Advertisement

ಗೂಡಂಗಡಿ ನಿರಾಶ್ರಿತರಿಗೆ ಮಳಿಗೆ ವಿತರಣೆ 

01:11 PM Nov 28, 2017 | Team Udayavani |

ನಂಜನಗೂಡು: ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿನ ರಸ್ತೆಗಾಗಿ ಅನಧಿಕೃತ ಗೂಡಂಗಡಿಗಳನ್ನು ತೆರವು ಮಾಡಿಸಿಕೊಂಡ ಫ‌ಲಾನುಭವಿಗಳಿಗೆ ಶಾಸಕ ಕಳಲೆ ಕೇಶವ ಮೂರ್ತಿ ಮಳಿಗೆಗಳನ್ನು ವಿತರಿಸಿದರು.

Advertisement

ಸೋಮವಾರ ನಂಜನಗೂಡಿನ ತಹಶೀಲ್ದಾರ್‌ ದಯಾನಂದ ಅವರೊಂದಿಗೆ ದಿಢೀರ್‌ ದೇವಾಲಯಕ್ಕೆ ಆಗಮಿಸಿದ ಶಾಸಕರು, ದಾಸೋಹ ಭವನದಲ್ಲಿ ದೇವಾಲಯದ ಆಡಳಿತಕ್ಕೆ ಸಂಬಂಧಿಸಿಂದಂತೆ ತುರ್ತು ಸಭೆ ನಡೆಸಿದರು. ಬಳಿಕ, ರಸ್ತೆಗಾಗಿ ಅಂಗಡಿ ಕಳೆದುಕೊಂಡ ಫ‌ಲಾನುಭವಿಗಳ ಪಟ್ಟಿ ಸಿದ್ಧಪಡಿಸಿದರು. ದಶಕಗಳ ಹಿಂದೆ ದೇವಾಲಯದಿಂದ ವ್ಯಾಪಾರಿ ಮಳಿಗೆಗಳನ್ನು ನಿರ್ಮಿಸಿ ಇಂದಿಗೂ ಖಾಲಿಯಾಗಿಯೇ ಉಳಿದಿದ್ದ 21 ಮಳಿಗೆಗಳನ್ನು ವಿತರಿಸಿದರು.

ಕಾಣೆಯಾದ ಬೀಗ ಆಕ್ರೋಶಕ್ಕೊಳಗಾದ ಶಾಸಕರು: ಮಳಿಗೆಗಳನ್ನು ಸ್ಥಳದಲ್ಲಿ ವಿತರಿಸಲು ಶಾಸಕರು ಮುಂದಾದಾಗ ಮಳಿಗೆಗಳ ಬೀಗ ಕಾಣೆಯಾಗಿದೆ ಎಂಬ ಮಾಹಿತಿ ಪಡೆದ ಶಾಸಕರು ಆಕ್ರೋಶಗೊಂಡು ಏನು ನಾಟಕವಾಡುತ್ತಿದ್ದಿದ್ದೀರಾ. ನನ್ನನ್ನು ಏನೆಂದು ತಿಳಿದುಕೊಂಡಿದ್ದಿರಿ ಮೊದಲು ಬೀಗ ತರಿಸಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬೀಗ ಬಾರದಿದ್ದಾಗ ದೇವಾಲಯದ ಎಂಜನಿಯರ್‌ ರವಿಕುಮಾರ ಹಾಗೂ ಮಾಲಿಯನ್ನು ಅಮಾನತುಗೊಳಿಸುವಂತೆ ತಿಳಿಸಿದ ಶಾಸಕರು, ಸಭಾ ನೋಂದಣಿ ಪುಸ್ತಕದಲ್ಲಿ ಅಧಿಕೃತವಾಗಿ  ಬರೆಸಿ ದಾಖಲಿಸಿದರು. ತಕ್ಷಣ 21 ಮಳಿಗೆಗಳ ಬೀಗ ಒಡೆಸಿ ನಿರ್ಗತಿಕರಾದ ಫ‌ಲಾನುಭವಿಗಳಿಗೆ ವಿತರಿಸಲು ಮುಂದಾದರು. ತಮ್ಮ ಅಮಾನತು ಸುದ್ದಿ ತಿಳಿದ ಎಂಜನಿಯರ್‌ ರವಿಕುಮಾರ ದೌಡಾಯಿಸಿ ಬಂದವರೇ ಎಲ್ಲಾ ಮಳಿಗೆಗಳ ಬೀಗ ತೆಗೆಸಿದ್ದೇನೆಂದರು.

ನಂತರ 38 ಫ‌ಲಾನುಭವಿಗಳ ಪಟ್ಟಿ ಓದಿದ ಕಳಲೆ ನಂತರ ನಾಲ್ಕು ಜನರನ್ನು ಸೇರಿಸಿ  ಅಂಗಡಿಗಳ ಬಾಗಿಲು ತೆಗೆಸಿ ತಲಾ ಇಬ್ಬರಿಗೆ ಒಂದು ಮಳಿಗೆಯಂತೆ  42 ಫ‌ಲಾನುಭವಿಗಳಿಗೆ   21 ಮಳಿಗೆಗಳನ್ನು ವಿತರಿಸಿದರು. ತಾತ್ಕಾಲಿಕ ಮಳಿಗೆಯನ್ನು ದಿನಕ್ಕೆ ಒಂದು ರೂ.,ಗೆ ನೀಡಲಾಗಿದೆ.

Advertisement

ನೀವೆಲ್ಲಾ ದಿನಕ್ಕೆ  ಒಂದು ರೂ.,ನಂತೆ ದೇವಾಲಯಕ್ಕೆ ಬಾಡಿಗೆ ಪಾವತಿಸಬೇಕು. ವಿದ್ಯುತ್‌ ಸಂಪರ್ಕವನ್ನು ನಿಮ್ಮ ಸ್ವಂತ ಖರ್ಚಿನಲ್ಲೇ ಒದಗಿಸಿಕೊಳ್ಳಬೇಕು. ಪೂಜಾ ಸಾಮಗ್ರಿ ಹೊರತು ಪಡಿಸಿ ಬೇರಾವುದೇ ಪದಾರ್ಥಗಳನ್ನು ಮಾರುವಂತಿಲ್ಲ ಎಂದು ಶಾಸಕರು ತಿಳಿಸಿದರು.

ಸಹಿ ಹಾಕಲು ನಿರಾಕರಿಸಿದ ಅಧಿಕಾರಿ: ಸಭೆ ಮುಗಿಯುವವರಿಗೂ ಸಭೆಯಲ್ಲೇ ಇದ್ದ ಶ್ರೀಕಂಠೇಶ್ವರ ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಕುಮಾರಸ್ವಾಮಿ, ಶಾಸಕರು ಬರೆಸಿದ ಮಳಿಗೆ ವಿತರಣಾ ನಿರ್ಣಯಕ್ಕೆ ಸಹಿ ಹಾಕಲು ನಿರಾಕರಿಸಿದರು. ಈ ವೇಳೆ ಕೆಲಸ ಮಾಡದಿದ್ದರೆ ನಿರ್ಗಮಿಸಲು ಸಿದ್ಧರಾಗಿ ಎಂದು ಶಾಸಕರು ಗುಡುಗಿ ಜಿಲ್ಲಾಧಿಕಾರಿಗಳು ಹಾಗೂ ಸಚಿವರೊಂದಿಗೆ ಮಾತನಾಡಿದ್ದೇನೆಂದರು. ಒಪ್ಪದ ಅಧಿಕಾರಿ ಪುಸ್ತಕಕ್ಕೆ ಸಹಿ ಮಾಡದೇ ನಿರ್ಗಮಿಸಿದರು.

ವಿತರಣೆಗೆ ಅವಕಾಶ ಇಲ್ಲ: ದಿ.ಬೆಂಕಿ ಮಹದೇವು ಕಾಲದಲ್ಲಿ ನಿರ್ಮಾಣವಾದ ಮಳಿಗೆಗಳನ್ನು ಆಗ ಹರಾಜು ನಡೆಸಿದಾಗ ಈ ಮಳಿಗೆಗಳು 7000 ರೂ.,ಗಳಿಂದ 17 000 ರೂ. ವರೆಗೆ ಹರಾಜಾಗಿತ್ತು. ರಾಜ್ಯ ಲೋಕೋಪಯೋಗಿ ಇಲಾಖೆ ಅಂದು ನಿಗದಿಪಡಿಸಿದ್ದ ಮಳಿಗೆಗಳ ಬೆಲೆ ಅತ್ಯಂತ ದುಬಾರಿ ಎಂದು 14 ವರ್ಷಗಳ ನಂತರ ಮನಗಂಡ ಅದೇ ಇಲಾಖೆ 2016 ಸೆಪ್ಟಂಬರ್‌ನಲ್ಲಿ  ಪ್ರತಿ ಮಳಿಗೆಗಳಿಗೆ 2.795 ರೂ ನಿಗದಿಪಡಿಸಿತ್ತು.

ಈಗ ಪುನಃ ಹರಾಜಿನ ಸಿದ್ಧತೆಯಲ್ಲಿದ್ದ ದೇವಾಲಯಕ್ಕೆ ಶಾಸಕರ ಮಳಿಗೆ ಭಾಗ್ಯದಿಂದ ತುಂಬಾ ನಷ್ಟವಾಗುತ್ತದೆ.  ಹಾಗಾಗಿ ನಾನು ನಿರ್ಣಯಕ್ಕೆ ಸಹಿ ಹಾಕಿಲ್ಲ.  ಜಿಲ್ಲಾಧಿಕಾರಿಗಳು ಅಧಿಕೃತ ಅನುಮತಿ ನೀಡಿದರೆ ಮಾತ್ರ ಪಾಲಿಸಲಾಗುವುದು. ಅಧಿಕಾರಿಗಳಿಗಾಗಲಿ, ಜನಪ್ರತಿನಿಧಿಗಳಿಗಾಗಲಿ ವಿತರಣೆಗೆ ಅಧಿಕಾರವಿಲ್ಲ ಎಂದು ಅಧಿಕಾರಿ ಕುಮಾರಸ್ವಾಮಿ ಹೇಳಿದರು.   

Advertisement

Udayavani is now on Telegram. Click here to join our channel and stay updated with the latest news.

Next