವೆಂಬರ್‌ ತಿಂಗಳಲ್ಲಿಯೇ ಸಾರ್ವಜನಿಕ ಸೇವೆಗೆ ಅಣಿಯಾಗಲಿದೆ ಎಂದು ಹೇಳಲಾಗಿತ್ತಾದರೂ, ಅದು ಆಗಲಿಲ್ಲ. ಇದೀಗ ಕಾಮಗಾರಿ ಕೊನೆ ಹಂತಕ್ಕೆ ಬಂದು ನಿಂತಿದೆ ಸಾರ್ವಜನಿಕ ಸೇವೆಗೆ ಅಣಿಯಾಗಲು ದಿನಾಂಕ ನಿಗಯಾಗಬೇಕಿದೆ. ಜಿಲ್ಲಾಡಳಿತ ಭವನ ನಿರ್ಮಾಣ ಕಾಮಗಾರಿ ಬಹುತೇಕ ಮುಗಿದಿದೆ. ರಾಜ್‌ಕುಮಾರ್‌ ರಸ್ತೆಯಿಂದ ಸಂಪರ್ಕ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಆದಷ್ಟು ಶೀಘ್ರ ಇದನ್ನು ಸಾರ್ವಜನಿಕ ಸೇವೆಗೆ ಒದಗಿಸಲಾಗುವುದು. -ಪಿ.ಎಸ್. ಮಂಜುನಾಥ್‌, ಅಪರ ಜಿಲ್ಲಾಧಿಕಾರಿ, ಬಳ್ಳಾರಿ

Advertisement

Udayavani is now on Telegram. Click here to join our channel and stay updated with the latest news.

Next