Advertisement

ಮೇವು ಸಂಗ್ರಹಕ್ಕೆ ಮುಂದಾದ ಜಿಲ್ಲಾಡಳಿತ

04:16 PM Nov 20, 2018 | Team Udayavani |

ಯಾದಗಿರಿ: ಜಿಲ್ಲೆಯಲ್ಲಿ ಬರದ ಸ್ಥಿತಿ ಆವರಿಸಿದ್ದು, ಈಗಾಗಲೇ ಭತ್ತದ ಮೇವನ್ನು ಸುಡದಂತೆ ರೈತರಿಗೆ ಸೂಚಿಸಲಾಗಿದೆ. ಜಾನುವಾರುಗಳಿಗೆ ಮೇವಿನ ಕೊರತೆಯಾದಂತೆ ಪಶುಪಾಲನಾ ಇಲಾಖೆ ಅಧಿಕಾರಿಗಳು ಮೇವನ್ನು ಸಂಗ್ರಹಿಸುತ್ತಿದ್ದಾರೆ.

Advertisement

ಜಿಲ್ಲಾಡಳಿತ ಆದೇಶದ ಮೇರೆಗೆ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯವರು ಯಾದಗಿರಿ ಕೆ. ಸೀಮಾಂತರದಲ್ಲಿನ ರೈತರಿಂದ ಭತ್ತದ ಮೇವನ್ನು ಉಚಿತವಾಗಿ ಪಡೆದು ಬೇಲಗಳನ್ನು ಮಾಡಿಸಿ ಸಂಗ್ರಹಿಸುತ್ತಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಸೋಮವಾರ ಭೇಟಿ ಪರಿಶೀಲನೆ ನಡೆಸಿದರು. ಬರ ಆವರಿಸಿದರೂ ಜಿಲ್ಲಾಡಳಿತ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಅನುಕೂಲ ಮಾಡುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದ್ದ ಸಂದರ್ಭದಲ್ಲಿ ರೈತರು ಕೂಡ ತಮ್ಮ ಜಾನುವಾರುಗಳನ್ನು ಮಾರಾಟಕ್ಕೆ ಮುಂದಾಗುತ್ತಿದ್ದರು, ಜಾನುವಾರುಗಳ ಮೇವಿನ ಕೊರತೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಮೇವು ಸಂಗ್ರಹಕ್ಕೆ ಮುಂದಾಗಿದ್ದು, ಈಗಾಗಲೇ ಸುಮಾರು 5-6 ದಿನಗಳಿಂದ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ| ಶರಣಭೂಪಾಲರೆಡ್ಡಿ ನೇತೃತ್ವದಲ್ಲಿ ಸಂಗ್ರಹ ಕಾರ್ಯ ನಡೆದಿದೆ.

ಈವೆರೆಗೆ ಅಂದಾಜು 50-60 ಟನ್‌ ಮೇವು ಸಂಗ್ರಹವಾಗಿದ್ದು, ಗುರುಮಠಕಲ್‌ ಮತ್ತು ಸುರಪುರದಲ್ಲಿ ಸಂಗ್ರಹಿಸಿಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಅಲ್ಲದೇ ಪಶು ಇಲಾಖೆ ಕೂಡ ಭತ್ತ ಬೆಳೆದ ಜಮೀನಿನ ಮಾಲಿಕರು ಮೇವನ್ನು ಸುಡಬಾರದು ಎಂದು ರೈತರಲ್ಲಿ ಮನವಿ ಮಾಡಿದೆ.

ರೈತರು ಮೇವನ್ನು ಗದ್ದೆಗಳಲ್ಲಿ ಸುಡದೆ ಅವಶ್ಯ ಇರುವ ರೈತರು ಸಂಗ್ರಹಿಸಲು ಕೋರಿದಲ್ಲಿ ಉಚಿತವಾಗಿ ನೀಡಬೇಕು. ಈ ಮೂಲಕ ಮುಂಬರುವ ದಿನಗಳಲ್ಲಿ ಮೇವಿನ ಕೊರತೆಯಾಗದಂತೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸಹಕರಿಸಬೇಕು.  ಎಂ. ಕೂರ್ಮರಾವ್‌, ಜಿಲ್ಲಾಧಿಕಾರಿ ಪ್ರಾಮಾಣಿಕವಾಗಿ ರೈತರು,  ಜಾನುವಾರುಗಳಿಗೆ ಸಹಕಾರಿಯಾಗಬೇಕು. ಅಗತ್ಯ ಇರುವ ಕಡೆಗಳಲ್ಲಿ ಕುಡಿಯುವ ನೀರಿನ ತೊಟ್ಟಿ ನಿರ್ಮಾಣ, ಗೋವು ಶಾಲೆಗಳ ನಿರ್ಮಾಣ ಹಾಗೂ ಮೇವು ಬ್ಯಾಂಕ್‌ ಸ್ಥಾಪನೆ ಮಾಡಬೇಕು. ಈಗಾಗಲೇ ರೈತರು ಜಾನುವಾರುಗಳ ಮಾರಾಟಕ್ಕೆ ಮುಂದಾಗುತ್ತಿದ್ದು, ಪಂಚಾಯಿತಿ ಮಟ್ಟದಲ್ಲಿ ತಲಾವೊಂದರಂತೆ ಮೇವು ಬ್ಯಾಂಕ್‌ ಆರಂಭಿಸಿ ಸಿಬ್ಬಂಧಿಗಳನ್ನು ನೇಮಿಸುವುದು ಸೂಕ್ತ.  ನಿಂಗಣ್ಣ ಜಡಿ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ. 

Advertisement

Udayavani is now on Telegram. Click here to join our channel and stay updated with the latest news.

Next