Advertisement

ಮತ ಎಣಿಕೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ

12:16 PM May 15, 2018 | Team Udayavani |

ಬೀದರ: ಜಿಲ್ಲೆಯಲ್ಲಿ ಆರು ವಿಧಾನಸಭಾ ಮತ ಕ್ಷೇತ್ರಗಳ ಚುನಾವಣೆಯ ಮತ ಎಣಿಕೆ ಕಾರ್ಯ ಮೇ 15ರಂದು ಬೆಳಗ್ಗೆ
8 ಗಂಟೆಯಿಂದ ನಗರದ ಬಿ.ವಿ. ಭೂಮರೆಡ್ಡಿ ಕಾಲೇಜು ಕಟ್ಟಡದಲ್ಲಿ ನಡೆಯಲಿದ್ದು, ಎಣಿಕೆ ಪ್ರಕ್ರಿಯೆಗಾಗಿ ಜಿಲ್ಲಾಡಳಿತ
ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

Advertisement

ಪ್ರತಿ ಕ್ಷೇತ್ರದಲ್ಲಿ ಎಣಿಕೆ ಕಾರ್ಯ ಹಿನ್ನೆಲೆಯಲ್ಲಿ ಮೇಲ್ವಿಚಾರಕ ಅಧಿಕಾರಿಗಳು, ಸಹಾಯಕ ಅಧಿಕಾರಿಗಳು ಹಾಗೂ
ಸೂಕ್ಷ್ಮ(ಮೈಕ್ರೋ) ವೀಕ್ಷಕರನ್ನು ನೇಮಕ ಮಾಡಲಾಗಿದೆ. ಮತ ಎಣಿಕೆಗಾಗಿ ಬಸವಕಲ್ಯಾಣ ಮತ್ತು ಹುಮನಾಬಾದ ಕ್ಷೇತ್ರಕ್ಕೆ ತಲಾ ಒಂದು ಕೊಠಡಿ ಮೀಸಲಿರಿಸಲಾಗಿದ್ದು, ಪ್ರತಿ ಕೋಣೆಯಲ್ಲಿ 14 ಟೇಬಲ್‌ಗ‌ಳ ವ್ಯವಸ್ಥೆ ಮಾಡಲಾಗಿದೆ. ಬೀದರ, ಬೀದರ ದಕ್ಷಿಣ, ಭಾಲ್ಕಿ ಮತ್ತು ಔರಾದ ಕ್ಷೇತ್ರಕ್ಕೆ ತಲಾ ಕೊಠಡಿಗಳನ್ನು ಮೀಸಲಿರಿಸಲಾಗಿದ್ದು, ಪ್ರತಿ ಕೋಣೆಯಲ್ಲಿ 7 ಟೇಬಲ್‌ಗ‌ಳನ್ನು ಹಾಕಲಾಗಿದೆ. ಮತ ಎಣಿಕೆ ಕುರಿತಂತೆ ಈಗಾಗಲೇ ನಿಯೋಜಿಸಲಾಗಿರುವ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ.

ಬೀದರ, ಬೀದರ ದಕ್ಷಿಣ ಕ್ಷೇತ್ರದ ಮತ ಎಣಿಕೆಗಾಗಿ ತಲಾ 17 ಸುತ್ತು, ಬಸವಕಲ್ಯಾಣ, ಹುಮನಾಬಾದ, ಭಾಲ್ಕಿ ಮತ್ತು ಔರಾದ ಕ್ಷೇತ್ರದ ಮತ ಎಣಿಕೆಗಾಗಿ ತಲಾ 19 ಸುತ್ತುಗಳ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಪ್ರತಿ ಕೋಣೆಯಲ್ಲಿ ಪ್ರತ್ಯೇಕವಾಗಿ ಅಂಚೆ ಮತಗಳ ಎಣಿಕೆ ನಡೆಯಲಿದ್ದು, ಇದಕ್ಕಾಗಿ ಪ್ರತ್ಯೇತ ಮೈಕ್ರೋ ವೀಕ್ಷಕರು ಮತ್ತು ಇತರ ಸಿಬ್ಬಂದಿ ಇರುವರು. ಮತ ಎಣಿಕೆ ಮುಗಿದ ನಂತರ ಇವಿಎಂ ಯಂತ್ರಗಳ ಮತ ಎಣಿಕೆ ಆರಂಭಿಸಲಾಗುತ್ತಿದೆ.

ಇದರ ಚಿತ್ರೀಕರಣಕ್ಕಾಗಿ ಪ್ರತಿ ಕೊಠಡಿಯಲ್ಲಿ ಸಿಸಿ ಕ್ಯಾಮರಾಗಳನ್ನು ಮತ್ತು ವೆಬ್‌ ಕಾಸ್ಟಿಂಗ್‌ ಅಳವಡಿಸಲಾಗಿದೆ.
ಪ್ರತಿ ಕ್ಷೇತ್ರದ ಒಂದು ಮತ ಗಟ್ಟೆಯ ವಿವಿ ಪ್ಯಾಟ್‌ನ್ನು ರ್‍ಯಾಂಡಂ ಆಗಿ ತೆಗೆದು ಅದರಲ್ಲಿನ ಸ್ಲಿಪ್‌ಗ್ಳನ್ನು ಇವಿಎಂ ಯಂತ್ರದ ಫಲಿತಾಂಶದ ಜತೆಗೆ ತಾಳೆ ಮಾಡಲಾಗುವುದು. ಹೆಚ್ಚಿನ ವಿವಿ ಪ್ಯಾಟ್‌ಗಳ ಸ್ಲಿಪ್‌ ನೋಡಬೇಕಾದರೆ ಅಭ್ಯರ್ಥಿಗಳು ಸ್ಪಷ್ಟ ಕಾರಣ ನೀಡಬೇಕಾಗಿದೆ.

ಮಂಗಳವಾರ ಬೆಳಗ್ಗೆ 7 ಗಂಟೆಗೆ ಎಲ್ಲಾ ಮತ ಎಣಿಕೆ ಸಿಬ್ಬಂದಿಗಳು ಮತ ಎಣಿಕೆ ಕೇಂದ್ರಕ್ಕೆ ತಲುಪಲಿದ್ದು,
ಅಭ್ಯರ್ಥಿಗಳು ಹಾಗೂ ಮತ ಎಣಿಕೆ ಏಜೆಂಟರು ಮತ ಎಣಿಕೆ ಕೇಂದ್ರಕ್ಕೆ ಆಗಮಿಸುವರು. ಬೆಳಗ್ಗೆ 7:45ಕ್ಕೆ ಹಾಜರಿದ್ದವರ ಸಮ್ಮುಖದಲ್ಲಿ ಮತಯಂತ್ರಗಳನ್ನು ಇರಿಸಲಾಗಿರುವ ಭದ್ರತಾ ಕೋಣೆ ಬೀಗ ತೆಗೆದು ಎಣಿಕೆ ಟೇಬಲ್‌ಗ‌ಳಿಗೆ ರವಾನಿಸಲಾಗುತ್ತದೆ. ಬೆಳಗ್ಗೆ 8ಕ್ಕೆ ಸರಿಯಾಗಿ ಮತ ಎಣಿಕೆ ಆರಂಭವಾಗಲಿದೆ. ಪ್ರತಿ ಟೇಬಲ್‌ಗೆ ಒಬ್ಬರು ಏಜೆಂಟರು ಇರಲಿದ್ದಾರೆ. ಮತ ಎಣಿಕೆ ನಡೆಯಲಿರುವ ಭೂಮರೆಡ್ಡಿ ಕಾಲೇಜು ಸುತ್ತಲೂ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಅಲ್ಲಿ ರಾಜಕೀಯ ಪಕ್ಷಗಳ ವಿಜಯೋತ್ಸವ ನಿಷೇಧಿ ಸಲಾಗಿದೆ.

Advertisement

ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್‌ ಅವರು ಭೂಮರೆಡ್ಡಿ ಕಾಲೇಜಿನಲ್ಲಿ ಮತ
ಎಣಿಕೆ ಕಾರ್ಯಕ್ಕೆ ಕೈಗೊಳ್ಳಲಾಗಿರುವ ಸಿದ್ದತೆಗಳನ್ನು ವೀಕ್ಷಿಸಿ ಅಧಿಕಾರಿಗಳಿಗೆ ಅಂತಿಮ ಕ್ಷಣದ ಸಲಹೆ ಹಾಗೂ ಸೂಚನೆಗಳನ್ನು ನೀಡಿದರು. ಚುನಾವಣೆಯ ಪಾಸ್‌ ಇಲ್ಲದೆ ಇರುವವರಿಗೆ ಮತ ಎಣಿಕೆ ಕೇಂದ್ರದಲ್ಲಿ ಪ್ರವೇಶಕ್ಕೆ ಅನುಮತಿ ಇರುವುದಿಲ್ಲ. ಎಣಿಕೆ ಸಿಬ್ಬಂದಿ ಕಡ್ಡಾಯವಾಗಿ ಪಾಸ್‌ಗಳನ್ನು ತರಬೇಕು, ಮತ ಎಣಿಕೆ ಕೇಂದ್ರದ ಪ್ರವೇಶಕ್ಕೆ ಪಾಸ್‌ ಪಡೆದವರು ಮತ ಎಣಿಕೆ ಕೇಂದ್ರದ ಆವರಣದಲ್ಲಿ ಬೆಂಕಿ ಪೊಟ್ಟಣ ಹಾಗೂ ಯಾವುದೇ ರೀತಿಯ
ಆಯುಧಗಳನ್ನು ತರುವಂತಿಲ್ಲ ಎಂದು ಹೇಳಿದರು.

ನಿಷೇಧಾಜ್ಞೆ ಜಾರಿ
ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳ ಚುನಾವಣೆಗೆ ಸಂಬಂಧಿಸಿದಂತೆ ಮತ ಎಣಿಕೆಯು ಮೇ 15ರಂದು ನಗರದ ಬಿವಿಬಿ ಕಾಲೇಜಿನಲ್ಲಿ ನಡೆಯಲಿದೆ. ಮತ ಎಣಿಕೆ ಸಂದರ್ಭದಲ್ಲಿ ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳಲು ಮತ ಎಣಿಕೆ ಕೇಂದ್ರದ ಸುತ್ತಲಿನ 200 ಮೀಟರ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್‌ ಅವರು ಆದೇಶ ಹೊರಡಿಸಿದ್ದಾರೆ. ಮತ ಎಣಿಕೆ ವೇಳೆ ಪಾಸ್‌ಗಳನ್ನು ಹೊಂದಿರುವ ಪಕ್ಷದ ಏಜೆಂಟರು, ಮತ ಎಣಿಕೆಗೆ ಸಂಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಹೊರತುಪಡಿಸಿ ಯಾರೊಬ್ಬರೂ ಮತ ಎಣಿಕೆ ಕೇಂದ್ರದ ಸುತ್ತಲಿನ 200 ಮೀಟರ್‌ ವ್ಯಾಪ್ತಿಯಲ್ಲಿ ಇರುವಂತಿಲ್ಲ.

ಚುನಾವಣೆಯ ಫಲಿತಾಂಶ ಹೊರಬಂದ ನಂತರ ಜಿಲ್ಲೆಯಲ್ಲಿ ಯಾವುದೇ ವ್ಯಕ್ತಿ ಅಥವಾ ಗುಂಪುಗಳು ಮೆರವಣಿಗೆ ಅಥವಾ ರ್ಯಾಲಿಗಳನ್ನು ನಡೆಸುವಂತಿಲ್ಲ. ಮತ ಎಣಿಕೆ ಸಂದರ್ಭದಲ್ಲಿ ಮತ ಎಣಿಕೆ ಕೇಂದ್ರದ ವ್ಯಾಪ್ತಿಯಲ್ಲಿ ಯಾವುದೇ ಆಯುಧಗಳು ಅಥವಾ ವ್ಯಕ್ತಿ ಮತ್ತು ಆಸ್ತಿಗೆ ಹಾನಿ ಮಾಡುವ ಉಪಕರಣಗಳನ್ನು ಒಯ್ಯುವಂತಿಲ್ಲ. ನಿಷೇಧಾಜ್ಞೆಯು ಅಂತ್ಯಕ್ರಿಯೆ ಅಥವಾ ಸ್ಥಳೀಯವಾಗಿ ಅನುಮತಿ ಪಡೆದ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲ. ಮೇ 15ರ ಬೆಳಗ್ಗೆ 6ರಿಂದ ರಾತ್ರಿ 11:45ರ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next