Advertisement

ಮಳೆ ಹಾನಿ ಸಂತ್ರಸ್ತರಿಗೆ ಪರಿಹಾರ ಧನ ವಿತರಣೆ

12:53 PM Oct 24, 2017 | Team Udayavani |

ಮೈಸೂರು: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ತತ್ತರಿಸಿದ್ದ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಬಡಾವಣೆಗಳ ನಿವಾಸಿಗಳಿಗೆ ಪರಿಹಾರದ ಚೆಕ್‌ ವಿತರಿಸಲಾಯಿತು. ನಗರದ ಕನಕಗಿರಿ ಸಮುದಾಯ ಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಎಂ.ಕೆ.ಸೋಮಶೇಖರ್‌, ಮಳೆಯಿಂದ ಹಾನಿಗೊಳಗಾದ ಕನಕಗಿರಿ, ಶ್ರೀರಾಂಪುರ, ಗುಂಡೂರಾವ್‌ನಗರದ ನಿವಾಸಿಗಳಿಗೆ ಪರಿಹಾರದ ಚೆಕ್‌ ವಿತರಿಸಿದರು.

Advertisement

ಬಳಿಕ ಮಾತನಾಡಿದ ಅವರು, ಭಾರೀ ಮಳೆಯಿಂದಾಗಿ ಸಾಕಷ್ಟು ಅನಾಹುತ ಸಂಭವಿಸಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪರಿಶೀಲನೆ ನಡೆಸಿ ಮಳೆಯಿಂದ ಯಾವುದೇ ತೊಂದರೆ ಆಗದಂತೆ ಕಾಮಗಾರಿಗಳನ್ನು ನಡೆಸುವಂತೆ ಸೂಚಿಸಿದ್ದಾರೆ.

ಅಲ್ಲದೆ ಅಧಿಕಾರಿಗಳೊಂದಿಗೆ ತಾವೂ ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದು, ಹಲವು ಕಡೆಗಳಲ್ಲಿ ಒಳಚರಂಡಿ ದುರಸ್ತಿ ಕಾರ್ಯ ಮಾಡಬೇಕಿದ್ದು, ಶೀಘ್ರ ಕಾಮಗಾರಿ ನಡೆಸುವ ಮೂಲಕ ಮುಂದೆ ಇಂತಹ ಹಾನಿಯಾಗದಂತೆ ಅಗತ್ಯ ಮುಂಜಾಗ್ರತೆ ವಹಿಸಲಾಗುವುದು ಎಂದರು.

ಮಳೆಯಿಂದಾಗಿ ಗೃಹಬಳಕೆ ವಸ್ತುಗಳು, ಪೀಠೊಪಕರಣ ಸೇರಿದಂತೆ ಬೆಲೆಬಾಳುವ ಪದಾರ್ಥಗಳನ್ನು ಕಳೆದುಕೊಂಡಿದ್ದು, ಈ ಸಂಬಂಧ ನೀಡಲಾಗಿರುವ ವರದಿಗೆ ಅನುಗುಣವಾಗಿ 119 ಮಂದಿಗೆ 3-4 ಸಾವಿರ ರೂ.ಗಳ ಚೆಕ್‌ ವಿತರಿಸಲಾಗಿದೆ.

ಉಳಿದವರಿಗೂ ಶೀಘ್ರವೇ ಪರಿಹಾರ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು. ತಹಶೀಲ್ದಾರ್‌ ರಮೇಶ್‌ಬಾಬು, ಕಂದಾಯ ನಿರೀಕ್ಷಕ ಗಣೇಶ್‌, ಕಾಂಗ್ರೆಸ್‌ ಮುಖಂಡರಾದ ಕೇಬಲ್‌ ಮಹದೇವ್‌, ಶೇಖರ್‌ ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next