ಆನೇಕಲ್: ಸಾಮಾಜಿಕ ಕಳಕಳಿ ಕಾರ್ಯಕ್ರಮ ಮಾಡುವ ಮೂಲಕ ಜನರಿಗೆ ಹತ್ತಿರವಾಗಬೇಕು ಎಂದು ಬೆಂಗಳೂರು ದಕ್ಷಿಣ ವಿದಾನಸಭಾ ಕ್ಷೇತ್ರದ ಶಾಸಕ ಕೃಷ್ಣಪ್ಪ ಹೇಳಿದರು.
ಶ್ಯಾಮ್ ಗೋಶಾಲೆ ವತಿಯಿಂದ ಬನ್ನೇರುಘಟ್ಟದಲ್ಲಿ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಗೋವುಗಳ ಸಂರಕ್ಷಣೆ ಜೊತೆಗೆ ಬಡವರಿಗೆ ಆಶ್ರಯ ನೀಡುವ ನಿಟ್ಟಿನಲ್ಲಿ ಉಚಿತ ಸಾಮೂಹಿಕ ವಿವಾಹ ಮಾಡುತಿರುವುದು ಶ್ಲಾಘನಿಯ ಎಂದರು.
ಜಿಪಂ ಮಾಜಿ ಅಧ್ಯಕ್ಷ ಬಿಜೆಪಿ ಮುಖಂಡ ಕೆ.ಸಿ.ರಾಮಚಂದ್ರ ಮಾತನಾಡಿ, ಸಮಾಜದಿಂದ ಮನುಷ್ಯ ಪಡೆದ ಅಲ್ಪ ಲಾಭವನ್ನು ಸಮಾಜದ ಉತ್ತಮ ಕೆಲಸಗಳಿಗೆ ಮೀಸಲಿಡುವ ಮನೋಭಾವ ನಮ್ಮಲ್ಲಿ ಬರಬೇಕು. ಶ್ಯಾಮ್ ಗೋಶಾಲೆಯಯವರು 21 ಜೋಡಿಗಳಿಗೆ ಮದುವೆಗೆ ಬೇಕಾದ ವಸ್ತುಗಳನ್ನು ನೀಡಿ, ಉಚಿತವಾಗಿ ಮದುವೆ ಮಾಡಿಸಿದ್ದಾರೆ ಎಂದರು.
ಸಹಬಾಳ್ವೆ ನಡೆಸಿ: ಹೆಣ್ಣು ಕೇವಲ ಭೋಗದ ವಸ್ತುವಲ್ಲ ಎಂದು ಗಂಡು ಅರಿಯಬೇಕು. ಸೀರಿಯಲ್, ಟೀವಿಯಲ್ಲಿ ನಡೆಯುವಂತಹ ಜೀವನವಾಗದೆ, ಹೆಣ್ಣು ಮನೆ ಬೆಳಗುವ ನಂದಾದೀಪ ಆಗಬೇಕು. ಇತ್ತೀಚೆಗೆ ನಡೆಯುತ್ತಿರುವ ಅತ್ಯಾಚಾರ, ಅವ್ಯವಹಾರಗಳು ಮನುಷ್ಯನ ಜೀವನವನ್ನೇ ಹಾಳು ಮಾಡುತ್ತಿರುವ ಸಂದರ್ಭದಲ್ಲಿ, ಹೆಣ್ಣನ್ನು ಗೌರವಿಸಿ, ಬಡತನವಿದ್ದರೂ ಸಹಿಸಿ ಜೀವನ ನಡೆಸುವುದೇ ಸಹಬಾಳ್ವೆ ನಡೆಸಬೇಕು ಎಂದು ಸಲಹೆ ನೀಡಿದರು.
ಉಚಿತ ವಿತರಣೆ: ಮದುವೆಯಲ್ಲಿ 21 ಜೋಡಿ ವಧು ವರರಿಗೆ ವಸ್ತ್ರ, ತಾಳಿ, ಉಚಿತ ಪಾತ್ರೆ ಸಾಮಾನು ಸೆಟ್, ಕಾಲು ಚೈನ್, ಕಾಲುಂಗುರ ಮತ್ತು ಕಲರ್ ಟೀವಿ, ಗ್ಯಾಸ್ ಸ್ಟೌ ಮತ್ತು ಹಾಸಿಗೆ, ಬೆಡ್ ಶೀಟ್‌ಗಳನ್ನು ಉಚಿತವಾಗಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂಜಯ್ ಗೋಯಲ್, ಗೋಶಾಲೆ ಅಧ್ಯಕ್ಷ ಸತೀಶ್ ಗೋಯಲ್, ತಾಪಂ ಉಪಾದ್ಯಕ್ಷ ಮುನಿರಾಜು, ರಾಮೋಜಿಗೌಡ, ಕಾಂಗ್ರೆಸ್ ಮುಖಂಡ ಸಿ.ಕೆ.ಚಿನ್ನಪ್ಪ, ಸುರೇಶ್ ಕುಮಾರ್, ಯುವ ಕಾಂಗ್ರೆಸ್ ಮುಖಂಡ ನಾಗೇಂದ್ರ ರೆಡ್ಡಿ, ಕುನಾಲ್ ಗೋಯಲ್, ಶಕುಂತಲಾ ದೇವಿ, ಕಾಂಗ್ರೆಸ್ ಮುಖಂಡ ಅಚ್ಯುತರಾಜು, ಕರವೇ ರಾಜ್ಯ ಉಪಾಧ್ಯಕ್ಷ ಆರ್ .ಪುನೀತ್, ಚರ್ಥಬುಜ ಗುಪ್ತಾ, ರಿಷಿ ಗುಪ್ತಾ, ಸಂಜಯ್ ಭವ್ಯಂ, ರಾಹುಲ್, ಬಿಜೆಪಿ ಮುಖಂಡರಾದ ಜಯರಾಮ, ಹರೀಶ್, ಅನಿಲ್, ಮಂಜು, ರಾಧಾ ಕೃಷ್ಣ ಮತ್ತಿತರರಿದ್ದರು