Advertisement

ಜಿಲ್ಲಾಡಳಿತ ಭರವಸೆ- ಉಪವಾಸ ಅಂತ್ಯ

07:00 AM Apr 10, 2018 | Team Udayavani |

ಉಳ್ಳಾಲ: ಅಮೃತಧಾರಾ ಗೋಶಾಲೆಯಿಂದ ಗೋ ದರೋಡೆ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಳೆದ 9 ದಿನಗಳಿಂದ ಉಪವಾಸ ಸತ್ಯಾಗ್ರಹವನ್ನು ಪೊಲೀಸ್‌ ಇಲಾಖೆ ಮತ್ತು ಜಿಲ್ಲಾಡಳಿತದ ಭರವಸೆಯನ್ನು ಮನ್ನಿಸಿ ಅಂತ್ಯಗೊಳಿಸಲಾಗಿದೆ. ಟಿ.ಜಿ.ರಾಜಾರಾಮ ಭಟ್‌ ಅವರು ಸೋಮವಾರ ರಾತ್ರಿ ಪೇಜಾವರ ಶ್ರೀಗಳಿಂದ ಶ್ರೀಕೃಷ್ಣನ ಪ್ರಸಾದ ಮತ್ತು ಹಾಲು ಸ್ವೀಕರಿಸಿ ಉಪವಾಸ ಸತ್ಯಾಗ್ರಹವನ್ನು ಸ್ಥಗಿತಗೊಳಿಸಿದರು.

Advertisement

ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿದ್ದ ಭಟ್‌ ಅವರನ್ನು ಶನಿವಾರ ರಾತ್ರಿ ದೇರಳಕಟ್ಟೆಯ ಕೆ.ಎಸ್‌. ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಿದ್ದ ಅವರನ್ನು ಸೋಮವಾರ ಸಂಜೆ ಪೊಲೀಸ್‌ ಕಮಿಷನರ್‌ ಟಿ.ಆರ್‌. ಸುರೇಶ್‌ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಗೋಕಳ್ಳರಿಗೆ ಕಠಿನ ಶಿಕ್ಷೆ ಸೇರಿದಂತೆ ಕೆಲವು ಶರತ್ತುಗಳನ್ನು ಮುಂದಿರಿಸಿದ್ದ ರಾಜಾರಾಮ ಭಟ್‌ ಅವರು ಪೊಲೀಸ್‌ ಇಲಾಖೆ ಮತ್ತು ಜಿಲ್ಲಾಡಳಿತ ಅಪರಾಧಿಗಳನ್ನು ಬಂಧಿಸಿ ಕಠಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರಿಂದ ಉಪವಾಸ ಸತ್ಯಾಗ್ರಹ ಕೈಬಿಡಲು ಸಮ್ಮತಿಸಿದರು. ಆಸ್ಪತ್ರೆಯಿಂದ ಬಿಡುಗಡೆಗೊಂಡು ಪುಣ್ಯಕೋಟಿ ನಗರದ ಗೋಶಾಲೆಗೆ ಆಗಮಿಸಿದ ಬಳಿಕ ರಾತ್ರಿ ಗೋಶಾಲೆಗೆ ಆಗಮಿಸಿದ್ದ ಪೇಜಾವರ ಶ್ರೀಗಳಿಂದ ಪ್ರಸಾದ ಮತ್ತು ಹಾಲು ಸ್ವೀಕರಿಸಿ ಉಪವಾಸ ಸತ್ಯಾಗ್ರಹಕ್ಕೆ ಅಂತ್ಯ ಹಾಡಿದರು.

ಈ ಸಂದರ್ಭದಲ್ಲಿ ಪೇಜಾವರ ಶ್ರೀಗಳು ಮಾತನಾಡಿ, ಟಿ.ಜಿ. ರಾಜಾರಾಮ ಭಟ್‌ ಅವರ ಕಾರ್ಯ ದೇಶದ ಗೋ ಉಳಿವಿಗೆ ಪೂರಕವಾಗಿದ್ದು, ಗೋ ರಕ್ಷಣೆ ಆಗಬೇಕು ಎಂದರು. ಟಿ.ಜಿ. ರಾಜಾರಾಮ ಭಟ್‌ ಮಾತನಾಡಿ ಜಿಲ್ಲಾಡಳಿತ ಮತ್ತು ಪೊಲೀಸರ ಮೇಲೆ ಭರವಸೆಯಿಂದ ಉಪವಾಸ ಸತ್ಯಾಗ್ರಹಕ್ಕೆ ತಾತ್ಕಾಲಿಕ ಅಂತ್ಯ ಹಾಡಿದ್ದೇನೆ. ಅಪರಾಧಿಗಳನ್ನು ಬಂಧಿಸಿ ಅವರ ವಿರುದ್ಧ ಕಠಿನ ಕ್ರಮ ಸೇರಿದಂತೆ ಈ ಭಾಗದಲ್ಲಿ ನಡೆಯುತ್ತಿರುವ ಅಕ್ರಮ ಗೋಸಾಗಾಟಕ್ಕೆ ತಡೆ, ಮಾದಕದ್ರವ್ಯ ಸಾಗಾಟ ತಡೆಯುವ ನಿಟ್ಟಿನಲ್ಲಿ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ತಿಳಿಸಿದ್ದು, ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.

ಡಾ| ಕಲ್ಲಡ್ಕ ಪ್ರಭಾಕರ ಭಟ್‌, ಶೈಲಜಾ ಮಂಗಳೂರು, ಪ್ರೊ| ಎಂ.ಬಿ. ಪುರಾಣಿಕ್‌, ಶರಣ್‌ ಪಂಪ್‌ವೆಲ್‌, ಗೋಪಾಲ ಕುತ್ತಾರ್‌, ಕೃಷ್ಣಮೂರ್ತಿ, ಪ್ರಭಾವತಿ, ಸಂತೋಷ್‌ ಕುಮಾರ್‌ ರೈ ಬೋಳಿಯಾರ್‌, ಜಗದೀಶ್‌ ಕುವ್ವೆತ್ತಬೈಲು, ನಂದರಾಜ ಶೆಟ್ಟಿ ಪಿಜಿನಬೈಲು, ರಾಜೇಶ್‌ ಶೆಟ್ಟಿ ಪಜೀರುಗುತ್ತು, ನವೀನ್‌ ಪಾದಲ್ಪಾಡಿ ಉಪಸ್ಥಿತರಿದ್ದರು. ಸೋಮವಾರ ಬೆಳಗ್ಗೆ ಚಕ್ರವರ್ತಿ ಸೂಲಿಬೆಲೆ ಆಗಮಿಸಿ ಭಟ್‌  ಆರೋಗ್ಯ ವಿಚಾರಿಸಿ ಬಳಿಕ ಗೋಶಾಲೆಗೆ ಭೇಟಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next