Advertisement
ಬೆಂದೂರ್‌ನ ಈ ರಸ್ತೆಯಲ್ಲಿ ಹಾಗೂ ಸುತ್ತಮುತ್ತ ಹಲವು ಶಿಕ್ಷಣ ಸಂಸ್ಥೆಗಳಿರುವುದರಿಂದ ದಿನನಿತ್ಯ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಈ ನಿಲ್ದಾಣವನ್ನೇ ಅವಲಂಬಿಸಿಕೊಂಡಿದ್ದರು. ಈ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯ ಖಾಸಗಿ ಸಿಟಿ ಬಸ್‌ಗಳು ಬಂದು ಹೋಗುತ್ತಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಅಲ್ಲಿ ಬಸ್ ತಂಗುದಾಣ ಮರು ನಿರ್ಮಾಣ ಮಾಡುವ ಅಗತ್ಯವಿದೆ. ಹೀಗಾಗಿ, ಸುತ್ತ-ಮುತ್ತಲಿನ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ತಂಗುದಾಣ ನಿರ್ಮಿಸುವುದರ ಔಚಿತ್ಯದ ಕುರಿತಂತೆ ‘ಸುದಿನ’ ಕೂಡ ಕೆಲವು ದಿನಗಳ ಹಿಂದೆ ವಿಸ್ತೃತ ವರದಿ ಮಾಡಿತ್ತು.
ಈ ಬಗ್ಗೆ ಆ್ಯಗ್ನೆಸ್ ಕಾಲೇಜಿನ ಪ್ರಾಂಶುಪಾಲ ಡಾ| ಸಿ| ಎಂ. ಜೆಸ್ವೀನಾ ‘ಸುದಿನ’ಕ್ಕೆ ಪ್ರತಿಕ್ರಿಯಿಸಿ, ಬಸ್ ನಿಲ್ದಾಣ ನಿರ್ಮಿಸಲು ನಮ್ಮ ವಿರೋಧವಿಲ್ಲ. ಆದರೆ ಕಾಲೇಜಿನ ಗೇಟ್‌ನಿಂದ ಸ್ವಲ್ಪ ದೂರ ನಿರ್ಮಿಸಬೇಕು ಎನ್ನುವುದು ನಮ್ಮ ಕೋರಿಕೆ. ಕಾಲೇಜಿನಲ್ಲಿ ಸುಮಾರು 6,500 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಹೆಚ್ಚಿನ ಹೆತ್ತವರು ತಮ್ಮ ಮಕ್ಕಳನ್ನು ಸ್ವಂತ ವಾಹನಗಳಲ್ಲಿಯೇ ಕಾಲೇಜಿಗೆ ಕರೆದುಕೊಂಡು ಬರುತ್ತಾರೆ. ಕಾಲೇಜಿನ ಆವರಣದ ಒಳಗೆ ವಾಹನ ಪಾರ್ಕಿಂಗ್‌ಗೆ ಹೆಚ್ಚಿನ ಸ್ಥಳಾವಕಾಶವಿಲ್ಲ. ಇದೇ ಕಾರಣಕ್ಕೆ ನೂರಾರು ವಾಹನಗಳು ಕಾಲೇಜಿನ ಗೇಟ್ ಬಳಿ ಬರುತ್ತವೆ. ಒಂದುವೇಳೆ, ಬಸ್ ನಿಲ್ದಾಣ ಕೂಡ ಇಲ್ಲೇ ನಿರ್ಮಿಸಿದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಕಾಲೇಜಿನ ಗೇಟ್ ಮುಂಭಾಗದಲ್ಲಿ ಬಸ್ ನಿಲ್ದಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದೇವೆ. ಆದರೆ ಗೇಟ್ ನಿಂದ ಸ್ವಲ್ಪ ದೂರದಲ್ಲಿ ನಿರ್ಮಿಸಲು ನಮ್ಮ ವಿರೋಧವಿಲ್ಲ ಎಂದು ತಿಳಿಸಿದ್ದಾರೆ.
Related Articles
ಆ್ಯಗ್ನೆಸ್ ಕಾಲೇಜು ಬಳಿ ಬಸ್ ನಿಲ್ದಾಣ ನಿರ್ಮಿಸುವ ಜಾಗದ ವಿಷಯದಲ್ಲಿ ಕೆಲವರು ತಕರಾರು ಎತ್ತಿದ್ದಾರೆ. ಆದ್ದರಿಂದ ಕಾಮಗಾರಿ ನಿಲ್ಲಿಸಲು ಸೂಚನೆ ನೀಡಿದ್ದೇನೆ. ಸದ್ಯದಲ್ಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಆ ಬಳಿಕ ಕಾಮಗಾರಿ ಮುಂದುವರಿಸಲು ಆದೇಶಿಸುತ್ತೇನೆ.
– ಶಶಿಕಾಂತ್ ಸೆಂಥಿಲ್, ಜಿಲ್ಲಾಧಿಕಾರಿ
Advertisement