Advertisement

ಜಿಲ್ಲಾಡಳಿತ ಸಂಕೀರ್ಣ; ಮತ್ತೆ ಸ್ಥಳ ಗೊಂದಲ?

02:07 PM Sep 07, 2018 | Team Udayavani |

ಬೀದರ: ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ಮಾಡಿ ವರ್ಷ ಕಳೆದರೂ ಇಂದಿಗೂ ಸ್ಥಳಗೊಂದಲ ಬಗೆಹರಿಯದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Advertisement

ಕಳೆದ ಕೆಲ ವರ್ಷಗಳಿಂದ ಜಿಲ್ಲಾ ಕಚೇರಿಗಳ ಸಂಕೀರ್ಣ ನಿರ್ಮಾಣ ಕುರಿತು ಸಾಕಷ್ಟು ಚರ್ಚೆಗಳು ನಡೆದಿದ್ದು, ಸದ್ಯ ಇರುವ ಸ್ಥಳದಲ್ಲಿಯೇ ಕಟ್ಟಡ ಕಾಮಗಾರಿ ಪ್ರಾರಂಭಿಸುವಂತೆ ಅನೇಕ ರಾಜಕೀಯ ಮುಖಂಡರು ಆಗ್ರಹಿಸಿದ್ದರು. ಅಂದಿನ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 48 ಕೋಟಿ ರೂ. ಅನುದಾನದ ಸಂಕೀರ್ಣಕ್ಕೆ 2017ರ ಆಗಸ್ಟ್‌ 13ರಂದು ಶಂಕುಸ್ಥಾಪನೆ ಕೂಡ ನೆರವೇರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು ನೂರು ದಿನಗಳನ್ನು ಪೂರೈಸಿದೆ. ಆದರೆ, ಹಳೆ ಕಡತಗಳು ಮಾತ್ರ ಅನುಷ್ಠಾನಕ್ಕೆ ಬರುತ್ತಿಲ್ಲ. ಜಿಲ್ಲೆಯ ಇಬ್ಬರು ಶಾಸಕರಿಗೆ ಕ್ಯಾಬಿನೇಟ್‌ ದರ್ಜೆ ಮಂತ್ರಿ ಭಾಗ್ಯ ಕೂಡ ದೊರಕಿದೆ. ಆದರೆ, ಜಿಲ್ಲೆಯ ಮಹತ್ವದ ಯೋಜನೆಯಲ್ಲೊಂದಾದ ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ ಕಟ್ಟಡ ಕಾರ್ಯಕ್ಕೆ ಯಾರೊಬ್ಬರೂ
ಮುಂದಾಗದಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಈಶ್ವರ್‌ ಖಂಡ್ರೆ ಸಂಕೀರ್ಣ ಕಟ್ಟಡವನ್ನು ನಗರ ಹೊರವಲಯದ ಮಾಮನಕೇರಿ ಸಮೀಪದ ಗುಡ್ಡದಲ್ಲಿ ನಿರ್ಮಿಸಲು ಆಲೋಚನೆ ನಡೆಸಿದರು. ಆದರೆ, ಸಂಸದ ಭಗವಂತ್‌ ಖೂಬಾ ಬಹಿರಂಗವಾಗಿ ಖಂಡ್ರೆ ವಿರುದ್ಧ ಕದನಕ್ಕಿಳಿದಿದ್ದರು. ಖುದ್ದು ಕಾಂಗ್ರೆಸ್‌ ಶಾಸಕರಾದ ವಿಜಯಸಿಂಗ್‌, ರಹೀಂ ಖಾನ್‌, ಪಕ್ಷೇತರ ಶಾಸಕ ಅಶೋಕ್‌ ಖೇಣಿ ಸೇರಿದಂತೆ ಇತರ ಜನಪ್ರತಿನಿಧಿಗಳು ಮಾಮನಕೇರಿ ಸ್ಥಳವನ್ನು ವಿರೋಧಿಸಿದ್ದರು.

ಮಾಮನಕೇರಿ ಸಮೀಪ ಖಂಡ್ರೆ ಕುಟುಂಬಕ್ಕೆ ಸೇರಿದ ಜಮೀನಿದ್ದು, ಅದೇ ಕಾರಣಕ್ಕೆ ಖಂಡ್ರೆ ಆ ಸ್ಥಳ ಕುರಿತು ಒಲವು ಹೊಂದಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ನಂತರ ಅನಿವಾರ್ಯವಾಗಿ ಖಂಡ್ರೆ ತಮ್ಮ ನಿಲುವು ಬದಲಿಸಬೇಕಾಯಿತು. ಬಳಿಕ ಈಗಿರುವ ಜಿಲ್ಲಾಧಿಕಾರಿಗಳ ಕಚೇರಿ ಸಮೀಪವೇ ಕಟ್ಟಲು ತೀರ್ಮಾನಿಸಲಾಯಿತು.

Advertisement

ಟೆಂಡರ್‌ ಕರೆದಿಲ್ಲ: ಜಿಲ್ಲೆಗೆ ಭೇಟಿ ನೀಡಿದ ಸಿದ್ದರಾಮಯ್ಯ ಅವರು ವಿವಿಧ ಅಭಿವೃದ್ಧಿ ಯೋಜನೆಗಳ ಜೊತೆಗೆ ಜಿಲ್ಲಾಡಳಿತ ಸಂಕೀರ್ಣಗಳ ಕಟ್ಟಡಕ್ಕೂ ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ, ಈವರೆಗೂ ಕಾಮಗಾರಿಗೆ ಟೆಂಡರ್‌ ಕರೆಯುವುದಾಗಲಿ ಅಥವಾ ಇನ್ನಿತರ ಪೂರ್ವ ಸಿದ್ಧತಾ ಕಾರ್ಯಗಳು ಕೂಡ ಆರಂಭವಾಗಿಲ್ಲ. ಅಲ್ಲದೇ ಯಾವ ಸ್ಥಳದಲ್ಲಿ ಸಂಕೀರ್ಣದ ಕಟ್ಟಡ ನಿರ್ಮಿಸಬೇಕು ಎಂಬುದೇ ಇಂದಿಗೂ ಸ್ಪಷ್ಟವಾಗಿ ಗೊತ್ತಾಗದ ಸ್ಥಿತಿ ನಿರ್ಮಾಣವಾಗಿದೆ.

ಜನರಿಗೆ ಸಮಸ್ಯೆ: ಈ ಮಧ್ಯದಲ್ಲಿ ನಗರದ ಹೊರವಲಯದ ನೌಬಾದ ಸಮೀಪದ ರೇಷ್ಮೆ ಇಲಾಖೆಯ 38 ಎಕರೆ ಭೂಮಿಯಲ್ಲಿ ಕಟ್ಟಡ ನಿರ್ಮಾಣ ಕುರಿತು ಅಧಿ ಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ನಗರದಿಂದ ಸರಿಸುಮಾರು ಆರು ಕಿ.ಮೀ. ದೂರದ ನೌಬಾದ್‌ ಸಮೀಪದಲ್ಲಿ ಜಿಲ್ಲಾಡಳಿತ ಕಚೇರಿ ಸಂಕೀರ್ಣ ನಿರ್ಮಿಸಿದರೆ ಎರಡೂಮೂರು ತಾಲೂಕುಗಳಿಗೆ ಅನುಕೂಲವಾಗಲಿದೆ ಎಂಬ ಮಾಹಿತಿ ನೀಡಿರುವ ಕುರಿತು ಖುದ್ದು ಜಿಲ್ಲಾ ಉಸ್ತುವಾರಿ ಸಚಿವರೆ ತಿಳಿಸಿದ್ದಾರೆ. ನಗರದಿಂದ ದೂರ ಪ್ರದೇಶದಲ್ಲಿ ಕಚೇರಿಗಳನ್ನು ಸ್ಥಾಪಿಸಿದರೆ ಸಾರ್ವಜನಿಕರಿಗೆ
ತೊಂದರೆಯಾಗುತ್ತದೆ. ಅಲ್ಲದೇ ನಗರದ ಅನೇಕ ವ್ಯಾಪರಸ್ಥರು ಕೂಡ ಸಮಸ್ಯೆ ಎದುರಿಸುವ ಆತಂಕದಲ್ಲಿದ್ದಾರೆ ಎಂಬುದು ಸಾರ್ವಜನಿಕರ ಮಾತು. ಯಾವ ಕಾರಣಕ್ಕೆ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಇದ್ದ ಸ್ಥಳದಲ್ಲಿಯೇ ಯಾಕೆ ಕಟ್ಟಡ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ ಎಂಬ ಹತ್ತಾರು ಪ್ರಶ್ನೆಗಳು ಉದ್ಬವವಾಗಿದ್ದು, ಇದೀಗ ಮತ್ತೂಂದು ವಿವಾದಕ್ಕೆ ಕಾರಣವಾಗಿದೆ.

ಭೂ ಮಾಫಿಯಾ ಶಂಕೆ?: ಈಗಿರುವ ಜಿಲ್ಲಾಧಿಕಾರಿಗಳ ಕಚೇರಿ ಸ್ಥಳದಲ್ಲಿಯೇ ಬಹು ಮಹಡಿ ಕಟ್ಟಡ ನಿರ್ಮಿಸಿ ವಿವಿಧ ಇಲಾಖೆಗಳು ಒಂದೇ ಸೂರಿನಡಿ ಕಾರ್ಯ ನಿರ್ವಹಿಸುವಂತೆ ಮಾಡಬಹುದಾಗಿದೆ. ಅಲ್ಲದೇ ಸಾರ್ವಜನಿಕರಿಗೂ ಕೂಡ ಅನೂಕುಲವಾಗುತ್ತದೆ. ಸದ್ಯ ಇರುವ ಸ್ಥಳ ಬಿಟ್ಟು ನಗರದಿಂದ ಆರು ಕಿ.ಮೀ. ದೂರದಲ್ಲಿ ಕಚೇರಿಗಳು ಇದ್ದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಯಾರಿಗೆ ಲಾಭ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಇಂತಹ ಆಲೋಚನೆ
ನಡೆಸಿದ್ದಾರೆ. ಭೂ ಲಾಬಿ ಕೈವಾಡವಿದೆಯೇ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.

ನಗರದ ದಶ ದಿಕ್ಕುಗಳಲ್ಲಿ ಗುಡ್ಡ ಅಗೆದು ಕಲ್ಲುಗಳನ್ನು ಹೂಳಿರುವ ರಿಯಲ್‌ ಎಸ್ಟೇಟ್‌ ಏಜೆಂಟ್‌ರು ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ ಕಟ್ಟಡ ನಿರ್ಮಾಣ ಸ್ಥಳಕ್ಕಾಗಿ ಕಾಯುತ್ತಿದ್ದಾರೆ. ಮೊದಲು ಮಾಮನಕೇರಿ ಸ್ಥಳ ಗುರುತಿಸಿದಾಗಲೂ ಮಾಮನಕೇರಿ ಸುತ್ತಮುತ್ತಲಿನ ಸಾಕಷ್ಟು ಏಜೆಂಟ್‌ರು ಒಳಗೊಳಗೆ ಸಂತಸ ಪಟ್ಟಿದರು. ಆದರೆ, ಜನಪ್ರತಿನಿಧಿಗಳು, ಸಂಘಟನೆಗಳು ಹಾಗೂ ಮಾಧ್ಯಮಗಳ ಸಂಘಟಿತ ಹೋರಾಟದಿಂದ ಸ್ಥಳ ಜಿಲ್ಲಾಧಿಕಾರಿ
ಕಚೇರಿಗೆ ತಲುಪಿತು. ಈಗ ಎಲ್ಲವೂ ಸುಸೂತ್ರವಾಗಿ ನೆರವೇರಿದೆ ಎಂದುಕೊಂಡರೆ ಅಧಿಕಾರಿಗಳು ಸ್ಥಳ
ಬದಲಾವಣೆಗೆ ವಿಶೇಷ ಆಸಕ್ತಿ ಹೊಂದಿರುವುದು ಹಲವು ಅನುಮಾನ ಹುಟ್ಟು ಹಾಕಿದೆ.

ಈಗಿರುವ ಜಿಲ್ಲಾಧಿಕಾರಿಗಳ ಕಚೇರಿ ಸುತ್ತಮುತ್ತಲಿನ ಸ್ಥಳದಲ್ಲೇ ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣಣ ನಿರ್ಮಾಣ ಮಾಡಲಾಗುವುದು. ಜಿಲ್ಲಾ ಧಿಕಾರಿಗಳು ಕೆಲವು ದಿನಗಳ ಹಿಂದೆ ಸ್ಥಳ ಬದಲಿಸುವ ಕುರಿತು ಚರ್ಚಿಸಿರೆ. ನೌಬಾದ್‌ ಸಮೀಪ ಕಟ್ಟಡ ನಿರ್ಮಿಸಿದರೆ ಎರಡೂಮೂರು ತಾಲೂಕುಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ. ಆದರೆ, ಈ ಬಗ್ಗೆ ಇನ್ನೂ ಯಾವುದೇ ಅಂತಿಮ ನಿರ್ಣಯಕ್ಕೆ ಬಂದಿಲ್ಲ. ಸದ್ಯದಲ್ಲೇ ಸಭೆ ಕರೆದು, ಹಳೆ ಕಡತಗಳನ್ನು ತೆಗೆಸಿ ಚರ್ಚಿಸಲಾಗುವುದು. ಭೂ ಮಾಫಿಯಾ ಒತ್ತಡಕ್ಕೆ ಮಣಿಯುವುದಿಲ್ಲ. ಈ ಹಿಂದೇ ಈ ಕುರಿತು ಅನೇಕ ವಿವಾದಗಳು ಆಗಿದ್ದು, ಸದ್ಯ ಇರುವ ಸ್ಥಳದಲ್ಲಿಯೇ ಕಟ್ಟಡ ನಿರ್ಮಾಣಕ್ಕೆ ತೀರ್ಮಾನಿಸಲಾಗುವುದು.
 ಬಂಡೆಪ್ಪ ಖಾಶೆಂಪೂರ್‌, ಸಚಿವರು

ನಗರದ ಹೃದಯಭಾಗವಾದ ಅಂಬೇಡ್ಕರ್‌ ವೃತ್ತ, ಬಸವೇಶ್ವರ ವೃತ್ತ, ಬೋಮಗೋಂಡೇಶ್ವರ ವೃತ್ತ, ಮಹಾವೀರ ವೃತ್ತ, ರೈಲ್ವೆ ನಿಲ್ದಾಣ, ನಗರ ಸಾರಿಗೆ ನಿಲ್ದಾಣ ಹೀಗೆ ನಗರದ ಪ್ರಮುಖ ಜನನಿಬೀಡು ಪ್ರದೇಶವಾದ ಜಿಲ್ಲಾ ಧಿಕಾರಿಗಳ ಕಚೇರಿ ಸ್ಥಳ ಬಿಟ್ಟು ಬೇರೆಕಡೆಗೆ ಸ್ಥಳಾಂತರಿಸುವುದು ಜನಸಾಮಾನ್ಯರನ್ನು ಹೈರಾಣಾಗಿಸುವ ಕೆಲಸವಾಗುತ್ತದೆ. ಸದ್ಯ
ಇರುವ ಸ್ಥಳದಲ್ಲಿಯೇ ಜಿಲ್ಲಾಡಳಿತ ಸಂಕೀರ್ಣ ನಿರ್ಮಾಣವಾಗಬೇಕು ಎಂದು ಈ ಹಿಂದೆ ಹೋರಾಟ ಮಾಡಲಾಗಿತ್ತು. ಅಲ್ಲದೇ ಅಂದಿನ ಮುಖ್ಯಮಂತ್ರಿಗಳು ಕೂಡ ಅದೇ ಸ್ಥಳ ಗುರುತಿಸಿ ಶಂಕು ಸ್ಥಾಪನೆ ನಡೆಸಿದ್ದಾರೆ. ಬೇರೆ ಸ್ಥಳ ಗುರುತಿಸದೆ ಅಥವಾ ಯಾವುದೇ ವಿವಾದಗಳಿಗೆ ಆಸ್ಪದ ನೀಡದೆ ಇದ್ದ ಸ್ಥಳದಲ್ಲಿಯೇ ಕಾಮಗಾರಿ ಪ್ರಾರಂಭಿಸಬೇಕು.
 ಭಗವಂತ ಖೂಬಾ, ಸಂಸದರು

„ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next