ಸವಣೂರು: ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯಡಿಯಲ್ಲಿ ಸವಣೂರು ಗ್ರಾ.ಪಂ. ವತಿಯಿಂದ ಒಂದು ತಿಂಗಳ ಕಾಲ ನಡೆಯುವ ಸ್ವಚ್ಛತಾ ಆಂದೋಲನ ಮತ್ತು ವಿಶ್ವಪರಿಸರ ದಿನಾಚರಣೆಯ ಸ್ವಚ್ಛಮೇವ ಜಯತೇ ಕಾರ್ಯಕ್ರಮಕ್ಕೆ ಸವಣೂರು ವಿನಾಯಕ ಸಭಾಭವನದಲ್ಲಿ ಜೂ. 11ರಂದು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಬಿ.ಕೆ. ಚಾಲನೆ ನೀಡಿದರು.
ಅಂಗನವಾಡಿಗಳಿಗೆ ಕಸದ ತೊಟ್ಟಿ ವಿತರಿಸಿ ಮಾತನಾಡಿದ ಜಿ.ಪಂ. ಸದಸ್ಯೆ ಪ್ರಮೀಳಾ ಜನಾರ್ದನ್ ಅವರು, ಪ್ರತಿಯೊಬ್ಬರೂ ಸ್ವಚ್ಛತೆಯ ಕುರಿತು ಗಮನ ಹರಿಸಬೇಕು. ಪ್ರಧಾನಿ ನರೇಂದ್ರ ಮೋದಿಯವರು ಗಾಂಧಿ ಜಯಂತಿ ಅಂಗವಾಗಿ ಆರಂಭಿಸಿದ್ದ ಸ್ವಚ್ಛ ಭಾರತ್‌ನಿಂದ ಇಡೀ ದೇಶದಲ್ಲೇ ಸ್ವಚ್ಛತೆಯ ವಿಚಾರವಾಗಿ ಆಮೂಲಾಗ್ರ ಬದಲಾವಣೆಯಾಗಿದೆ ಎಂದರು.
ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಮಾತನಾಡಿ, ರಾಮಕೃಷ್ಣ ಮಿಷನ್ ಸಂಯೋಜನೆಯಲ್ಲಿ ಸ್ವಚ್ಛ ಸವಣೂರು ಅಭಿಯಾನದಲ್ಲಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಪ್ರತೀ ರವಿವಾರ ಸ್ವಚ್ಛತೆ ನಡೆಯುತ್ತಿದೆ. ತಾಲೂಕಿನಲ್ಲೇ ಇದು ಮಾದರಿ ಎಂದರು.
ಸವಣೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಬಿ.ಕೆ. ಮಾತನಾಡಿ, ಪ್ರತೀ ರವಿವಾರದ ಸ್ವತ್ಛತಾ ಕಾರ್ಯದಲ್ಲಿ ಗ್ರಾಮಸ್ಥರೂ ಪಾಲ್ಗೊಳ್ಳುತ್ತಿದ್ದಾರೆ. ಜಾಗೃತಿ ಜಾಥಾ, ಶ್ರಮದಾನ, ಶಾಲಾ ಕಾಲೇಜುಗಳಲ್ಲಿ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಪ್ರತಿಜ್ಞಾ ವಿಧಿ ಬೋಧನೆ, ತ್ಯಾಜ್ಯ ವಿಲೇ ಕುರಿತು ಗೋಡೆ ಬರಹ, ಭಿತ್ತಿ ಚಿತ್ರಗಳನ್ನು ರಚನೆ ಮಾಡುವುದು, ಸ್ವಚ್ಛತಾ ಜಾಥಾದ ಮೂಲಕ ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗುವುದು ಎಂದರು.
ಗ್ರಾ.ಪಂ. ಸದಸ್ಯ ಗಿರಿಶಂಕರ ಸುಲಾಯ ಮಾಹಿತಿ ನೀಡಿದರು. ಜನಜಾಗೃತಿ ವೇದಿಕೆಯ ಸವಣೂರು ವಲಯದ ಮಾಜಿ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸವಣೂರು ಪ್ರಾ.ಕೃ.ಪ.ಸ. ಸಂಘದ ಉಪಾಧ್ಯಕ್ಷ ತಾರಾನಾಥ ಕಾಯರ್ಗ, ಗ್ರಾ.ಪಂ. ಉಪಾಧ್ಯಕ್ಷ ಬಿ.ಕೆ. ರವಿ ಕುಮಾರ್, ಸದಸ್ಯರಾದ ಅಬ್ದುಲ್ ರಝಾಕ್ ಕೆನರಾ, ಎಂ.ಎ. ರಫೀಕ್, ಸತೀಶ್ ಬಲ್ಯಾಯ, ಸುಧಾ ನಿಡ್ವಣ್ಣಾಯ, ಮೀನಾಕ್ಷಿ ಬಂಬಿಲ, ಚೆನ್ನು ಮಾಂತೂರು, ರಾಜೀವಿ ಶೆಟ್ಟಿ, ಜಯಂತಿ ಮಡಿವಾಳ, ದೇವಿಕಾ ಶ್ರೀಧರ್, ವೇದಾವತಿ ಅಂಜಯ, ಗಾಯತ್ರಿ ಬರೆಮೇಲು, ಸಿಬಂದಿ ಪ್ರಮೋದ್ ಕುಮಾರ್, ದಯಾನಂದ ಮಾಲೆತ್ತಾರು, ಜಯಶ್ರೀ, ಜಯಾ ಬಿ.ಕೆ., ದೀಪಿಕಾ ಪಾಲ್ಗೊಂಡಿದ್ದರು.
ಜಾಗೃತಿ ಜಾಥಾ
ಸವಣೂರು ಪೇಟೆಯಿಂದ ಕಾಯರ್ಗದ ವರೆಗೆ ಜಾಗೃತಿ ಜಾಥಾ ನಡೆಸಲಾಯಿತು. ಸವಣೂರು ಉ.ಹಿ.ಪ್ರಾ. ಶಾಲೆ, ಸವಣೂರು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸವಣೂರು ಹಿಂದೂ ರುದ್ರಭೂಮಿಯಲ್ಲಿ ಸಸ್ಯಗಳನ್ನು ನಾಟಿ ಮಾಡಲಾಯಿತು.
ವಿವಿಧ ಸಂಘ-ಸಂಸ್ಥೆ ಭಾಗಿ
ಗ್ರಾ.ಪಂ. ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಸಂಘದ ಸದಸ್ಯರು, ಶಾಲಾ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಸವಣೂರು ಯುವಕ ಮಂಡಲ, ಮಂಜುನಾಥನಗರ ವಿವೇಕಾನಂದ ಯುವಕ ಮಂಡಲ, ಜನಜಾಗೃತಿ ವೇದಿಕೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬದ್ರಿಯಾ ಜುಮ್ಮಾ ಮಸೀದಿ ಚಾಪಲ್ಲ, ವರ್ತಕರ ಸಂಘ, ಶಾರದಾಂಬಾ ಸೇವಾ ಸಂಘ, ಅಲ್‌ನೂರ್ ಮುಸ್ಲಿಂ ಯೂತ್ ಫೆಡರೇಶನ್, ಕೃಷಿ ಪತ್ತಿನ ಸಹಕಾರ ಸಂಘ, ನವೋದಯ ಸ್ವಸಹಾಯ ಸಂಘದ ಸದಸ್ಯರು, ವಾಹನ ಚಾಲಕ-ಮಾಲಕ ಸಂಘದ ಸದಸ್ಯರು ಪಾಲ್ಗೊಂಡಿದ್ದರು.
ಗಮನ ಸೆಳೆದ ಫಲಕ
ಸಭಾಭವನದ ಸುತ್ತಲೂ ಸ್ವಚ್ಛತಾ ಜಾಗೃತಿಯ ಮಾಹಿತಿ ಫಲಕಗಳು ಗಮನ ಸೆಳೆದವು. ಸವಣೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನಾರಾಯಣ ಬಟ್ಟೋಡಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಲೆಕ್ಕ ಸಹಾಯಕ ಎ. ಮನ್ಮಥ ವಂದಿಸಿದರು.