ಗದಗ: ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ದೇಶಾದ್ಯಂತ ಜಾರಿಗೊಳಿಸಿದ್ದ ಲಾಕ್‌ಡೌನ್ ಇತ್ತೀಚೆಗೆ ಸಡಿಲಿಸಲಾಗಿದೆ. ಅಂತಾರಾಜ್ಯ ಪ್ರಯಾಣಕ್ಕೆ ಅವಕಾಶ ಸಿಕ್ಕಿದ್ದು, ಜೂ.2ರಿಂದ ಮುಂಬೈನಿಂದ ಗದಗಗೆ ರೈಲು ಸಂಚಾರ ಆರಂಭವಾಗಲಿದೆ. ಅದರಲ್ಲಿ ನಮ್ಮವರೇ ಆಗಮಿಸುತ್ತಿದ್ದು, ಮುಂದೆ ಎಂತಹ ಪರಿಸ್ಥಿತಿ ಬಂದರೂ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅಭಯ ನೀಡಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಹೊರ ರಾಜ್ಯಗಳಿಂದ ಆಗಮಿಸುವ ಜಿಲ್ಲೆಯ ಜನರನ್ನು ರೈಲು, ಬಸ್ ನಿಲ್ದಾಣಗಳಲ್ಲೇ ಪರೀಕ್ಷಿಸಲು ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಹಾರಾಷ್ಟ್ರದಿಂದ ಬರುವವರೆಲ್ಲರನ್ನು 7 ದಿನ ಸಾಂಸ್ಥಿಕ ನಿಗಾದಲ್ಲಿರಿಸಲು 30 ಕೋವಿಡ್-19 ಕಾಳಜಿ ಕೇಂದ್ರಗಳು ಹಾಗೂ 1325 ಬೆಡ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಈಗ ಆರ್‌ಟಿಪಿಸಿಆರ್ ಯಂತ್ರ ಕಾರ್ಯ ನಿರ್ವಹಣೆ ಆರಂಭಿಸಿದ್ದು ಪ್ರತಿ ದಿನ 100 ಮಾದರಿಗಳನ್ನು ಪರೀಕ್ಷಿಸಲು ಸಾಧ್ಯವಾಗಿದೆ. ಇದೊಂದು ಉತ್ತಮ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.
ಜಿಲ್ಲೆಯ 35 ದೃಢೀಕೃತ ಕೋವಿಡ್-19 ಸೋಂಕು ಪ್ರಕರಣಗಳ ಪೈಕಿ ಓರ್ವ ವ್ಯಕ್ತಿ ಮೃತರಾಗಿದ್ದು 14 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಸದ್ಯ 20 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲೆಯ 3 ಕೋವಿಡ್ ಪ್ರತಿಬಂಧಿತ ವಲಯ (ಕಂಟೈನ್ಮೆಂಟ್ ಝೋನ್)ಗಳ ಪೈಕಿ ರಂಗನವಾಡಾ ಹಾಗೂ ರೋಣದ ಕೃಷ್ಣಾಪುರಗಳನ್ನು ಸಾಮಾನ್ಯ ವಲಯಗಳಾಗಿ ಪರಿವರ್ತಿಸಲಾಗಿದೆ. ಇನ್ನುಳಿದಂತೆ ಗಂಜಿ ಬಸವೇಶ್ವರ ಸರ್ಕಲ್ ಭಾಗದಲ್ಲಿ ಸಕ್ರಿಯ ಪ್ರಕರಣಗಳು ಇರುವುದರಿಂದ ಕಂಟೈನ್ಮೆಂಟ್ ಏರಿಯಾವನ್ನಾಗಿ ಮುಂದುವರಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಇತ್ತೀಚೆಗೆ ಉತ್ತಮ ಮಳೆಯಾಗಿದ್ದು, ಮುಂಗಾರು ಕೃಷಿಗೆ ಪೂರಕ ವಾತಾವರಣ ನಿರ್ಮಾಣಗೊಂಡಿದೆ. ಜಿಲ್ಲೆಯಲ್ಲಿ ಒಟ್ಟು 2.80 ಲಕ್ಷ ಹೆಕ್ಟೇರ್ ಮುಂಗಾರು ಬಿತ್ತನೆ ಗುರಿ ಹಾಕಿಕೊಳ್ಳಲಾಗಿದೆ. ಸದ್ಯ 7,494 ಕ್ವಿಂಟಲ್ ಬಿತ್ತನೆ ಬೀಜ ಹಾಗೂ 14457 ಮೆ.ಟನ್ ರಸಗೊಬ್ಬರ ದಾಸ್ತಾನು ಇದ್ದು, ರೈತರ ಬೇಡಿಕೆಗೆ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು. ಜಿಲ್ಲೆಯಲ್ಲಿ ಒಟ್ಟು 13,434 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಅವರು ಮುಖಕ್ಕೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ ನಿಶ್ಚಿಂತೆಯಿಂದ ಪರೀಕ್ಷೆ ಬರೆಯಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರರೀಕ್ಷೆ ಆರಂಭಕ್ಕೂ ಮುನ್ನವೇ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಲಾಗುವುದು. ಅಗತ್ಯ ಇರುವವರಿಗೆ ಸ್ಥಳದಲ್ಲೇ ಔಷಧ ವಿತರಿಸಲು ಅಗತ್ಯ ಕ್ರಮವಹಿಸಲಾಗಿದೆ. ವಾಹನಗಳ ಸೌಕರ್ಯ ಇರುವ ಪೋಷಕರು ತಾವೇ ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸುವುದು ಒಳಿತು. ಗ್ರಾಮೀಣ ಮಕ್ಕಳ ಅನುಕೂಲಕ್ಕಾಗಿ ಸಾರಿಗೆ ಇಲಾಖೆಗೆ ಉಚಿತ ಪ್ರಯಾಣಕ್ಕೆ ಅನುವು ಮಾಡುವಂತೆ ಸೂಚಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಧಿಕಾರಿ ಎಂ.ಜಿ.ಹಿರೇಮಠ, ಜಿಲ್ಲಾ ಪಂಚಾಯತ್ ಸಿಇಒ ಡಾ|ಆನಂದ ಕೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ ಎನ್. ಉಪಸ್ಥಿತರಿದ್ದರು.