ಮಂಡ್ಯ: ಜಿಲ್ಲೆಯಲ್ಲಿ ಕಟಾವಿಗೆ ಬಂದಿರುವ 13 ಲಕ್ಷ ಟನ್ ಹೆಚ್ಚುವರಿ ಕಬ್ಬನ್ನು ಹೇಮಾವತಿ, ಬನ್ನಾರಿ ಅಮ್ಮನ್ ಹಾಗೂ ಸತ್ತೇಗಾಲ ಸಕ್ಕರೆ ಕಾರ್ಖಾನೆಗಳಿಗೆ ಸರಬರಾಜು ಮಾಡಲು ವ್ಯವಸ್ಥೆ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕಟಾವಿಗೆ ಬಂದಿರುವ ಕಬ್ಬನ್ನು ನುರಿಸುವ ಸಂಬಂಧ ರೈತ ಮುಖಂಡರ ಜೊತೆ ಸಭೆ ನಡೆಸಿ ಮಾತನಾಡಿದರು. ಕಬ್ಬು ಸಾಗಣೆ ವೆಚ್ಚವನ್ನು 3 ಭಾಗಗಳಾಗಿ ವಿಂಗಡಿಸಲು ನಿರ್ಧರಿಸಲಾಗಿದೆ. ರೈತ, ಸರ್ಕಾರ ಹಾಗೂ ಕಾರ್ಖಾನೆಗಳು ಎಷ್ಟೆಷ್ಟು ಹಣ ಭರಿಸಬೇಕು ಎಂಬ ಬಗ್ಗೆ ಮುಖ್ಯಮಂತ್ರಿ, ಸಕ್ಕರೆ ಸಚಿವರು ಹಾಗೂ ಕಾರ್ಖಾನೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಹೇಳಿದರು.
2 ತಿಂಗಳಲ್ಲಿ ಕಬ್ಬು ನುರಿಯಲು ವ್ಯವಸ್ಥೆ: ಮುಂದಿನ ಎರಡು ತಿಂಗಳಲ್ಲಿ ಹೆಚ್ಚುವರಿ ಕಬ್ಬನ್ನು ನುರಿಸುವುದಕ್ಕೆ ವ್ಯವಸ್ಥೆ ಮಾಡಲಾಗುವುದು. ಈ ಬಗ್ಗೆ ರೈತರು ಆತಂಕಪಡುವ ಅಗತ್ಯವಿಲ್ಲ. 16 ತಿಂಗಳ ಕಬ್ಬು ನುರಿಯುವುದಕ್ಕೆ ಮೊದಲ ಪ್ರಾಧಾನ್ಯತೆ ನೀಡುವಂತೆ ಸಕ್ಕರೆ ಕಾರ್ಖಾನೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕಂಪನಿಯಿಂದಲೇ ಗ್ಯಾಂಗ್‌ಮನ್‌ಗಳನ್ನು ಕಳುಹಿಸಿ, ಕಬ್ಬು ಕಟಾವು ಮಾಡಿಸುವುದಕ್ಕೂ ನಿರ್ದೇಶನ ನೀಡಿರುವುದಾಗಿ ಹೇಳಿದರು.
ನವೆಂಬರ್‌ನಿಂದ ಕಾರ್ಖಾನೆ ಆರಂಭ: ಹೇಮಾವತಿ ಸಕ್ಕರೆ ಕಾರ್ಖಾನೆ ಕೂಡಲೇ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ನ.1ರಿಂದ ಕಾರ್ಖಾನೆ ಆರಂಭಕ್ಕೆ ಅಧಿಕಾರಿಗಳು ಸಮಯ ನಿಗದಿಪಡಿಸಿಕೊಂಡಿದ್ದಾರೆ. ಅ.15ರಿಂದಲೇ ಕಬ್ಬು ನುರಿಸಲು ಚಾಲನೆ ನೀಡುವಂತೆ ತಿಳಿಸಿದ್ದೇವೆ. ಹೇಮಾವತಿ ಸಕ್ಕರೆ ಕಾರ್ಖಾನೆಗೆ ನಿತ್ಯ 4 ಸಾವಿರ ಟನ್, ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ 5 ಸಾವಿರ ಟನ್ ಹಾಗೂ ಉಳಿಕೆ ಕಬ್ಬನ್ನು ಸತ್ತೇಗಾಲ ಸಕ್ಕರೆ ಕಾರ್ಖಾನೆಗೆ ಸಾಗಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ರೈತ ಮುಖಂಡರಿಗೆ ತಿಳಿಸಿದರು.
ಕಬ್ಬು ನುರಿಯುವುದು ಮುಖ್ಯ: ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಮೊದಲ ಪ್ರಾಧಾನ್ಯತೆ ನೀಡಲಾಗುವುದು. ಅದನ್ನು ಖಾಸಗೀಕರಣ ಮಾಡಬೇಕೋ ಅಥವಾ ಸರ್ಕಾರಿ ಸ್ವಾಮ್ಯದಲ್ಲಿ ಉಳಿಸಿಕೊಳ್ಳುವುದೋ ಎನ್ನುವುದು ಮುಖ್ಯವಲ್ಲ. ರೈತರ ಕಬ್ಬು ನುರಿಯುವುದು ಮುಖ್ಯ. ಅದಕ್ಕಾಗಿ ಪಿಎಸ್‌ಎಸ್‌ಕೆ ಕಾರ್ಖಾನೆ ಆರಂಭಿಸುವ ಕುರಿತಂತೆ ವೈಜ್ಞಾನಿಕವಾಗಿ ಕ್ರಮ ಜರುಗಿಸಲಾಗುವುದು. ಒಂದು ತಿಂಗಳೊಳಗೆ ಕಾರ್ಖಾನೆಯನ್ನು ಕಬ್ಬು ನುರಿಸುವ ಸ್ಥಿತಿಗೆ ತರಲಾಗುವುದಿಲ್ಲ. ಪೂರಕವಾದ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡು ನಂತರದಲ್ಲಿ ಯಾರೂ ಅನುಮಾನ ಪಡದ ರೀತಿಯಲ್ಲಿ ಕಾರ್ಖಾನೆಗೆ ಚಾಲನೆ ದೊರಕಿಸಲಾಗುವುದು ಎಂದು ಹೇಳಿದರು.
ಹೊಸ ಕಾರ್ಖಾನೆ ನಿರ್ಮಿಸಬಹುದಿತ್ತು: ಮೈಸೂರು ಸಕ್ಕರೆ ಕಾರ್ಖಾನೆಗೆ ಬಿಜೆಪಿ ಸರ್ಕಾರವೂ ಸೇರಿದಂತೆ ಉಳಿದ ಸರ್ಕಾರಗಳು ಕೊಟ್ಟ ಹಣದಿಂದ ಹೊಸ ಕಾರ್ಖಾನೆಯನ್ನೇ ನಿರ್ಮಾಣ ಮಾಡಬಹುದಿತ್ತು. ವಿದ್ಯುತ್ ಉತ್ಪಾದನೆಗೆಂದು ಕೋ-ಜನರೇಷನ್ ಪ್ಲಾಂಟ್ ಹಾಕಿದರು. ಅದೆಲ್ಲವೂ ತುಕ್ಕು ಹಿಡಿದಿದ್ದು, ತೂಕ ಹಾಕುವ ಮಟ್ಟಕ್ಕೆ ಬಂದಿದೆ. ಅವುಗಳನ್ನು ಮಾರಾಟ ಮಾಡಿದರೂ ಖರ್ಚು ಮಾಡಿದ ಹಣದಲ್ಲಿ ಶೇ.10ರಷ್ಟು ಹಣವೂ ಸಿಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಜಿಪಂ ಸಿಇಒ ಕೆ.ಯಾಲಕ್ಕೀಗೌಡ, ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಪರಶುರಾಮ್, ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪನಿರ್ದೇಶಕಿ ಕುಮುದಾ, ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮುಖಂಡರಾದ ಸುನೀತಾ ಪುಟ್ಟಣ್ಣಯ್ಯ, ಸುನಂದಾ ಜಯರಾಂ, ಶಂಭೂನಹಳ್ಳಿ ಸುರೇಶ್, ಬೋರಾಪುರ ಶಂಕರೇಗೌಡ, ಸುಧೀರ್‌ಕುಮಾರ್, ಜಿಪಂ ಸದಸ್ಯ ಎನ್.ಶಿವಣ್ಣ, ಮಾಜಿ ಸದಸ್ಯ ಎ.ಎಲ್.ಕೆಂಪೂಗೌಡ, ಸಿದ್ದರಾಮೇಗೌಡ, ಮೈಷುಗರ್ ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಎಸ್. ಕೃಷ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.