ಕಾಳಗಿ: ದೇಶಕ್ಕೆ ಅನ್ನ ನೀಡುವ ರೈತ ಯಾವತ್ತು ಸಾಲ ಕೇಳುವವರಾಗಬಾರದು. ಸಾಲ ನೀಡುವವರಾಗಬೇಕು ಎಂದು ಚಿಂಚೋಳಿ ಮತಕ್ಷೇತ್ರದ ಕಾಂಗ್ರೆಸ್ ಹಿರಿಯ ಮುಖಂಡ ಸುಭಾಷ ರಾಠೊಡ ಅಭಿಪ್ರಾಯಪಟ್ಟರು.
ತಾಲೂಕಿನ ಹೇರೂರ(ಕೆ) ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿಮಂಗಳವಾರ ರೈತರಿಗೆ ಬಡ್ಡಿರಹಿತ ಸಾಲ ವಿತರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ರೈತನು ಕೃಷಿಯ ಜೊತೆ ಜೊತೆಗೆ ಹೈನುಗಾರಿಕೆ, ಕುರಿ ಸಾಕಾಣಿಕೆ, ಮೀನು ಸಾಕಾಣಿಕೆಯಂತಹ ವಿವಿಧ ಕೆಲಸಗಳನ್ನು ಮಾಡಿಕೊಂಡರೆ ಆರ್ಥಿಕವಾಗಿ ಸದೃಢರಾಗಿ ಸರ್ಕಾರಕ್ಕೆ ಸಾಲ ನೀಡುವಂತಹ ಶಕ್ತಿ ಬರುತ್ತದೆ ಎಂದು ಹೇಳಿದರು.
ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಹೇರೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರೂ ಆಗಿರುವ ಬಸವರಾಜ ಪಾಟೀಲ ಹೇರೂರ ಮಾತನಾಡಿ, ರಾಜ್ಯದಲ್ಲಿಯೇ ಅತಿ ಚಿಕ್ಕ ಹಳ್ಳಿಯಲ್ಲಿರುವ ನಮ್ಮ ಸಂಸ್ಥೆಯಿಂದ 158 ರೈತರಿಗೆ ಒಟ್ಟು 52 ಲಕ್ಷ ರೂಪಾಯಿಗಳ ಸಾಲವನ್ನು ಮಂಜೂರು ಮಾಡಿಸಲಾಗಿದೆ.
ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿ ಆರ್ಥಿಕ ಸಂಕಷ್ಟದಲ್ಲಿದ್ದ ರೈತನ ಮೊಗದಲ್ಲಿ ಉಲ್ಲಾಸ ಮೂಡಿದ್ದು, ಪಡೆದುಕೊಂಡಿರುವ ಸಾಲವನ್ನು ಸದುಪಯೋಗ ಮಾಡಿಕೊಂಡುಸಮಕ್ಕೆ ಮರುಪಾವತಿಸಿದರೆ ಇನ್ನೂ ಹೆಚ್ಚಿನ ಸಾಲಸೌಲಭ್ಯಗಳ ಜೊತೆಗೆ ವ್ಯವಹಾರಿಕಸಾಲಗಳನ್ನು ನೀಡಲಾಗುವುದು ಎಂದು ಹೇಳಿದರು.
ರೈತ ಮುಖಂಡ ರೇವಣಸಿದ್ದಪ್ಪ ಸಾತನೂರ, ದಲಿತ ಮುಖಂಡ ಕಾಶೀನಾಥ ವರನಾಳ ಶೇಳ್ಳಗಿ, ಚಿತ್ತಾಪೂರ ಡಿಸಿಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಸಂತೋಷಕುಮಾರ, ಮೇಲ್ವಿಚಾರಕ ವಿಶ್ವನಾಥ ಸ್ವಾಮಿ ಮಾತನಾಡಿದರು. ಸುಗೂರ(ಕೆ) ಡಾ| ಚನ್ನರುದ್ರಮುನಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.
ಯುವ ಮುಖಂಡ ಆನಂದ ಜಾಧವ, ಭೀಮರಾಯ ಮೇತ್ರೆ, ಜಗದೇವಿ ಪಾಟೀಲ, ರಾಜಕುಮಾರ ಕಲಬುರಗಿ, ಅಂಬರಾಯ ಗಾರಂಪಳ್ಳಿ, ಗುರಣ್ಣ ಸಮಗಾರ, ಸಂಗಣ್ಣ ತಳವಾರ, ಮಲ್ಕಣ್ಣ ಸಾಸರಗಾಂವ, ಸಿದ್ದಲಿಂಗ ಪಾಟೀಲ ಇದ್ದರು. ಗ್ರಾಪಂ ಸದಸ್ಯ ಶಂಕರ ಸುತಾರ ವಂದಿಸಿದರು.