ಕೆಜಿಎಫ್: ಶಾಸಕಿ ಎಂ.ರೂಪಕಲಾ ಮತ್ತು ಜಿಲ್ಲಾಧಿಕಾರಿ ಸತ್ಯಭಾಮ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದ್ದ ಅಶೋಕನಗರ
ರಸ್ತೆ ಅಗಲೀಕರಣಕ್ಕೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ. ರಸ್ತೆ ಅಗಲೀಕರಣ ಆಗಲೇ ಬೇಕೆಂದು ಪಟ್ಟು ಹಿಡಿದಿದ್ದ ಶಾಸಕಿ ಎಂ. ರೂಪಕಲಾ ಅವರ ಪ್ರಯತ್ನಕ್ಕೆ ಜಯ ಸಿಕ್ಕಿದ್ದು, ಶನಿವಾರದಂದು ರಸ್ತೆ ಪಕ್ಕದಕಟ್ಟಡಗಳ ತೆರವು ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.
ಜಿಲ್ಲಾಧಿಕಾರಿಗಳ ಕಚೇರಿಗೆ ವರ್ಗ: ರಸ್ತೆಯ ಮಧ್ಯದಿಂದ 9 ಮೀಟರ್ ರಸ್ತೆ ವಿಸ್ತರಣೆಗೆ ಸುಮಾರು ಆರು ವರ್ಷಗಳಿಂದ ಅಡಚಣೆ ಉಂಟಾಗಿತ್ತು. ರಸ್ತೆ ಬದಿಯ ವರ್ತಕರು ನ್ಯಾಯಾಲಯ ಮೆಟ್ಟಿಲೇರಿದ್ದರು. ಲೋಕೋ ಪಯೋಗಿ ಇಲಾಖೆ ಕೋರಮಂಡಲ್‌ನಿಂದ ಎಂ.ಜಿ.ವೃತ್ತದವರೆಗೂ 19 ಕೋಟಿ ರೂ. ವೆಚ್ಚದ ಕಾಮಗಾರಿ ನಡೆಸಿತ್ತು. ಆದರೆ ಕೊನೆಯ 200 ಮೀಟರ್ ವ್ಯಾಪ್ತಿಯಲ್ಲಿ ಕಾಮಗಾರಿಗೆ ಅಡ್ಡಿಯಾಗಿತ್ತು. ಕೊನೆಗೆ ಹೈಕೋರ್ಟ್ ಪ್ರಕರಣವನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ವರ್ಗಾಯಿಸಿತು. ಹಿಂದಿನ ಜಿಲ್ಲಾಧಿಕಾರಿ ಮಂಜುನಾಥ್ ಕಟ್ಟಡ ತೆರವಿಗೆ ಆದೇಶ ಹೊರಡಿಸಿದ್ದರು. ಈ ಸಂಬಂಧವಾಗಿ ಬಹು ದಿನಗಳಿಂದ ಪಟ್ಟು ಹಿಡಿದಿದ್ದ ಶಾಸಕಿ ಎಂ. ರೂಪಕ ಲಾ, ಎರಡು ಬಾರಿ ಕೋಲಾರ ದಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದರು.
ಈಚೆಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮಳೆಯಲ್ಲಿಯೇ ನಾಲ್ಕು ಗಂಟೆಗಳ ಕಾಲ ಒಬ್ಬಂಟಿಯಾಗಿ ನಿಂತು ಪ್ರತಿಭಟನೆ ಮಾಡಿದ್ದರು. ಸಂಜೆ ವೇಳೆಗೆ ಶಾಸಕಿಯನ್ನು ಮಾತನಾಡಿಸಲು ಬಂದಿದ್ದ ಜಿಲ್ಲಾಧಿಕಾರಿ ಮೇಲೆ ಶಾಸಕಿ ಹರಿಹಾಯ್ದಿದ್ದರು. ಈ ಸಂದರ್ಭದಲ್ಲಿ ಮಾತಿನ ಚಕಮಕಿಕೂಡ ನಡೆದಿತ್ತು. ಕಾಣದ ಕೈಗಳು ರಸ್ತೆ ವಿಸ್ತರಣೆಗೆ ಅಡ್ಡಿ ಉಂಟು ಮಾಡುತ್ತಿದೆ ಎಂದು ಶಾಸಕಿ ಆರೋಪಿಸಿದ್ದರು. ಈ ಸಂಬಂಧವಾಗಿ ಈ ಬಾರಿ ಅಧಿವೇಶನದಲ್ಲಿ ಜಿಲ್ಲಾಧಿಕಾರಿಗಳ ವರ್ತನೆ ಬಗ್ಗೆ ಮತ್ತು ರಸ್ತೆ ವಿಸ್ತರಣೆ ಬಗ್ಗೆ ಮಾತನಾಡಿ ದ್ದರು. ಈ ಹಿನ್ನೆಲೆಯಲ್ಲಿಕೊನೆಗೂ ರಸ್ತೆಅಗಲೀಕರಣ ಮಾಡಲು ಜಿಲ್ಲಾಡಳಿತ ಹಸಿರು ನಿಶಾನೆ ತೋರಿದೆ.
ಶನಿವಾರದಂದು ಉಪ ವಿಭಾಗಾಧಿಕಾರಿ ಸೋಮಶೇಖರ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.