ಬೈಂದೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಜನಪರ ಆಡಳಿತ ನೀಡುತ್ತಿದೆ. ಸಂಸದರು ಹಾಗೂ ಮುಖ್ಯಮಂತ್ರಿಗಳು ಬೈಂದೂರು ಕ್ಷೇತ್ರದ ಅಭಿವ್ರದ್ದಿಗೆ ವಿಶೇಷ ಒಲವು ತೋರಿಸಿದ್ದು ಕ್ಷೇತ್ರದ ವಿವಿಧ ಆಭಿವೃದ್ಧಿ ಕಾಮಗಾರಿಗಾಗಿ 250 ಕೋಟಿ ರೂ.ಗೂ ಅಧಿಕ ಅನುದಾನ ಶೀಘ್ರ ಮಂಜೂರಾಗಲಿದೆ. ಮಾತ್ರವಲ್ಲದೆ ಅಭಿವೃದ್ಧಿ ಮೂಲಕ ತಾಲೂಕಿನ ಚಿತ್ರಣ ಬದಲಾಗಲಿದೆ ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು.
ಇಲ್ಲಿನ ರೋಟರಿ ಭವನದಲ್ಲಿ ಪಂ. ರಾಜ್, ಕಂದಾಯ ಹಾಗೂ ವಸತಿ ಇಲಾಖೆ ಇದರ ಆಶ್ರಯದಲ್ಲಿ ನೆರೆ ಸಂತ್ರಸ್ತರ ಮನೆ ಪುನರ್ ನಿರ್ಮಾಣ, ದುರಸ್ತಿ ಕಾಮಗಾರಿ ಆದೇಶಪತ್ರ ವಿತರಿಸಿ ಮಾತನಾಡಿದರು.
ಒಟ್ಟು 170 ನೆರೆ ಸಂತ್ರಸ್ತ ಫಲಾನುಭವಿಗಳಿದ್ದು 93 ಫಲಾನುಭವಿಗಳಿಗೆ ಆದೇಶ ಪತ್ರ ನೀಡಲಾಗಿದೆ. ತಾಲೂಕು ಕೇಂದ್ರದ ಪ್ರಮುಖ ಬೇಡಿಕೆಗಳಾದ ಮಿನಿ ವಿಧಾನಸೌಧ, ಕೋರ್ಟ್, ತಾಲೂಕು ಪಂಚಾಯತ್, ಅಗ್ನಿಶಾಮಕ ಕಚೇರಿ ಸೇರಿದಂತೆ ಪ್ರಮುಖ ಕಟ್ಟಡಗಳಿಗೆ ಅನುದಾನ ಬರಲಿದೆ. ವಾರಾಹಿ ನೀರನ್ನು ಬೈಂದೂರು ಕ್ಷೇತ್ರದ ಜನರಿಗೆ ಒದಗಿಸಲು 92 ಕೋಟಿ ರೂಪಾಯಿ ವೆಚ್ಚದ ಯೋಜನೆ ಸಿದ್ದವಾಗಿದೆ. ಭೂರಹಿತರಿಗೆ 94/ಸಿ ಮೂಲಕ ಜಾಗ ನೀಡಲಾಗುವುದು. ಜನಸಾಮಾನ್ಯರ ಮೂಲ ಬೇಡಿಕೆ ಬಗ್ಗೆ ಮೊದಲ ಆದ್ಯತೆ ನೀಡುವುದಾಗಿ ತಿಳಿಸಿದರು.
ಜಿ.ಪಂ. ಸದಸ್ಯ ಸುರೇಶ ಬಟವಾಡಿ, ಗೌರಿ ದೇವಾಡಿಗ, ಬಾಬು ಶೆಟ್ಟಿ, ತಾಲೂಕು ಪಂಚಾಯತ್ ಅಧ್ಯಕ್ಷೆ ಶ್ಯಾಮಲಾ ಕುಂದರ್, ತಾಲೂಕು ಪಂಚಾಯತ್ ಸದಸ್ಯರಾದ ಸುಜಾತಾ ದೇವಾಡಿಗ, ಪುಷ್ಪರಾಜ್ ಶೆಟ್ಟಿ, ಜಗದೀಶ ದೇವಾಡಿಗ, ಯಡ್ತರೆ ಗ್ರಾ.ಪಂ.ಅಧ್ಯಕ್ಷೆ ಮುಕಾಂಬು ದೇವಾಡಿಗ, ಬೈಂದೂರು ಗ್ರಾ.ಪಂ. ಅಧ್ಯಕ್ಷೆ ಭಾಗೀರಥಿ, ಪಡುವರಿ ಗ್ರಾ.ಪಂ.ಅಧ್ಯಕ್ಷೆ ದೀಪಾ ಶೆಟ್ಟಿ, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ನಾಗಭೂಷಣ, ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ| ಪ್ರೇಮಾನಂದ ಉಪಸ್ಥಿತರಿದ್ದರು.
ಶಿರೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು, ಯಡ್ತರೆ ಪಿಡಿಒ ರುಕ್ಕನ ಗೌಡ ವಂದಿಸಿದರು.