Advertisement

ದಸರಾ ಆಚರಣೆ ಬಗ್ಗೆ ಅಸಮಾಧಾನ

11:34 AM Oct 21, 2018 | Team Udayavani |

ಮೈಸೂರು: ನಾಡಹಬ್ಬ ದಸರಾ ಕಾರ್ಯಕ್ರಮಗಳಿಂದ ದೂರ ಉಳಿದಿದ್ದ ಸ್ಥಳೀಯ ಕಾಂಗ್ರೆಸ್‌ ಜನಪ್ರತಿನಿಧಿಗಳು ಕಡೆಗೂ ಮೌನ ಮುರಿದಿದ್ದಾರೆ. ದಸರಾ ಆಚರಣೆ, ವ್ಯವಸ್ಥೆಯ ವಿಷಯದಲ್ಲಿ ಮಿತ್ರ ಪಕ್ಷದ ಸಚಿವರ ಕಾರ್ಯವೈಖರಿ ಬಗ್ಗೆ ಕಾಂಗ್ರೆಸ್‌ ಶಾಸಕ ತನ್ವೀರ್‌ ಸೇಠ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Advertisement

ದಸರಾ ಮಹೋತ್ಸವಕ್ಕೆ ಸ್ಥಳೀಯ ಕಾಂಗ್ರೆಸ್‌ ಜನಪ್ರತಿನಿಧಿಗಳಿಗೆ ಸೂಕ್ತ ಆಹ್ವಾನ ನೀಡದ ಕಾರಣ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿಲ್ಲ. ಅಲ್ಲದೇ ನಾಡದೇವತೆ ಚಾಮುಂಡೇಶ್ವರಿ ಹೆಸರಿನಲ್ಲಿ ದಸರಾ, ಜಂಬೂಸವಾರಿ ನಡೆಯುವುದರಿಂದ ದಸರಾ ಆಚರಣೆಗೆ ಅಡ್ಡಿಪಡಿಸಲಿಲ್ಲ.

ಆದರೆ ಈ ಬಾರಿಯ ದಸರಾ ಮಹೋತ್ಸವ ಅಧಿಕಾರಿಗಳ ದರ್ಬಾರ್‌ ನಡುವೆ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರ ಕೈಗೊಂಬೆಯಂತೆ ವರ್ತಿಸಿತು. ದಸರಾ ವೇಳೆ ಉಂಟಾದ ಶಿಷ್ಠಾಚಾರ ಉಲ್ಲಾಂಘನೆ, ಪಾಸ್‌ಗಳ ದುರ್ಬಳಕೆ ಮತ್ತು ಪೊಲೀಸರ ಕರ್ತವ್ಯ ಲೋಪಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸುವಂತೆ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಹೆಚ್ಚು ಪಾಸ್‌ ವಿತರಣೆ: ಈ ಬಾರಿ ದಸರಾ ಮಹೋತ್ಸವದ ಪಾಸ್‌ ವಿತರಣೆಯಲ್ಲಿ ಸಾಕಷ್ಟು ಗೊಂದಲ ಉಂಟಾಗಿದ್ದು, ಅಗತ್ಯಕ್ಕಿಂತ ಹೆಚ್ಚಿನ ಪಾಸ್‌ಗಳನ್ನು ಹಂಚಿಕೆ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ 10 ಸಾವಿರ ಪಾಸ್‌ ಹೋಗಿದೆ. ಸಚಿವ ಸಾ.ರಾ. ಮಹೇಶ್‌ಗೆ 5 ಸಾವಿರ, ಮುಖ್ಯಮಂತ್ರಿಗಳ ಕಚೇರಿಗೆ 2 ಸಾವಿರ ಪಾಸ್‌ ವಿತರಣೆಯಾಗಿದೆ.

ಅಗತ್ಯಕ್ಕಿಂತ ಹೆಚ್ಚು ಪಾಸ್‌ಗಳ ವಿತರಣೆಯಿಂದಾಗಿ ಗೋಲ್ಡ್‌ ಕಾರ್ಡ್‌ ಖರೀದಿಸಿ ದಸರಾ ನೋಡಲು ಬಂದವರಿಗೂ ಸಮಸ್ಯೆ ಉಂಟಾಯಿತು. ಹೀಗಾಗಿ ಅಗತ್ಯಕ್ಕಿಂತ ಹೆಚ್ಚು ಪಾಸ್‌ ಹೇಗೆ ವಿತರಣೆಯಾಗಿದೆ, ಎಷ್ಟು ಪಾಸ್‌ ಮುದ್ರಣವಾಗಿದೆ ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

Advertisement

ಮನೆ ಕಾರ್ಯಕ್ರಮ ಅಲ್ಲ: ದಸರಾ ನಾಡಹಬ್ಬ, ಎಲ್ಲರನ್ನೂ ವಿಶ್ವಾಸಕ್ಕೆ ತೆಗದುಕೊಂಡು ಆಚರಿಸಬೇಕಿತ್ತು. ಹೀಗಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ದಸರಾ ತಮ್ಮ ಸ್ವತ್ತು, ತಮ್ಮ ಮನೆಯ ಕಾರ್ಯಕ್ರಮ ಎಂಬ ರೀತಿಯಲ್ಲಿ ವರ್ತಿಸಿದರು. ಹೀಗಾಗಿ ಇದು ನಾಡಹಬ್ಬವಾಗುವ ಬದಲು ಅಪ್ಪ, ಮಕ್ಕಳು, ಹೆಂಡತಿ, ಮೊಮ್ಮಕ್ಕಳು ಪಾಲ್ಗೊಳ್ಳುವ ಜಾತ್ರೆಯಾಯಿತು.

ರಾಜ್ಯದಲ್ಲಿ ಅಧಿಕಾರ ನಡೆಸುವಲ್ಲಿ ನಾವು ಒಂದಾಗಿದ್ದರೂ ಅದಕ್ಕೆ ಧಕ್ಕೆ ಬಾರದಂತೆ ಅವ್ಯವಸ್ಥೆಗಳ ವಿರುದ್ಧ ಹೋರಾಟ ನಡೆಸುತ್ತೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್‌, ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್‌. ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್‌ ಹಾಜರಿದ್ದರು. 

ಶಿಷ್ಠಾಚಾರ ಉಲ್ಲಂಘನೆ: ಆಹ್ವಾನ ಪತ್ರಿಕೆ ಮುದ್ರಣದಲ್ಲಿಯೂ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಮೊದಲ ಮುದ್ರಣವಾದ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರನ್ನು 5ನೇ ಸ್ಥಾನದಲ್ಲಿ ಮುದ್ರಿಸಿ, ಜೆಡಿಎಸ್‌ ರಾಜ್ಯಾಧ್ಯಕ್ಷರ ಹೆಸರನ್ನು ಮೊದಲು ಹಾಕಲಾಗಿತ್ತು. ಈ ಬಗ್ಗೆ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರೂ ತಪ್ಪನ್ನು ಸರಿಪಡಿಸಿಕೊಳ್ಳಲಿಲ್ಲ.

ಬಳಿಕ ಮಧ್ಯಮಗಳಲ್ಲಿ ಈ ವಿಷಯ ಪ್ರಸ್ತಾಪವಾದ ಮೇಲೆ ನನ್ನ ಹೆಸರು ಮೊದಲು ಹಾಕಲಾಯಿತು. ರಾಜ್ಯದ ಎಲ್ಲಾ ಜನಪ್ರತಿನಿಧಿಗಳಿಗೆ ಆಹ್ವಾನ ಪತ್ರಿಕೆ ಕಳುಹಿಸುವ ವಾಡಿಕೆ ಮತ್ತು ಪದ್ದತಿ ಇದೆ. ರಾಜ್ಯಪಾಲರು, ಸಿಎಂ ಮುಂದಿನ ವೇದಿಕೆಯಲ್ಲಿ ವಿವಿಐಪಿಗಳು ಮಾತ್ರ ಕೂರಬೇಕಿದೆ. ಜನಪ್ರತಿನಿಧಿಗಳಿಗೆ ನಿರ್ದಿಷ್ಟ ಪಾಸ್‌ಗಳನ್ನು ನೀಡುವ ವಿಷಯದಲ್ಲಿ ವಾಡಿಕೆ ಇದೆ.

ಆಡಳಿತ ಮತ್ತು ವಿಪಕ್ಷಗಳಿಗೆ ಒಂದಿಷ್ಟು ಪಾಸುಗಳನ್ನು ನೀಡಲಾಗುತ್ತದೆ. ಅದರಂತೆ ಕಾಂಗ್ರೆಸ್‌ ಪಕ್ಷಕ್ಕೆ 8 ಹಾಗೂ ತಮಗೆ 100 ಪಾಸ್‌ಗಳನ್ನು ನೀಡಲಾಗಿತ್ತಾದರೂ, ಇದನ್ನು ವಾಪಸ್‌ ಕಳುಹಿಸಿದ್ದೇವೆ. ಹೀಗಾಗಿ ದಸರೆಗೆ ಎಷ್ಟು ಪಾಸ್‌ಗಳನ್ನು ಮುದ್ರಿಸಲಾಗಿತ್ತು, ಎಂಬ ಬಗ್ಗೆ ಜಿಲ್ಲಾಡಳಿತ ಶ್ವೇತಪತ್ರ ಹೊರಡಿಸಬೇಕು. ಈ ಕುರಿತು ತನಿಖೆ ನಡೆಯುವವರೆಗೂ ಬಿಡುವುದಿಲ್ಲ ಎಂದು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next