ತುಮಕೂರು: ಕೋವಿಡ್ 19 ಮಹಾಮಾರಿ ರೈತರ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು, ಬೇಸಿಗೆಯ ಸುಡು ಬಿಸಿಲಿನಲ್ಲಿ ಅಂತರ್ಜಲ ಬತ್ತಿ ಹೋಗಿದ್ದರೂ ಸಾಲ ಸೋಲ ಮಾಡಿ ಬೋರ್‌ವೆಲ್ ಕೊರೆಸಿ ಹಣ್ಣು, ತರಕಾರಿ ಬೆಳೆದ ಬೆಳೆಗಾರರ ಬದುಕು ಅಂತಂತ್ರವಾಗಿದ್ದು ನಿರೀಕ್ಷೆಯಷ್ಟು ಬೆಲೆ ಸಿಗದೇ ಕಂಗಾಲಾಗಿದ್ದಾರೆ.
ಬೇಸಿಗೆಯಲ್ಲಿ ಭಾರೀ ಬೇಡಿಕೆಯಾಗಿದ್ದ ಕಲ್ಲಂಗಡಿ, ಕರಬೂಜ, ಪಪ್ಪಾಯಿ, ದಾಳಿಂಬೆ, ಸಪೋಟ, ಬಾಳೆ ಬೆಳೆಗಾರರು ಕೋವಿಡ್ 19 ಮಹಾಮಾರಿಗೆ ಇಡೀದೇಶ ಲಾಕ್ ಡೌನ್ ಆಗಿರುವುದರಿಂದ ಬೆಳೆದ ಹಣ್ಣುಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗದೇ ಸಂಕಷ್ಟ ಪಡುತ್ತಿದ್ದಾರೆ.
ಇದಲ್ಲದೇ ತರಕಾರಿ ಬೆಳೆದ ಬೆಳೆಗಾರರು ತಾವು ಬೆಳೆದ ಬೆಳೆಯನ್ನು ರಸ್ತೆಗೆ ಎಸೆಯುವ ಪರಿಸ್ಥಿತಿ ಬಂದಿದೆ. ಈ ಬಾರಿ ಕಳೆದ ಒಂದು ತಿಂಗಳಿನಿಂದ ಕೊರೊನಾ ಮಹಾ ಮಾರಿಯಿಂದ ತರಕಾರಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲೂ ಸಾಧ್ಯವಾಗಿಲ್ಲ. ಕೋವಿಡ್ 19 ದಿಂದ ಜಾತ್ರೆ, ಉತ್ಸವ, ಮದುವೆ ಸೇರಿದಂತೆ ಎಲ್ಲಾ ಶುಭ ಸಮಾರಂಭಗಳನ್ನು ರದ್ದು ಮಾಡಿದ್ದರಿಂದ ರೈತರು ನಿರೀಕ್ಷೆ ಇಟ್ಟುಕೊಂಡು ಬೆಳೆದ ಬೆಳೆಗೆ ಬೇಡಿಕೆ ಇಲ್ಲದೆ ರೈತರು ತೀವ್ರ ಸಂಕಷ್ಟ ಪಡುತ್ತಿದ್ದಾರೆ.
ಜಿಲ್ಲಾಡಳಿತದಿಂದ ರೈತರಿಗೆ ಸಹಾಯ: ಲಾಕ್‌ಡೌನ್ ಇರುವುದರಿಂದ ರೈತರು ಬೆಳೆದಿರುವ ಕಲ್ಲಂಗಡಿ, ಕರಬೂಜ, ಟೊಮೊಟೋ ಹಾಗೂ ಪಪ್ಪಾಯ ಹಣ್ಣುಗಳನ್ನು ಹಾಪ್ ಕಾಮ್ಸ್ ಹಾಗೂ ವ್ಯಾಪಾರಸ್ಥರನ್ನು ಲಿಂಕ್ ಮಾಡುವ ಮೂಲಕ ಖರೀದಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿ ರೈತರಿಗೆ ಅನುಕೂಲವಾಗಲು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ರೈತರು ಸಂಕಷ್ಟಕ್ಕೆ ಸಿಲುಕಬಾರದು ಎಂಬ ಉದ್ದೇಶದಿಂದ ಕ್ರಮ ಕೈಗೊಂಡಿದ್ದು, ಜಿಲ್ಲೆಗೆ ಅಗತ್ಯವಿರುವಷ್ಟು ಜಿಲ್ಲೆಯಲ್ಲೇ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಚಿತ್ರದುರ್ಗ, ಬೆಂಗಳೂರು ಜಿಲ್ಲೆಗಳಿಗೆ ಕಳುಹಿಸಲು ಹಾಗೂ ನೆರೆಯ ರಾಜ್ಯದ ಅನಂತಪುರದಲ್ಲಿರುವ ವ್ಯಾಪಾರಸ್ಥರನ್ನು ಲಿಂಕ್ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಅಗತ್ಯ ವಸ್ತುಗಳನ್ನು ಎಪಿಎಂಸಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಪ್ರದೇಶ ಗಳಲ್ಲಿ ಮನೆ-ಮನೆಗೆ ಹಾಪ್‌ಕಾಮ್ಸ್ ಮೂಲಕ ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಬೆಳೆದ ಹಣ್ಣುಗಳನ್ನು ಮಾರಾಟ ಮಾಡಲು ರೈತರಿಗೆ ತೊಂದರೆಯಾಗಬಾರದೆಂದು ಸರ್ಕಾರ ಸೂಚಿಸಿರುವ ಹಿನ್ನೆಲೆ ತೋಟಗಾರಿಕೆ ಇಲಾಖೆಯಿಂದ ಖರೀದಿ ಹಣ್ಣು ಗಳನ್ನು ಮಾಡಲಾಗುತ್ತಿದೆ. ರೈತರು ಸಹಾಯ ವಾಣಿ 0816- 29703 10, 0816-2275189ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.
– ಬಿ.ರಘು, ಉಪನಿರ್ದೇಶಕರು ತೋಟಗಾರಿಕೆ ಇಲಾಖೆ
-ಚಿ.ನಿ.ಪುರುಷೋತ್ತಮ್