Advertisement

ಸಂತ್ರಸ್ತರಿಗೆ ನೆರವು ಸಂಗ್ರಹ-ವಿತರಣೆ

12:06 PM Aug 17, 2019 | Team Udayavani |

ಅಂಕೋಲಾ: ತಾಲೂಕಿನ ನೆರೆ ಸಂತ್ರಸ್ತರಿಗೆ ತಮ್ಮ ಉದಾತ್ತ ಕೈಂಕರ್ಯದ ಮೂಲಕ ಜೆಸಿಐ ಮಾದರಿಯಾಗಿದ್ದು ಇತರ ಸ್ವಯಂ ಸೇವಾ ಸಂಸ್ಥೆಗಳು ಸಹ ಸೇವೆ ಮಾಡುವ ಮನೋಭಾವನೆ ಇದ್ದರೆ ಸಂತ್ರಸ್ತರು ಧೃತಿಗೆಡುವ ಅವಶ್ಯಕತೆ ಇಲ್ಲ ಎಂದು ತಾಪಂ ಅಧ್ಯಕ್ಷೆ ಸುಜಾತಾ ಗಾಂವಕರ ಹೇಳಿದರು.

Advertisement

ಅವರು ಶುಕ್ರವಾರ ಜೂಗ, ಕರ್ಕಿತುರಿ, ಶೇಡಿಕಟ್ಟ ಮೋಟನ್‌ ಕುರ್ವಾ ಪ್ರದೇಶಗಳಲ್ಲಿ ನೆರೆ ಸಂತ್ರಸ್ತರಿಗೆ ಜೆಸಿಐ ತಂದಿರುವ ಸಾಮಾನು ಸರಂಜಾಮುಗಳನ್ನು ವಿತರಿಸಿ ಮಾತನಾಡಿದರು. ತಾಲೂಕಿನ 33 ಹಳ್ಳಿಗಳು ನೆರೆಯಿಂದ ತತ್ತರಿಸಿದ ಸಂದರ್ಭದಲ್ಲಿ ಜೆಸಿ ಸಂಸ್ಥೆ ಸಹಕಾರ ನೀಡಿದೆ. ಜೆಸಿಐ ವಲಯಾಧ್ಯಕ್ಷ ಅಶೋಕ್‌ ಚುಂತರ್‌ ತಂಡ ಸುಳ್ಯ, ಭಟ್ಕಳ, ಕುಂದಾಪುರದಿಂದ ಸಂಗ್ರಹಿಸಿದ ಸಾಮಗ್ರಿಗಳನ್ನು ಜನರಿಗೆ ವಿತರಿಸಿರುವುದು ಶ್ಲಾಘನೀಯ ಎಂದರು.

ಜೆಸಿಐ ಅಧ್ಯಕ್ಷ ಅಶೋಕ್‌ ಮಾತನಾಡಿ ಮನುಷ್ಯರು ತೊಂದರೆಯಲ್ಲಿದ್ದಾಗ ಇನ್ನೊಬ್ಬರು ಸಹಾಯ ಮಾಡುವುದು ಧರ್ಮ. ಯಾವುದೇ ವ್ಯಕ್ತಿಗಳ ಸಂತೋಷ ಕೂಟದಲ್ಲಿ ಪಾಲ್ಗೊಳ್ಳುವುದಕ್ಕಿಂತ ಕಷ್ಟಕಾಲದಲ್ಲಿ ನೆರವಾಗಬೇಕು ಎಂದರು. ತಾಲೂಕಿನ ವಾಸರೆ, ಕುದ್ರಿಗೆ, ಕೊಡ್ಸಣಿ, ಆಂದ್ಲೆ, ಜೂಗ, ಕರ್ಕಿತುರಿ, ಮೋಟನ್‌ ಕುರ್ವೆ, ಶೇಡಿಕಟ್ಟಾ, ಬಳಲೆ ಭಾಗಗಳಲ್ಲಿ ನೆರೆ ಸಂತ್ರಸ್ತರಿಗೆ ದಿನನಿತ್ಯ ಬಳಕೆ ವಸ್ತುಗಳನ್ನು ಪೂರೈಸಿದರು.

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಘು ಕಾಕರಮಠ, ಕಾರ್ಯದರ್ಶಿ ಸುಭಾಷ್‌ ಕಾರೇಬೈಲ್, ತಾಪಂ ಸದಸ್ಯೆ ಶಾಂತಿ ಆಗೇರ, ವಾಸರ್‌ ಕುದ್ರಿಗೆ, ಗ್ರಾಪಂ ಉಪಾಧ್ಯಕ್ಷ ಪ್ರದೀಪ್‌ ವಾಸರೆ, ಮೊಗಟಾ ಉಪಾಧ್ಯಕ್ಷ ದೇವಾನಂದ ನಾಯಕ, ಜೆಸಿಐ ವಲಯ ಉಪಾಧ್ಯಕ್ಷ ಜಬ್ಬರ್‌ ಬಟ್ಕಳ, ಕುಂದಾಪುರ ಸಿಟಿ ಜೆಸಿಐ ಸ್ಥಾಪಕ ಹುಸೇನ ಹೈಕಾಡಿ, ಭಟ್ಕಳ ಜೆಸಿಐ ಸದಸ್ಯರಾದ ಸುರೇಶ್‌ ಪೂಜಾರಿ, ಈಶ್ವರ್‌ ನಾಯ್ಕ, ಜಗದೀಶ್‌ ಮೊಗವೀರ ಸುಳ್ಯ, ಯೋಗೀಶ್‌ ಉಪಸ್ಥಿತರಿದ್ದರು.

ಸರ್ಕಾರ ವತಿಯಿಂದ ಪ್ರವಾಹ ಪೀಡಿತರಿಗೆ ಅಗತ್ಯ ವಸ್ತು ಹಂಚಿಕೆ:
ತಾಲೂಕಿನ ಹೆಗಡೆ ಗ್ರಾಪಂ ವ್ಯಾಪ್ತಿಯ 614 ನೆರೆ ಸಂತ್ರಸ್ತರಿಗೆ ಸರ್ಕಾರದಿಂದ ನೀಡಲಾಗುವ ಅಗತ್ಯ ದಿನಬಳಕೆ ಸಾಮಗ್ರಿಗಳನ್ನು ಶುಕ್ರವಾರ ಶಾಸಕ ದಿನಕರ ಶೆಟ್ಟಿ ವಿತರಿಸಿದರು. ಸಂತ್ರಸ್ತರಿಗೆ ದಿನಸಿ ವಸ್ತುಗಳಾದ ಅಕ್ಕಿ, ಸಕ್ಕರೆ, ಉಪ್ಪು, ಬೇಳೆಕಾಳು, ಎಣ್ಣೆ, ಸೀಮೆ ಎಣ್ಣೆ ಸೇರಿದಂತೆ ಇನ್ನಿತರ ವಸ್ತುಗಳನ್ನು ವಿತರಿಸಿ ನಂತರ ಮಾತನಾಡಿದ ಅವರು, ನೆರೆ ಸಂತ್ರಸ್ತರಿಗಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಯಡಿಯೂರಪ್ಪನವರ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದು, ಶೀಘ್ರ ಪರಿಹಾರ ಒದಗಿಸುತ್ತಿದೆ. ನೀರು ನುಗ್ಗಿದ ಮನೆಗಳಿಗೆ ಈ ಮೊದಲು ನೀಡುತ್ತಿರುವ 3800 ರೂ. ಸಂತ್ರಸ್ತರಿಗೆ ಸಾಲುತ್ತಿಲ್ಲ ಎಂಬುದನ್ನು ಅರಿತ ಯಡಿಯೂರಪ್ಪನವರು ಅದರ ಜೊತೆ ಮತ್ತೆ 6200 ರೂ. ಅಂದರೆ ಒಟ್ಟೂ 10,000 ರೂಗಳನ್ನು ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಸಂತ್ರಸ್ತರ ಖಾತೆಗೆ ಹಣ ಜಮಾ ಆಗಲಿದೆ ಎಂದರು. ಬಿಜೆಪಿ ಮುಖಂಡರಾದ ಗಜಾನನ ಗುನಗಾ, ಗ್ರಾ.ಪಂ ಪಿಡಿಓ ಶಿವಾನಂದ ಜೋಶಿ, ಉಪಾಧ್ಯಕ್ಷೆ ನಾಗವೇಣಿ ಹೆಗಡೆ, ಸದಸ್ಯ ಪ್ರಕಾಶ ನಾಯ್ಕ, ಜಯಾ ಮುಕ್ರಿ ಶಿವಾನಂದ ಪಟಗಾರ, ಲಕ್ಷ್ಮೀಕಾಂತ, ಅಮರನಾಥ ಭಟ್ಟ, ಅಶೋಕ ಭಟ್ಟ ಸೇರಿದಂತೆ ಹಲವರಿದ್ದರು.
Advertisement

Udayavani is now on Telegram. Click here to join our channel and stay updated with the latest news.

Next