Advertisement

ಉಚಿತ ಕೃತಕ ಅಂಗಾಂಗಗಳು, ಉಪಕರಣಗಳ ವಿತರಣೆ 

01:05 PM Apr 30, 2018 | Team Udayavani |

ಪುತ್ತೂರು: ಒಂದೆಡೆ ಚುನಾವಣ ಸಿದ್ಧತೆ, ಇನ್ನೊಂದೆಡೆ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶದ ಕಾತರ, ಮತ್ತೊಂದೆಡೆ ಶುಭ ಸಮಾರಂಭಗಳ ಗೌಜಿಯ ಮಧ್ಯೆ ಪುತ್ತೂರಿನಲ್ಲಿ ಅಸಹಾಯಕರಿಗೆ ನೆರವಾಗುವ ಮಹತ್ವದ ಕಾರ್ಯಕ್ರಮವೊಂದು ಸುದ್ದಿಯಿಲ್ಲದೆ ರವಿವಾರ ನಡೆದು ಗಮನಸೆಳೆಯಿತು.

Advertisement

ರೋಟರಿ ಕ್ಲಬ್‌ ಪುತ್ತೂರು ಮತ್ತು ಫ್ರೀಡಂ ಟ್ರಸ್ಟ್‌ ಚೆನ್ನೈಸಹಯೋಗದಲ್ಲಿ ಪುತ್ತೂರು ಶಿಕ್ಷಣ ಇಲಾಖೆಯ ಸಹಕಾರ ದೊಂದಿಗೆ ನೆಲ್ಲಿಕಟ್ಟೆ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಪ್ರಾಥಮಿಕ ಶಾಲಾ ವಿಭಾಗದ ಸುಮಾರು 30 ಮಂದಿ ಅಂಗವಿಕಲ ಮಕ್ಕಳಿಗೆ 2 ಲಕ್ಷ ರೂ. ವೆಚ್ಚದಲ್ಲಿ ಉಚಿತ ಕೃತಕ ಅಂಗಾಂಗಗಳು, ಉಪಕರಣಗಳ ವಿತರಣೆ ಸಮಾರಂಭ ನಡೆಯಿತು.

ದೇವರಂತಹ ಮನಸ್ಸು ಗುರುತಿಸಿ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಡಿ.ಎಂ. ಮಾತನಾಡಿ, ನಮ್ಮ ಸುತ್ತಲೂ ಇರುವ ದೇವರಂತಹ ಮನಸ್ಸನ್ನು ಗುರುತಿಸುವ ಶಕ್ತಿ ನಮ್ಮಲ್ಲಿ ಬೆಳೆಯಬೇಕು. ವಿಕಲತೆಯನ್ನು ಹೊಂದಿರುವ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮುಖ್ಯವಾಗಿ ಆಗಬೇಕು ಎಂದರು.

ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್‌. ಸುಧಾಕರ ಶೆಟ್ಟಿ ಮಾತನಾಡಿ, ಅಂಗವಿಕಲತೆಯನ್ನು ಹೊಂದಿರುವವರಿಗೆ ನೆರವಾಗುವುದು ಸಮಾಜದಲ್ಲಿ ಬಹುಮುಖ್ಯ ಸೇವೆ ಎನಿಸುತ್ತದೆ. ಕೆಲವರಿಗೆ ಮನಸ್ಸು ಇದ್ದರೆ ಯೋಗ ಇರುವುದಿಲ್ಲ. ಆದರೆ ಚೆನ್ನೈನ ಫ್ರೀಡಂ ಟ್ರಸ್ಟ್‌ನವರು ಎಲ್ಲಾ ಭಾಗ್ಯಗಳನ್ನೂ ಹೊಂದಿದ್ದಾರೆ. ದೇವರ ಅನುಗ್ರಹ ಮತ್ತು ಗುರು ಹಿರಿಯರ ಆಶೀರ್ವಾದಿಂದ ಮಾತ್ರ ಇಂತಹ ಉತ್ತಮ ಕೆಲಸ ಸಾಧ್ಯ ಎಂದರು.

ಇನ್ನಷ್ಟು ಶಿಬಿರದ ಉದ್ದೇಶ
ಫ್ರೀಡಂ ಟ್ರಸ್ಟ್‌ ಚೆನ್ನೈ ಇದರ ಸ್ಥಾಪಕ ಡಾ| ಎಸ್‌. ಸುಂದರ್‌ ಮಾತನಾಡಿ, ಎಲ್ಲರ ಮನಸ್ಸಿನಲ್ಲಿರುವ ದೇವರು ಅವರ ಮೂಲಕ ಒಳ್ಳೆಯ ಕೆಲಸವನ್ನು ಮಾಡಿಸುತ್ತಲೇ ಇರುತ್ತಾರೆ ಎಂದರು. ಟ್ರಸ್ಟ್‌ ಮೂಲಕ ಕಳೆದ ವರ್ಷ ಒಟ್ಟು 1.3 ಕೋಟಿ ರೂ. ವಿನಿಯೋಗಿಸಿ ನೂರಾರು ಮಂದಿ ಅಂಗವಿಕಲರಿಗೆ ಸಲಕರಣೆಗಳನ್ನು ವಿತರಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಪ್ರಥಮ ಬಾರಿ ಪುತ್ತೂರಿಗೆ ಪ್ರವೇಶ ಮಾಡಿದ್ದು, ಇಲ್ಲಿನ ಗ್ರಾಮಾಂತರದಲ್ಲಿ ಇನ್ನಷ್ಟು ಶಿಬಿರಗಳನ್ನು ಆಯೋಜಿಸುವ ಉದ್ದೇಶವನ್ನು ಹೊಂದಿದ್ದೇವೆ ಎಂದರು. ಕೃತಕ ಅಂಗಾಂಗಗಳು ಹಾಗೂ ಸಲಕರಣೆಗಳನ್ನು ಅಳತೆಗೆ ಸರಿಯಾಗಿ ಮಾಡಿರುವುದರಿಂದ ಆ ವ್ಯಕ್ತಿಗೆ ಸೀಮಿತವಾಗಿ ಬಳಕೆಯಾಗಬೇಕು. ನ್ಯೂನತೆಗಳು ಕಂಡುಬಂದಲ್ಲಿ ಸರಿಪಡಿಸಿ ನೀಡಲಾಗುತ್ತದೆ ಎಂದರು.

Advertisement

ನೆರವಿಗೆ ಗೌರವ
ಚೆನ್ನೈನಿಂದ ಸಲಕರಣೆಗಳನ್ನು ತರುವ ವೆಚ್ಚ ಭರಿಸಿದ ಹಾಗೂ ಟ್ರಸ್ಟ್‌ಗೆ 25 ಸಾವಿರ ರೂ. ದೇಣಿಗೆ ನೀಡಿದ ರೋಟರಿ ಕ್ಲಬ್‌ ಪುತ್ತೂರು ಇದರ ನಿಯೋಜಿತ ಅಧ್ಯಕ್ಷ ವಾಮನ ಪೈ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಟ್ರಸ್ಟ್‌ ಮೂಲಕ ನಡೆಯುತ್ತಿರುವ ಉಚಿತ ಸಲಕರಣೆ ವಿತರಣೆ ಉದ್ದೇಶಕ್ಕೆ ದಾನಿಗಳ ಮೂಲಕ ನೆರವು ನೀಡಿಸುವ ಹಾಗೂ ಪುತ್ತೂರಿನಲ್ಲಿ ಮುಂದಿನ ವರ್ಷ ದೊಡ್ಡ ಮಟ್ಟದಲ್ಲಿ ಎರಡು ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ವಾಮನ ಪೈ ಭರವಸೆ ನೀಡಿದರು.

ಪುತ್ತೂರು ಅಸಹಾಯಕರ ಸೇವಾ ಟ್ರಸ್ಟ್‌ನ ನಯನಾ ರೈ ಶುಭಹಾರೈಸಿದರು. ರೋಟರಿ ಕ್ಲಬ್‌ ಪುತ್ತೂರು ಇದರ ಅಧ್ಯಕ್ಷ ಎ.ಜೆ. ರೈ ಸ್ವಾಗತಿಸಿ, ರೋಟರಿ ಪದಾಧಿಕಾರಿ ಸುರೇಶ್‌ ಶೆಟ್ಟಿ ವಂದಿಸಿ, ಡಾ| ಶ್ರೀಪ್ರಕಾಶ್‌ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಣ ಇಲಾಖೆಯ ಬಿ.ಐ.ಆರ್‌.ಟಿ. ತನುಜಾ, ಸಲಕರಣೆ ಸಿದ್ಧಪಡಿಸಿದ ತಾಂತ್ರಿಕ ಅಧಿಕಾರಿಗಳಾದ ಜಯವೇಲು, ಬಾಲಾಜಿ, ರೋಟರಿ ಪದಾಧಿಕಾರಿಗಳು, ಮಕ್ಕಳ ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಉತ್ಸಾಹ ಬಂದಿದೆ
ವಿದೇಶದಲ್ಲಿರುವ ಮುರಳಿ ಹಾಗೂ ಜಯತೀರ್ಥ ರಾವ್‌ ಅವರು ಟ್ರಸ್ಟ್‌ಗೆ ನೀಡಿದ 2 ಲಕ್ಷ ರೂ. ಕೊಡುಗೆಯಲ್ಲಿ 30 ಮಂದಿ ಮಕ್ಕಳಿಗೆ ಅಂಗಾಂಗ ಹಾಗೂ ಸಲಕರಣೆ ವಿತರಣೆ ಮಾಡಲಾಗಿದೆ. ರೋಟರಿ ಸಂಸ್ಥೆಯು ಫ್ರೀಡಂ ಟ್ರಸ್ಟ್‌ ಸಹಯೋಗದೊಂದಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಉತ್ಸುಕವಾಗಿದೆ.
– ಡಾ| ಶ್ರೀಪ್ರಕಾಶ್‌,
  ಸಂಯೋಜಕ

Advertisement

Udayavani is now on Telegram. Click here to join our channel and stay updated with the latest news.

Next