Advertisement

ಅಸ್ತಮಾ ರೋಗಿಗಳಿಗೆ ಔಷಧ ವಿತರಣೆ

02:25 PM Jun 09, 2022 | Team Udayavani |

ಕೊಪ್ಪಳ: ಮೃಗಶಿರ ಮಳೆ ಕೂಡುವ ವೇಳೆ ತಾಲೂಕಿನ ಕುಟಗನಹಳ್ಳಿಯ ಕುಲಕರ್ಣಿ ಕುಟುಂಬವು ಪ್ರತಿ ವರ್ಷದಂತೆ ಅಸ್ತಮಾ ರೋಗಿಗಳಿಗೆ ಗಿಡಮೂಲಿಕೆಯ ಔಷಧ ವಿತರಣೆ ಮಾಡುವ ಕಾರ್ಯ ಬುಧವಾರ ಸಾಂಘವಾಗಿ ನೆರವೇರಿಸಿತು. ಸಹಸ್ರಾರು ಸಂಖ್ಯೆಯ ಜನರು ಔಷಧ ಸೇವನೆ ಮಾಡಿದರು.

Advertisement

ತಾಲೂಕಿನ ಕುಟಗನಹಳ್ಳಿಯ ಅಶೋಕರಾವ್‌ ಕುಲಕರ್ಣಿ, ವಾಸುದೇವ ಕುಲಕರ್ಣಿ ಕುಟುಂಬವು ಹಲವು ತಲೆ ಮಾರುಗಳಿಂದಲೂ ಅಸ್ತಮಾ ರೋಗಿಗಳಿಗೆ ಗಿಡಮೂಲಿಕೆಯಿಂದ ಸಿದ್ಧಪಡಿಸಿದ ಔಷಧಿಯನ್ನು ಉಚಿತವಾಗಿ ವಿತರಣೆ ಮಾಡುತ್ತಿದೆ. ಅದರಂತೆ ಈ ವರ್ಷವೂ ಆ ಪರಂಪರೆ ಮುನ್ನಡೆಸಿತು.

ಮೃಗಶಿರ ಮಳೆ ಕೂಡುವ ವೇಳೆ ಕುಲಕರ್ಣಿ ಕುಟುಂಬವು ಸಿದ್ಧಪಡಿಸಿದ ಆರ್ಯುವೇದ ಔಷಧಿ ಸೇವನೆ ಮಾಡಿದರೆ ಅಸ್ತಮಾ ರೋಗ ವಾಸಿಯಾಗುತ್ತೆ ಎನ್ನುವುದು ಈ ಭಾಗದ ಜನರ ನಂಬಿಕೆ. ಈ ಹಿಂದೆ ಈ ಕುಟುಂಬವು ಗ್ರಾಮ ವ್ಯಾಪ್ತಿಯಲ್ಲಿನ ಜನರಿಗೆ ಔಷಧ ಸಿದ್ಧಪಡಿಸಿ ವಿತರಣೆ ಮಾಡುವ ಕಾರ್ಯ ನೆರವೇರಿಸುತ್ತಿತ್ತು. ಆದರೆ ಈ ಔಷಧಿಯಿಂದ ಗುಣಮುಖರಾದವರ ಸಂಖ್ಯೆ ಹೆಚ್ಚುತ್ತಿದ್ದಂತೆ, ರಾಜ್ಯದ ವಿವಿಧ ಭಾಗಗಳ ಜನರು ಕುಟಗನಹಳ್ಳಿಗೆ ಆಗಮಿಸಲಾರಂಭಿಸಿದರು.

ಕುಲಕರ್ಣಿ ಕುಟುಂಬವು ತಮ್ಮೂರು ಸಮೀಪದ ಬೆಟ್ಟ, ಗುಡ್ಡಗಳಲ್ಲಿ ಸಿಗುವ ಗಿಡಮೂಲಿಕೆ ತಂದು ಅವುಗಳನ್ನು ಮಿಶ್ರಣ ಮಾಡಿ ಮಾತ್ರೆಯ ಮಾದರಿಯಂತೆ ಸಿದ್ಧಪಡಿಸಿ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ಗಂಟೆ ಬಾರಿಸಿದ ಬಳಿಕ ಔಷಧ ವಿತರಣೆ ಮಾಡುವ ಕಾರ್ಯ ನೆರವೇರುತ್ತದೆ. ಆ ಬಳಿಕ ಎಲ್ಲರೂ ಎಲೆಯಲ್ಲಿ ಮಾತ್ರೆಯನ್ನು ಪಡೆದು ಸೇವನೆ ಮಾಡಿ ನೀರು ಕುಡಿಯುತ್ತಾರೆ. ಇದನ್ನು ಸೇವಿಸಿದರೆ ಅಸ್ತಮಾ ವಾಸಿಯಾಗುತ್ತದೆ ಎನ್ನುವುದು ಈ ಭಾಗದ ಜನರ ನಂಬಿಕೆಯಾಗಿದೆ.

Advertisement

ಆರೋಗ್ಯವಂತರಿಂದಲೂ ಸೇವನೆ: ಈ ಮೊದಲು ಅಸ್ತಮಾ ರೋಗಿಗಳು ಮಾತ್ರ ಈ ಔಷಧಿ ಸೇವಿಸುತ್ತಿದ್ದರು. ಆದರೆ ಕೆಲ ವರ್ಷಗಳಿಂದೀಚೆಗೆ ಆರೋಗ್ಯವಂತರು ಔಷಧ ಸೇವಿಸುತ್ತಿದ್ದಾರೆ. ಅಸ್ತಮಾ ರೋಗ ಮುಂದೆ ಬಾರದಿರಲಿ. ಆರೋಗ್ಯ ಸದೃಢತೆಗೂ ಈ ಔಷಧ ಸಹಕಾರಿಯಾಗಲಿದೆ ಎಂಬ ಉದ್ದೇಶದಿಂದ ಯುವಕರು, ಹಿರಿಯರು, ಮಹಿಳೆಯರು ಸೇವನೆ ಮಾಡುತ್ತಾರೆ.

ಬುಧವಾರ ಸಹಸ್ರಾರು ಸಂಖ್ಯೆಯ ಜನರು ಮಧ್ಯಾಹ್ನದಿಂದಲೇ ಕುಟಗನಳ್ಳಿ ಗ್ರಾಮದ ಬಯಲು ಪ್ರದೇಶಕ್ಕೆ ಆಗಮಿಸಿ ಔಷಧ ಸೇವನೆ ಮಾಡಿದರು. ಎರಡು ವರ್ಷ ಕೋವಿಡ್‌ ಉಲ್ಬಣದ ಹಿನ್ನೆಲೆಯಲ್ಲಿ ಜನರು ಇಲ್ಲಿಗೆ ಆಗಮಿಸಿ ಔಷಧ ಸೇವನೆ ಮಾಡಲು ಸಾಧ್ಯವಾಗಿರಲಿಲ್ಲ. ಪ್ರಸ್ತುತ ಕೊರೊನಾ ಸೋಂಕು ಇಳಿಮುಖವಾಗಿದ್ದು, ಗ್ರಾಮದ ಬಯಲಲ್ಲೇ ಆಸೀನರಾಗಿ ಔಷಧ ಸೇವಿಸಿದರು.

ಪೊಲೀಸರು ಬಂದೋಬಸ್ತ್ ಕಲ್ಪಿಸಿ ಅವರೇ ಜನರಿಗೆ ಕೆಲವು ಕಡೆ ಔಷಧ ವಿತರಣೆ ಮಾಡಿದರು. ಯುವಕ ಬಳಗ, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಹ ಪಾಲ್ಗೊಂಡು ಜನರಿಗೆ ಔಷಧ ತಲುಪಿಸುವಲ್ಲಿ ಶ್ರಮಿಸಿದರು.

ವಿರಕ್ತಮಠದಿಂದ ಔಷಧ ವಿತರಣೆ:

ಕನಕಗಿರಿ: ಪಟ್ಟಣದ ಸುವರ್ಣಗಿರಿ ಸಂಸ್ಥಾನ ವಿರಕ್ತಮಠದ ವತಿಯಿಂದ ಪ್ರತಿ ವರ್ಷದಂತೆ ಮೃಗಶೀರಾ ಮಳೆ ಕೂಡುವ ಸಮಯದಲ್ಲಿ ಅಸ್ತಮಾ, ದಮ್ಮು, ಕೆಮ್ಮು ರೋಗಗಳಿಂದ ಬಳಲುವ ರೋಗಿಗಳಿಗೆ ಮಠದ ಆವರಣದಲ್ಲಿ ಬುಧವಾರ ಉಚಿತ ಔಷಧ ವಿತರಣೆ ಮಾಡಲಾಯಿತು.

ಪಟ್ಟಣದ ಸುತ್ತಮುತ್ತಲ್ಲಿನ ಗ್ರಾಮದ ನೂರಕ್ಕೂ ಹೆಚ್ಚು ಜನ ಔಷಧ ಪಡೆದುಕೊಂಡರು. ಸುವರ್ಣಗಿರಿ ಸಂಸ್ಥಾನ ವಿರಕ್ತಮಠದ ಡಾ| ಚನ್ನಮಲ್ಲಸ್ವಾಮಿ, ಘಟಪ್ರಭಾದ ಡಾ| ಮಲ್ಲಿಕಾರ್ಜುನಸ್ವಾಮಿ, ನರಗುಂದ ಶಿವಕುಮಾರಸ್ವಾಮಿ, ಹುಕ್ಕೇರಿಯ ಶಿವಬಸವಸ್ವಾಮಿ, ವೀರೇಶ ದೇವರು ಹಾಗೂ ಡಾ| ಬಸವರಾಜ ಹಿರೇಮಠ ಇದ್ದರು. ಸಾರ್ವಜನಿಕರಿಗೆ ಮಠದ ವತಿಯಿಂದ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next