Advertisement

35 ಕೋಟಿ ರೂ.ಪರಿಹಾರ ವಿತರಣೆ : ಜಿಲ್ಲಾಧಿಕಾರಿ ಸ್ಪಷ್ಟನೆ

09:13 PM May 17, 2019 | Team Udayavani |

ಮಡಿಕೇರಿ: ಪ್ರಾಕೃತಿಕ ವಿಕೋಪದಿಂದಾಗಿ ಉಂಟಾದ ಬೆಳೆ ನಾಶ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಾನದಂಡಗಳಿಗೆ ಅನುಗುಣವಾಗಿ ಕೊಡಗಿನ 34 ಸಾವಿರ ಫ‌ಲಾನುಭವಿಗಳ ಖಾತೆಗೆ 35 ಕೋಟಿ ರೂ. ಪರಿಹಾರ ಧನವನ್ನು ಈಗಾಗಲೇ ವರ್ಗಾವಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಸ್ಪಷ್ಟಪಡಿಸಿದ್ದಾರೆ.

Advertisement

ಕಳೆದ ಸಾಲಿನ ಆಗಸ್ಟ್‌ ತಿಂಗಳಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದಾಗಿ ಉಂಟಾದ ಬೆಳೆನಾಶಕ್ಕೆ ಪರಿಹಾರ ನೀಡುವ ಸಂದರ್ಭದಲ್ಲಿ ತಾರತಮ್ಯ ನೀತಿ ಅನುಸರಿಸಿ ಅರ್ಹರಲ್ಲದವರಿಗೂ ಪರಿಹಾರ ನೀಡಲಾಗಿದೆ ಎಂದು ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದ್ದು, ಈ ರೀತಿಯ ಯಾವುದೇ ತಪ್ಪುಗಳು ನಡೆದಿಲ್ಲವೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

3 ಸಾವಿರ ಫ‌ಲಾನುಭವಿಗಳಿಗೆ ಭಾಗಶಃ ಪರಿಹಾರ ನೀಡಿದ್ದು, ಉಳಿದ ಮೊತ್ತವನ್ನು ಒಂದೆರಡು ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು. ಯಾವೊಬ್ಬ ಫ‌ಲಾನುಭವಿಯೂ ಪರಿಹಾರದಿಂದ ವಂಚಿತರಾಗದಿರಲು ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಯಾವುದಾದರೂ ರೈತರಿಗೆ ಪರಿಹಾರ ಲಭಿಸದೇ ಇದ್ದಲ್ಲಿ ತಾವು ನೇರವಾಗಿ ದಾಖಲೆಗಳೊಂದಿಗೆ ನನ್ನ ಕಚೇರಿಯನ್ನು ಸಂಪರ್ಕಿಸಿದ್ದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಜಂಟಿ ಸರ್ವೇಯ ಆಧಾರದ ಮೇಲೆಯೇ ಫ‌ಲಾನುಭವಿಗಳ ಪಟ್ಟಿಯನ್ನು ತಯಾರಿಸಲಾಗಿದೆ. ಸದರಿ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಪಕ್ಷಪಾತ, ತಾರತಮ್ಯ ಮಾಡುವ ಅವಕಾಶ ಇಲ್ಲವೆಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

” ಮಾನದಂಡ ಅನುಸರಿಸಲಾಗಿದೆ ‘
ಕೇಂದ್ರದ ಮಾನದಂಡದಂತೆ ಕಾಫಿ, ಸಂಬಾರ ಬೆಳೆ ಹಾನಿಗೆ ಸಂಬಂಧಿಸಿದಂತೆ ಹೆಕ್ಟೇರಿಗೆ 18 ಸಾವಿರ ರೂ.ನಂತೆ ಗರಿಷ್ಠ 2 ಹೆಕ್ಟೇರ್‌ವರೆಗೆ, ಕೃಷಿ ಭೂಮಿಯಲ್ಲಿನ ಹೂಳನ್ನು ಎತ್ತುವುದಕ್ಕೆ ಹೆಕ್ಟೇರಿಗೆ 12 ಸಾವಿರ ರೂ.ನಂತೆ ಗರಿಷ್ಠ 2 ಹೆಕ್ಟೇರ್‌ವರೆಗೆ, ಭೂಕುಸಿತದಿಂದಾಗಿ ಜಮೀನು ನಾಶವಾದ ಪ್ರಕರಣಗಳಲ್ಲಿ ಹೆಕ್ಟೇರಿಗೆ 37,500 ರಂತೆ ಗರಿಷ್ಠ 2 ಹೆಕ್ಟೇರ್‌ ವರೆಗೆ ಪರಿಹಾರ ನೀಡಲು ಅವಕಾಶವಿದ್ದು, ಅದರಂತೆ ಪರಿಹಾರವನ್ನು ಪಾವತಿ ಮಾಡಲಾಗಿದೆ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ಕಾಫಿ ಮಂಡಳಿಯ ಅಧಿಕಾರಿಗಳು ಜಂಟಿ ಸರ್ವೇ ಕೈಗೊಂಡು ಪ್ರವಾಹ ಹಾಗೂ ಭೂಕುಸಿತದಿಂದ ಬೆಳೆ ಹಾನಿ, ಜಮೀನು ನಾಶ ಹಾಗೂ ಜಮೀನುಗಳಲ್ಲಿ ಹೂಳು ತುಂಬಿರುವ ಪ್ರಮಾಣವನ್ನು ಕಂಡುಹಿಡಿದು ದೃಢೀಕರಿಸಿರುತ್ತಾರೆ. ಎಂದು ಜಿಲ್ಲಾಧಿಕಾರಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next