Advertisement

Primary school: ಜಿಲ್ಲೆಯ 12 ಪ್ರಾಥಮಿಕ ಶಾಲೆಗೆ ಬೀಗ

03:01 PM Aug 24, 2023 | Team Udayavani |

ಚಾಮರಾಜನಗರ: ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ ಶೂನ್ಯ ದಾಖಲಾತಿ ಕಾರಣ 12 ಕಿರಿಯ ಪ್ರಾಥಮಿಕ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಲು ಕಾಲಾವಕಾಶ ನೀಡಲಾಗಿದ್ದು, ಒಬ್ಬ ವಿದ್ಯಾರ್ಥಿ ದಾಖಲಾದರೂ ತರಗತಿ ಆರಂಭಿಸುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.

Advertisement

ಚಾಮರಾಜನಗರ ತಾಲೂಕಿನ ಸಾಣೆಗಾಲ, ಕಳ್ಳಿàಪುರ, ಪುಟ್ಟೇಗೌಡನಹುಂಡಿ, ಹೊಸಹಳ್ಳಿ ಕಿರಿಯ ಪ್ರಾಥಮಿಕ ಶಾಲೆ, ಕಿರಗಸೂರಿನ ಉರ್ದು ಕಿರಿಯ ಪ್ರಾಥಮಿಕ ಶಾಲೆಯನ್ನು ತಾತ್ಕಾಲಿಕವಾಗಿ ಬಂದ್‌ ಮಾಡಲಾಗಿದೆ. ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ, ಉತ್ತೇನಗೆರೆ ಹುಂಡಿ, ಬರಗಿ ಕಾಲೋನಿ, ಹೊಸಪುರ, ಮರಳಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಕೊಳ್ಳೇಗಾಲ ತಾಲೂಕಿನ ಲಕ್ಕರಸನಪಾಳ್ಯ, ಯಳಂದೂರು ತಾಲೂಕಿನ ದಾಸನಹುಂಡಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಮುಚ್ಚಿರುವ ಶಾಲೆಗಳ ಶಿಕ್ಷಕರನ್ನು ಬೇರೆ ಶಾಲೆಗಳಿಗೆ ನಿಯೋಜನೆ ಮಾಡಲಾಗಿದೆ. ಈ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದರು.

ಒಟ್ಟು 812 ಸರ್ಕಾರಿ ಶಾಲೆ: ಜಿಲ್ಲೆಯಲ್ಲಿ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಸೇರಿ ಒಟ್ಟು 812 ಸರ್ಕಾರಿ ಶಾಲೆಗಳಿವೆ. 322 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿವೆ. 404 ಹಿರಿಯ ಪ್ರಾಥಮಿಕ ಶಾಲೆಗಳಿವೆ. 86 ಸರ್ಕಾರಿ ಪ್ರೌಢಶಾಲೆಗಳಿವೆ. ಈ ಪೈಕಿ ಚಾಮರಾಜನಗರ ತಾಲೂಕಿನಲ್ಲಿ 115 ಕಿರಿಯ, ಪ್ರಾಥಮಿಕ, 138 ಹಿರಿಯ ಪ್ರಾಥಮಿಕ, 29 ಪ್ರೌಢಶಾಲೆ ಸೇರಿ ಒಟ್ಟು 282 ಸರ್ಕಾರಿ ಶಾಲೆಗಳಿವೆ. ಗುಂಡ್ಲುಪೇಟೆ ತಾಲೂಕಿನಲ್ಲಿ 81 ಕಿ.ಪ್ರಾ.ಶಾ, 9 ಹಿ.ಪ್ರಾ. ಶಾ, 20 ಪ್ರೌಢಶಾಲೆಗಳಿದ್ದು, ಒಟ್ಟು 194 ಸರ್ಕಾರಿ ಶಾಲೆಗಳಿವೆ.

ಹನೂರು ತಾಲೂಕಿನಲ್ಲಿ 76 ಕಿ.ಪ್ರಾ.ಶಾ, 77 ಹಿ.ಪ್ರಾ.ಶಾ, 18 ಪ್ರೌಢಶಾಲೆ ಸೇರಿ ಒಟ್ಟು171 ಸರ್ಕಾರಿ ಶಾಲೆಗಳಿವೆ. ಕೊಳ್ಳೇಗಾಲ ತಾಲೂಕಿನಲ್ಲಿ 37 ಕಿ.ಪ್ರಾ.ಶಾ, 54 ಹಿ.ಪ್ರಾ.ಶಾ, 12 ಪ್ರೌಢಶಾಲೆ ಸೇರಿ ಒಟ್ಟು 103 ಸರ್ಕಾರಿ ಶಾಲೆಗಳಿವೆ. ಯಳಂದೂರು ತಾಲೂಕಿನಲ್ಲಿ 13 ಕಿ.ಪ್ರಾ.ಶಾ, 42 ಹಿ.ಪ್ರಾ.ಶಾ, 7 ಪ್ರೌಢಶಾಲೆ ಸೇರಿ ಒಟ್ಟು 62 ಸರ್ಕಾರಿ ಶಾಲೆಗಳಿವೆ.

Advertisement

59,073 ಮಕ್ಕಳ ದಾಖಲಾತಿ: ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಸೇರಿ ಜಿಲ್ಲೆಯಲ್ಲಿ ಈ ಶೈಕ್ಷಣಿಕ ಸಾಲಿನಲ್ಲಿ 59,073 ಮಕ್ಕಳು ಶಾಲೆಗಳಿಗೆ ದಾಖಲಾಗಿದ್ದಾರೆ. ಇವರಲ್ಲಿ 29601 ಬಾಲಕರು, 29,472 ಬಾಲಕಿಯರಿದ್ದಾರೆ. ಚಾಮರಾಜನಗರ ತಾಲೂಕಿನಲ್ಲಿ 21,518 ಮಕ್ಕಳು, ಗುಂಡ್ಲುಪೇಟೆ ತಾಲೂಕಿನಲ್ಲಿ 13,825, ಹನೂರು ತಾಲೂಕಿನಲ್ಲಿ 10,823, ಕೊಳ್ಳೇಗಾಲ ತಾಲೂಕಿನಲ್ಲಿ 7,646 ಹಾಗೂ ಯಳಂದೂರು ತಾಲೂಕಿನಲ್ಲಿ 5,261 ಮಕ್ಕಳು ಸರ್ಕಾರಿ ಶಾಲೆಗಳಿಗೆ ದಾಖಲಾಗಿದ್ದಾರೆ.

ಜಿಲ್ಲೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳು ದಾಖಲಾಗಿದ್ದಾರೆ. ಆದರೆ, 12 ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳೇ ದಾಖಲಾಗದ ಕಾರಣ, ಅವುಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಮುಚ್ಚಿರುವ 12 ಶಾಲೆ 1 ರಿಂದ 4ನೇ ತರಗತಿ ಮಕ್ಕಳಿರುವ ಕಿರಿಯ ಪ್ರಾಥಮಿಕ ಶಾಲೆಗಳು ಎಂಬುದು ವಿಶೇಷ. ಅಲ್ಲಿನ ಜನಸಂಖ್ಯೆ ಕಾರಣ ಆ ವಯೋಮಾನದ ಮಕ್ಕಳಿಲ್ಲದೇ ಇರುವುದು, ಒಂದೋ ಎರಡು ಮಕ್ಕಳನ್ನು ದಾಖಲಿಸಿದರೆ ಸಹಪಾಠಿಗಳ ಕೊರತೆಯಿಂದ ಮಕ್ಕಳ ಕಲಿಕೆಗೆ ಹಿನ್ನಡೆ ಉಂಟಾಗಬಹುದು ಎಂಬ ಧೋರಣೆ, ಪೋಷಕರು ಆಂಗ್ಲ ಮಾಧ್ಯಮ ಶಾಲೆಗಳ ಒಲವು ತೋರುತ್ತಿರುವುದು, ಎಲ್‌ಕೆಜಿ, ಯುಕೆಜಿಗೆ ಖಾಸಗಿ ಶಾಲೆಗಳಿಗೆ ದಾಖಲಿಸಿರುವುದು ಈ ಶಾಲೆಗಳ ಶೂನ್ಯ ದಾಖಲಾತಿಗೆ ಪ್ರಮುಖ ಕಾರಣ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು. ಮುಚ್ಚಿರುವ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಮಾಡಿಸುವ ಸಂಬಂಧ ಈಗಾಗಲೇ 3 ಸಭೆ ನಡೆಸಲಾಗಿದೆ.

ಸಿಆರ್‌ಪಿಗಳು ಸಂಬಂಧಿಸಿದ ಶಾಲೆಗೆ ಭೇಟಿ ನೀಡಿ, ಅಲ್ಲಿನ ಗ್ರಾಮಸ್ಥರ ಜತೆ ಮಾತನಾಡಿ, ದಾಖಲಾತಿ ಆಗದಿರುವುದಕ್ಕೆ ಕಾರಣ ತಿಳಿದು, ಪೋಷಕರ ಮನವೊಲಿಸಿ ಶಾಲೆಗೆ ಮಕ್ಕಳನ್ನು ದಾಖಲಿಸುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರೇಗೌಡ ಅರಸ್‌ “ಉದಯವಾಣಿ’ಗೆ ತಿಳಿಸಿದರು.

ಶೂನ್ಯ ದಾಖಲಾತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಗೆ ಇಲಾಖೆ ಒತ್ತು ನೀಡಿದೆ. ಈಗಾಗಲೇ 3 ಸುತ್ತಿನ ಸಭೆ ನಡೆಸಿದ್ದೇವೆ. ಶಾಲೆಗೆ ಮಕ್ಕಳನ್ನು ದಾಖಲಿಸಿದರೆ, ಬೇರೆಡೆಗೆ ನಿಯೋಜಿಸಿರುವ ಶಿಕ್ಷಕರನ್ನು ಮೂಲ ಶಾಲೆಗೆ ನೇಮಕಾತಿ ಮಾಡಿ ಶಾಲೆ ಆರಂಭಿಸುತ್ತೇವೆ. ರಾಮಚಂದ್ರರಾಜೇ ಅರಸ್‌, ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ.

12 ಶೂನ್ಯ ದಾಖಲಾತಿ ಇರುವುದರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಶಾಲೆಗಳಿಗೆ ಓರ್ವ ವಿದ್ಯಾರ್ಥಿಯಾದರೂ ಸರಿ, ಯಾವುದೇ ಸಂದರ್ಭದಲ್ಲಿ ದಾಖಲಾದರೂ ಆ ಶಾಲೆಯನ್ನು ಪುನಾರಂಭಿಸಲಾಗುವುದು. – ಎನ್‌. ಲಕ್ಷ್ಮಿಪತಿ, ಜಿಲ್ಲಾ ಯೋಜನಾ ಉಪ ಸಮನ್ವಯ ಅಧಿಕಾರಿ, ಸಮಗ್ರ ಶಿಕ್ಷಣ ಕರ್ನಾಟಕ.

ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next