ಕುಮಟಾ: ಈ ಬಾರಿಯ ಭೀಕರ ಪ್ರವಾಹದಿಂದ ಸಂತ್ರಸ್ತರಾದ ತಾಲೂಕಿನ 25 ಬಡ ಕುಟುಂಬಗಳಿಗೆ ಬೆಂಗಳೂರಿನ ಕೆನರಾ ಶಿಕ್ಷಣ ಸಂಸ್ಥೆ ಕ್ರೂಢೀಕರಿಸಿದ ಪರಿಹಾರ ಸಾಮಾಗ್ರಿಗಳು ಹಾಗೂ 5000 ರೂ. ಮೊತ್ತದ ಚೆಕ್‌ಗಳನ್ನು ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶಾಸಕ ದಿನಕರ ಶೆಟ್ಟಿ ವಿತರಿಸಿದರು.
ನಂತರ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಅತೀ ಹೆಚ್ಚು ಮಳೆಯಾಗಿರುವುದರಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಹಲವು ಖಾಸಗಿ ಸಂಘ-ಸಂಸ್ಥೆಗಳೂ ಸಹ ನೆರೆ ಸಂತ್ರಸ್ತ ಕುಟುಂಬಗಳಿಗೆ ಆಶ್ರಯ ನೀಡುತ್ತಿವೆ ಎಂದ ಅವರು, ದನದ ಕೊಟ್ಟಿಗೆ ಕಳೆದುಕೊಂಡ ಸಂತ್ರಸ್ತರಿಗೆ ಸರ್ಕಾರದ ಮಟ್ಟದಲ್ಲಿ ಪರಿಹಾರ ನೀಡಲು ಅವಕಾಶವಿಲ್ಲ. ಅಂತಹ ಫಲಾನುಭವಿಗಳನ್ನು ಆಯ್ಕೆಮಾಡಿ, ಕೆನರಾ ಶಿಕ್ಷಣ ಸಂಸ್ಥೆ ನೀಡುವ ಪರಿಹಾರವನ್ನು ಅವರಿಗೆ ನೀಡಲಾಗುತ್ತಿದೆ ಎಂದರು.
ಬೆಂಗಳೂರಿನ ಕೆನರಾ ಶಿಕ್ಷಣ ಸಂಸ್ಥೆ ಮುಖ್ಯಸ್ಥ ರಾಜೇಶ ನಾಯ್ಕ ಹಾಗೂ ಪರಿವಾರದ ಕಾರ್ಯ ಶ್ಲಾಘನೀಯ. ಮೂಲತಃ ಹೊನ್ನಾವರ ತಾಲೂಕಿನ ಚಂದಾವರದವರಾದ ಇವರು, ಬೆಂಗಳೂರಿನಲ್ಲಿ ತಮ್ಮ ಸಂಸ್ಥೆಯನ್ನು ಪ್ರಾರಂಭಿಸಿದರೂ, ಸ್ವಂತ ಊರಿನ ಬಗ್ಗೆ ಅಪಾರ ಪ್ರೀತಿ ಹಾಗೂ ಗೌರವ ಹೊಂದಿದ್ದಾರೆ ಎಂದರು.
ಕೆನರಾ ಶಿಕ್ಷಣ ಸಂಸ್ಥೆ ಮುಖ್ಯಸ್ಥ ರಾಜೇಶ ನಾಯ್ಕ ಮಾತನಾಡಿ, ನಮ್ಮ ಶಿಕ್ಷಣ ಸಂಸ್ಥೆ ಪದಾಧಿಕಾರಿಗಳು, ಪಾಲಕರು ಹಾಗೂ ಇನ್ನಿತರರರು ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಜೊತೆಗೆ ಹಲವಾರು ದಾನಿಗಳು ಬೆಡ್‌ಶೀಟ್, ಬಟ್ಟೆ, ಪರಿಹಾರ ಧನ ಸೇರಿದಂತೆ ಅಗತ್ಯ ಬಳಕೆ ವಸ್ತುಗಳನ್ನು ನೀಡಿ, ಸಹಕರಿಸಿದ್ದಾರೆ. ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಸ್ವತ್ಛತೆ, ಶಿಸ್ತು, ಸಂಯಮ ಹಾಗೂ ಸಂಸ್ಕಾರದ ಜೊತೆ ಮಾನವೀಯ ಗುಣಗಳನ್ನು ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುತ್ತದೆ ಎಂದರು.
ತಾಲೂಕಿನ ಅರ್ಹ 25 ನೆರೆ ಸಂತ್ರಸ್ತರಿಗೆ ಪರಿಹಾರದ ಕಿಟ್ ಹಾಗೂ ತಲಾ 5000 ರೂ.ಗಳ ಚೆಕ್‌ಗಳನ್ನು ವಿತರಿಸಲಾಯಿತು. ಮಂಡಲಾಧ್ಯಕ್ಷ ಕುಮಾರ ಮಾರ್ಕಾಂಡೆ, ಬಿಜೆಪಿ ಮುಖಂಡರಾದ ವಿನೋದ ಪ್ರಭು, ಮಹಾಲಕ್ಷ್ಮೀ, ಕೆನರಾ ಫೌಂಡೇಶನ್‌ನ ಮುಖ್ಯಸ್ಥರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಪಕ್ಷದ ಪ್ರಮುಖರಿದ್ದರು.