Advertisement

ಜೆಡಿಎಸ್‌ ಟಿಕೆಟ್‌ ತರ್ತೇವೆ, ಚುನಾವಣೆಗೆ ಸಿದ್ಧರಾಗಿ 

12:49 PM Apr 17, 2018 | Team Udayavani |

ಕೋಲಾರ: ಶಾಸಕ ವರ್ತೂರು ಪ್ರಕಾಶ್‌ರನ್ನು ಸೋಲಿಸುವ ಶಕ್ತಿ ನಿಮಗೆ ಮಾತ್ರ ಇದೆ. ಚಿಂತಿಸಬೇಡಿ. ನಾವೇ ವರಿಷ್ಠರೊಂದಿಗೆ ಚಿರ್ಚಿಸಿ ಜೆಡಿಎಸ್‌ನಿಂದ ಟಿಕೆಟ್‌ ತರುತ್ತೇವೆಂದು ಮಾಜಿ ಸಚಿವ ಕೆ.ಶ್ರೀನಿವಾಸಗೌಡರಿಗೆ ಅಭಯ ನೀಡಿರುವ ಬೆಂಬಲಿಗರು, ಪ್ರಚಾರ ಆರಂಭಿಸುವುದಾಗಿ ಘೋಷಿಸಿದರು.

Advertisement

ಕಳೆದ ಒಂದು ವಾರದಿಂದೀಚೆಗೆ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಸಾಕಷ್ಟು ಗೊಂದಲಗಳು ಉಂಟಾಗಿರುವ ಹಿನ್ನೆಲೆಯಲ್ಲಿ ನಗರದ ತಮ್ಮ ನಿವಾಸಕ್ಕೆ ಸೋಮವಾರ ಆಗಮಿಸಿದ್ದ ಬೆಂಬಲಿಗರು ಶ್ರೀನಿವಾಸಗೌಡರಿಗೆ ಈ ಅಭಯ ನೀಡಿದರು.

ಈ ಸಂದರ್ಭದಲ್ಲಿ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಗೌಡರು, “ನಾನು ಚುನಾವಣೆಗೆ ನಿಲ್ಲುವುದು ಗ್ಯಾರೆಂಟಿ. ಅನುಮಾನವೇ ಬೇಡ. ಯಾವ ಪಕ್ಷದಿಂದ ನಿಲ್ಲುತ್ತೇನೆ ಎಂಬುದು ಗೊತ್ತಿಲ್ಲ’ ಎಂದು ತಿಳಿಸಿದಾಗ, ಬೆಂಬಲಿಗರು ಜೆಡಿಎಸ್‌ನಿಂದಲೇ ಟಿಕೆಟ್‌ ತರುವ ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣೆ ಸಂದರ್ಭದಲ್ಲಿ ರಾಜಕಾರಣದಲ್ಲಿ ಇಂತಹ ಗೊಂದಲಗಳು ಸರ್ವೆà ಸಾಮಾನ್ಯವಾಗಿರುತ್ತವೆ. ಅಂತಹ ಸಮಸ್ಯೆಗಳಿಗೆ ನೀವು ಯಾರೂ ಸಹ ಕಿವಿಗೊಡುವುದು, ಗೊಂದಲಗಳಿಗೆ ಈಡಾಗುವ ಅವಶ್ಯಕತೆ ಇಲ್ಲ. ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಂತೂ ಖಚಿತ.

ಹೀಗಾಗಿ, ನನ್ನ ಪರವಾಗಿ ಕೆಲಸ ಮಾಡುವಿರಾ ಎಂದು ಪ್ರಶ್ನಿಸಿದರು. ಅದಕ್ಕೆ ಸ್ಥಳದಲ್ಲಿದ್ದ ನೂರಾರು ಬೆಂಬಲಿಗರು ಇಂದಿನಿಂದಲೇ ಬೇಕಾದರೆ ನಾವು ಹಗಲು ರಾತ್ರಿ ಕೆಲಸ ಮಾಡುತ್ತೇವೆ. ನೀವು ಯಾವುದೇ ಪಕ್ಷ ಅಲ್ಲದೇ ಪಕ್ಷೇತರವಾಗಿ ಸ್ಪರ್ಧಿಸಿದರೂ ನಾವು ಕೆಲಸ ಮಾಡಿ ನಿಮ್ಮನ್ನು ಗೆಲ್ಲಿಸುತ್ತೇವೆ ಎಂದು ಭರವಸೆ ನೀಡಿದರು.

Advertisement

 ಟಿಕೆಟ್‌ ಅನುಮಾನವಿತ್ತು: ಜೆಡಿಎಸ್‌ ಪಕ್ಷದಿಂದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಯಿತು. ಅದರಲ್ಲಿ ಜಿ.ಕೆ.ವೆಂಕಟಶಿವಾರೆಡ್ಡಿ ಹೆಸರಿದ್ದು, ತಮ್ಮ ಹೆಸರು ಇಲ್ಲವಾಗಿತ್ತು. ಆಗಲೇ ನನಗೆ ಟಿಕೆಟ್‌ ತಪ್ಪುವ ಸಾಧ್ಯತೆ ಇದೆ ಎನ್ನುವ ಬಗ್ಗೆ ಅನುಮಾನ ಬಂದಿತ್ತು. ಆದರೂ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೆ ಎಂದು ಶ್ರೀನಿವಾಸಗೌಡರು ತಿಳಿಸಿದರು.

ಅದಕ್ಕಾಗಿಯೇ ಇನ್ನು ತನ್ನ ಪ್ರಯತ್ನ ಎಂಬಂತೆ ಕಾಂಗ್ರೆಸ್‌ ಕಡೆಗೆ ಹೋಗಿದ್ದು, ಅಲ್ಲಿಯೂ ಸಹ ಇನ್ನೇನು ಟಿಕೆಟ್‌ ಸಿಕ್ಕೇ ಹೋಯಿತು ಎನ್ನುವಷ್ಟರಲ್ಲಿ ಸಾಕಷ್ಟು ಬದಲಾವಣೆಗಳು ಆದವು. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ನಾನು ಯಾವುದೇ ತೀರ್ಮಾನ ಕೈಗೊಳ್ಳದೆ ತಟಸ್ಥವಾಗಿದ್ದೇನೆ ಎಂದರು.

ಗೋಕುಲ್‌ ಕಲ್ಯಾಣ ಮಂಟಪದಲ್ಲಿ ಎರಡು ದಿನಗಳ ಒಳಗಾಗಿ ಬೆಂಬಲಿಗರ ಸಭೆ ನಡೆಸೋಣ. ಅಲ್ಲಿ ನೀವೆಲ್ಲರೂ ಯಾವ ತೀರ್ಮಾನ ಮಾಡಿದರೆ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ಹೀಗಾಗಿ, ಸಭೆಗೆ ಸಿದ್ಧತೆಗಳನ್ನು ನಡೆಸಿ ಎಂದು ಸೂಚಿಸಿದರು.

ಬೆಂಬಲಿಗರ ಜಮಾವಣೆ: ಇನ್ನು ಗೌಡರು ಇಷ್ಟು ದಿನಗಳ ಬಳಿಕ ಸಿಕ್ಕಿದ ಹಿನ್ನೆಲೆಯಲ್ಲಿ, ಈಗಾಗಲೇ ನಡೆದಿರುವ ರಾಜಕೀಯ ಬೆಳವಣಿಗೆಗಳಿಂದಾಗಿ ದಿಕ್ಕೆಟ್ಟಿರುವ ಶ್ರೀನಿವಾಸಗೌಡರ ಬೆಂಬಲಿಗರು ಸೋಮವಾರ ತಂಡೋಪತಂಡವಾಗಿ ಅವರ ನಿವಾಸಕ್ಕೆ ಆಗಮಿಸಿ, ಅವರನ್ನು ಮಾತನಾಡಿಸಿ ಸಲಹೆಗಳನ್ನು ನೀಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಅದರಲ್ಲೂ ಬಹುತೇಕ ಮಂದಿ ಜೆಡಿಎಸ್‌ನ ಜನಪ್ರತಿನಿಧಿಗಳು, ಮುಖಂಡರೇ ಹೆಚ್ಚಾಗಿ ಕಂಡುಬಂದಿದ್ದರು. ಕಾಂಗ್ರೆಸ್‌ನಲ್ಲಿ ಜಮೀರ್‌ಪಾಷಾಗೆ ಟಿಕೆಟ್‌ ನೀಡಿರುವ ಹಿನ್ನೆಲೆಯಲ್ಲಿ ಬೇಸತ್ತ ನಗರಸಭೆ ಮಾಜಿ ಸದಸ್ಯ  ಮುಕ್ಕಡ್‌ ವೆಂಕಟೇಶ್‌, ಮಾಜಿ ಉಪಾಧ್ಯಕ್ಷ ಖಲೀಲ್‌ ಅವರು ಸಹ ಶ್ರೀನಿವಾಸಗೌಡರನ್ನು ಭೇಟಿಯಾಗಿ, ಬೆಂಬಲಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ನಾಗನಾಳ ಸೋಮಣ್ಣ, ದಯಾನಂದ್‌, ತಾಪಂ ಸದಸ್ಯ ಕೆ.ವಿ.ಮುರಳಿರೆಡ್ಡಿ, ಜೆಡಿಎಸ್‌ ಜಿಲ್ಲಾ ಕಾರ್ಯಾಧ್ಯಕ್ಷ ಅನ್ವರ್‌ಪಾಷ, ಮುಖಂಡರಾದ ಗೋಪಾಲಪ್ಪ, ವಕ್ಕಲೇರಿ ಬಂಡಿ ವೆಂಕಟೇಶಪ್ಪ, ಕ್ಯಾಲನೂರು ಸಿರಾಜ್‌, ವಡಗೂರು ರಾಕೇಶ್‌, ರಮೇಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next