Advertisement

ಸ್ವಾತಂತ್ರ್ಯಕ್ಕೂ, ಸ್ವಚ್ಛಂದಕ್ಕೂ ಇದೆ ಅಂತರ

06:00 AM Aug 15, 2018 | |

ದೋಣಿಯಲ್ಲಿ ನಾಲ್ವರು ಹೊರಟಿದ್ದಾರೆ. ಅವರ ಉಲ್ಲಾಸಕ್ಕೆ  ಸಾಟಿಯಿಲ್ಲ. ಆದರೆ ತಮಗೆ ಯಾರ ಅಂಕೆಯೂ ಇಲ್ಲ ಎಂದು ಆ ವಿಹಾರಿಗಳು ಮೈಮರೆತರೆ ಅನಾಹುತ ಖಂಡಿತ. ಹದವಾಗಿ ಹುಟ್ಟು ಹಾಕಬೇಕು, ಅಲೆಗಳತ್ತ ಗಮನವಿರಬೇಕು. ನೀರು ಹೊಕ್ಕರೆ ಅದನ್ನು ಹೊರಹಾಕಬೇಕು. ಎತ್ತ ಹೋಗ ಬೇಕೆಂಬ ಸ್ಪಷ್ಟತೆ ಇರದಿದ್ದರೆ ಗಾಳಿ ಎಷ್ಟೇ ಅನುಕೂಲಕರವಾಗಿ ಬೀಸಿದರೂ ಅವರ ಪಾಲಿಗೆ ನಿಷ್ಪ್ರಯೋಜಕ. 

Advertisement

ಸ್ವಾತಂತ್ರ್ಯವೆಂದರೆ ಏನಾದರೂ ಮಾಡಬಹುದು, ಹೇಗಾದರೂ ಇರಬಹುದು ಎಂದು ವಾಚ್ಯಾರ್ಥ ಹಿಂಬಾಲಿಸಿದರೆ ಎಡವಟ್ಟೇ ಎನ್ನಲು ಈ ನಿದರ್ಶನ ಸಾಕು. ನಿಜವಾಗಿಯೂ ಸ್ವಾತಂತ್ರ್ಯ ಒಬ್ಬರು ತಾವು ಬಯಸಿದಂತೆ ಇರುವುದು, ಆಲೋಚಿಸುವುದು, ನಂಬುವುದು, ಮಾತನಾಡುವುದು, ಪೂಜಿಸುವುದು/ ಪೂಜಿಸದಿರುವುದು ಒಟ್ಟಾರೆ ಇಷ್ಟಪಟ್ಟಂತೆ ಮಾಡು ವುದು. ಸರಿಯೇ. ಆದರೆ ಇದರೊಂದಿಗೆ ಒಂದು ಮಹತ್ತರ ಷರಾ ಇದೆ; “ಒಬ್ಬರ ಆಯ್ಕೆಗಳು ಇನ್ನೊಬ್ಬ ವ್ಯಕ್ತಿಯ ಸ್ವಾತಂತ್ರ್ಯವನ್ನು ಅತಿಕ್ರಮಿಸಬಾರದು’. 

ಸ್ವಾತಂತ್ರ್ಯ, ಸ್ವಚ್ಛಂದ ಇವೆರಡು ವಿರುದ್ಧ ಪದಗಳೇ. ಸ್ವಾತಂತ್ರ್ಯ ಅನನ್ಯವೂ ಸಂಕೀರ್ಣವೂ ಆದ ಹೊಣೆಗಾರಿಕೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಯಾರ ವಿರುದ್ಧವೂ ಅಲ್ಲ, ಯಾರನ್ನೂ ಅನಾದರಿಸಲಾಗಲಿ ಪರಾಧೀನ ಗೊಳಿಸಲಾಗಲಿ ಅಲ್ಲ. ನಮ್ಮ ಬದುಕನ್ನು ಸುಧಾರಿಸುವ ಸಲುವಾಗಿ ಎಂದು ಪದೇ ಪದೇ ಸ್ಪಷ್ಟಪಡಿಸುತ್ತಿ ದ್ದರು. ಅವರ ಈ ಉದ್ಗಾರ ಸ್ವಾತಂತ್ರ್ಯಕ್ಕೆ ಹಂಬಲಿಸಿದ, ಹಂಬಲಿಸುವ ಎಲ್ಲ ದೇಶಗಳಿಗೂ ಅನ್ವಯಿಸುವುದು. ಇತರರ ಸ್ವಾತಂತ್ರ್ಯವನ್ನು ಗೌರವಿಸುವುದರಲ್ಲಿ ನಮ್ಮ ಸ್ವಾತಂತ್ರ್ಯ ಸಾಂದ್ರಗೊಂಡಿದೆ. ಯಾರು ಪರರ ಸ್ವಾತಂತ್ರ್ಯವನ್ನು ನಿರಾಕರಿಸುವರೋ ಅವರು ಸ್ವಾತಂತ್ರ್ಯಕ್ಕೆ ಅರ್ಹರಲ್ಲ ಎಂದರು ಅಬ್ರಹಾಂ ಲಿಂಕನ್‌. ಸಮಾಜಕ್ಕೆ ಗೌರವಯುತವಾಗಿ, ಉಪಯುಕ್ತವಾಗಿ ನಡೆದು ಕೊಳ್ಳು ವುದೇ ಸ್ವಾತಂತ್ರ್ಯದ ಧ್ಯೇಯ. ಪರಸ್ಪರ ಮನ್ನಣೆ ಯಿದ್ದರೆ ಭಿನ್ನಾಭಿಪ್ರಾಯಗಳಿದ್ದರೂ ಹಗೆತನಕ್ಕೆ ಕಾರಣವಾಗವು. ಬದಲಿಗೆ ಸೌಹಾರ್ದ ಅಲ್ಲಿ ಪುಟಿ ದೇಳು ವುದು. ಕೊಡು-ಪಡೆ ನೆಲೆಗೊಯ್ಯುವ ಶಕ್ತಿ ಸ್ನೇಹಕ್ಕಿದೆ. ಒಂದರ್ಥದಲ್ಲಿ ಸ್ವಾತಂತ್ರ್ಯ ಸಂತಸಕ್ಕಿಂತ ಹೆಚ್ಚಾಗಿ ಭಯವನ್ನೇ ತರುತ್ತದೆ! ಏಕೆಂದರೆ ಅದು ಗಂಭೀರ ಉತ್ತರದಾಯಿತ್ವವನ್ನು ಹೊರಿಸಿರುತ್ತದೆ. ಇನ್ನು ಮುಂದೆ ನೀನು ಮನಬಂದಂತೆ ವರ್ತಿಸಲಾಗ ದೆಂಬ ಎಚ್ಚರಿಕೆಯನ್ನು ನೀಡಿರುತ್ತದೆ. 

ಮನುಷ್ಯ ಎಷ್ಟಾದರೂ ಸಮಾಜ ಜೀವಿ. ಸಮಾಜ ಸಮಷ್ಟಿ ಹಿತಕ್ಕಾಗಿ ಜನರದೇ ನಿರ್ಮಿತಿ. ಸಮಾಜದಲ್ಲಿ ರಬೇಕು, ಆದರೆ ಅದರ ಗೊಡವೆ ಒಲ್ಲೆ ಎನ್ನಲಾಗದು. ನಾವೆಲ್ಲರೂ ಸಮಾಜದ ಮಕ್ಕಳು. ನಮಗಿಷ್ಟವಿ ದೆಯೋ ಇಲ್ಲವೋ ಸಮಾಜ ವಿಧಿಸುವ ಕಟ್ಟುಪಾಡು ಗಳಂತೆ ಬಾಳಬೇಕು. ಕಟ್ಟಳೆಗಳು ಬದಲಾಗಬಹುದು, ಸುಧಾರಿಸಬಹುದು, ಪರಿಷ್ಕೃತಗೊಳ್ಳಬಹುದು. ಪ್ರಪಂಚದಿಂದ ಸ್ವಂತತ್ರರೆಂದೊಡನೆ ಎಲ್ಲ ಸಮಸ್ಯೆ ಗಳಿಂದ ಮುಕ್ತರಾದೆವು ಎಂದೇನೂ ಅಲ್ಲ. ಕಠಿಣ ದುಡಿಮೆಗೆ ಸಮರ್ಪಣ ಭಾವದಿಂದ ತೆರೆದು 

ಕೊಳ್ಳುವ ಸಂಕಲ್ಪವೇ ಸ್ವಾತಂತ್ರ್ಯ. ಹೊಣೆಗಾರಿಕೆ ಮತ್ತು ಸ್ವಾತಂತ್ರ್ಯ ಒಂದೇ ನಾಣ್ಯದ ಎರಡು ಮುಖಗಳು. ದೇಶ, ಆಳ್ವಿಕೆ ಎಂದಮೇಲೆ ಕುಂದು ಕೊರತೆಗಳು ಇರುವುವೇ. ಇಂಥವರ ಆಳ್ವಿಕೆ ಸುಭಿಕ್ಷವಾಗಿತ್ತು. ಮಳೆ ಬೇಳೆ ಸಕಾಲಕ್ಕೆ ಬರುತ್ತಿತ್ತು. ಕಳ್ಳ ದರೋಡೆಕೋರರ ಭೀತಿ ಇರಲಿಲ್ಲ…ಮುಂತಾಗಿ ಬಣ್ಣನೆ ಇತಿಹಾಸ ಪ್ರಶ್ನೆ ಪತ್ರಿಕೆಯನ್ನು ಉತ್ತರಿಸುವಾಗ ಮಾತ್ರ! ಬೇಡಿಕೆಗಳನ್ನು ಸರ್ಕಾರಗಳ ಮುಂದೆ ಮಂಡಿಸುವುದಕ್ಕೆ ಕ್ರಮವಿದೆ, ಶಿಸ್ತಿದೆ. ನಮ್ಮದೇ ರಸ್ತೆಯನ್ನು ಅಡ್ಡಗಟ್ಟು ವುದು. ಬಸ್ಸು, ರೈಲುಗಳನ್ನು ತಡೆಯುವುದು. ನಮ್ಮದೇ ಅಂಚೆ ಕಛೇರಿಗಳನ್ನು ಮುಚ್ಚಿಸುವುದು. ತಂತಮ್ಮ ಎಂದಿನ ಕರ್ತವ್ಯಕ್ಕೆ ಗೈರಾಗುವುದು, ಇತರರಿಗೂ ಗೈರಾಗುವಂತೆ ಒತ್ತಾಯಿಸುವುದು. ಸಾರ್ವಜನಿಕ ಆಸ್ತಿ ಪಾಸ್ತಿಯನ್ನು ನಾಶಪಡಿಸುವುದು ಇತ್ಯಾದಿ ಪ್ರವೃತ್ತಿಗಳು ಸಮರ್ಥನೀಯವೇ? ಯಾವುದೇ ರಾಷ್ಟ್ರ ಸ್ವಾತಂತ್ರ್ಯದ ಕೊರತೆಯನ್ನು ತಡೆದುಕೊಳ್ಳಬಲ್ಲದೇನೋ? ಆದರೆ ಅದಕ್ಕೆ ಸವಾಲಾ ಗುವುದು “ಅತಿ ಸ್ವಾತಂತ್ರ್ಯ’! ಎಂದಮೇಲೆ  ಅರೆ ಸ್ವಾತಂತ್ರ್ಯ ಕ್ಕಿಂತಲೂ ಅತಿ ಸ್ವಾತಂತ್ರ್ಯವೇ ಹೆಚ್ಚಿನ ದುಗುಡಕ್ಕೆ ಕಾರಣವಾದೀತು! ಕೆಲವೊಮ್ಮೆ ಬೇಡಿಕೆಗಳು ತೀರ ಹಾಸ್ಯಾಸ್ಪದವಾಗಿರುವುದುಂಟು. ರಸ್ತೆಯೇ ಗಟಿಮುಟ್ಟಿಲ್ಲ. ಅಂಥ ರಸ್ತೆಗೆ ಇಂಥವರ ಹೆಸರಿಡ ಬೇಕೆಂಬ ಒತ್ತಾಯ! ಡಾ.ಮಾಸ್ತಿಯವರು ತಮ್ಮ ಸ್ವಾರಸ್ಯಕರ ಅನುಭವಗಳನ್ನು  ಹಂಚಿಕೊಳ್ಳುತ್ತಿದ್ದರು. ಅವರು ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದೆಡೆ ಗಳಲ್ಲಿ ಜನ ಈಜುಕೊಳ ಬೇಕೆನ್ನುತ್ತಿದ್ದರೇ ಹೊರತು ಕುಡಿಯುವ ನೀರಿಗೆ ಬೇಡಿಕೆ ಸಲ್ಲಿಸುತ್ತಿರಲಿಲ್ಲವಂತೆ! 

Advertisement

ಸ್ವಾತಂತ್ರ್ಯದ ಭಾಗವೇ ಆದ ವಾಕ್‌ ಸ್ವಾತಂತ್ರ್ಯ ಜನರನ್ನು ಒಗ್ಗೂಡಿಸುತ್ತದೆ. ಯಾರನ್ನು ಉದ್ದೇಶಿಸಿ ಮಾತನಾಡುವೆವೋ ಅವರಿಗೂ ಚರ್ಚೆಗೆ ಅವಕಾಶ ವಿರಬೇಕು. ಸಭೆ, ಸಮಾರಂಭಗಳಲ್ಲಿ ಸಭಿಕರನ್ನು ಕುರ್ಚಿಗೊರಗಿ ಕೂರುವ ಗೊಂಬೆಗಳಂತೆ ಪರಿಗಣಿಸಲಾಗುವುದುಂಟು. ಸಭಿಕ ಏನಾದರೂ ಹೇಳಲು ನಿಂತರೆ ವಿಘ್ನಪಡಿಸುವುದೇ ಆತನ ಉದ್ದೇಶ ಎಂದೇ ಅಂಬೋಣ.

ಅಮೆರಿಕದ ನ್ಯೂಯಾರ್ಕಿನ ಬಂದರಿನಲ್ಲಿ ನೆಲೆಗೊಂಡಿರುವ “ಸ್ಟ್ಯಾಚು ಅಫ್ ಲಿಬರ್ಟಿ'(ಸ್ವಾತಂತ್ರ್ಯ ದೇವತೆ) ತಾಮ್ರದ ಭವ್ಯ ಪುತ್ಥಳಿ ಫ್ರಾನ್ಸ್‌ ದೇಶದ ಪ್ರಜೆಗಳು ಅಮೆರಿಕ ದೇಶದ ಪ್ರಜೆಗಳಿಗೆ ನೀಡಿದ ಅಪೂರ್ವ ಉಡುಗೊರೆ. 1886ರ ಅಕ್ಟೋಬರ್‌ 28ರಂದು ಪ್ರತಿಮೆಯನ್ನು ಅಧಿಕೃತವಾಗಿ ಕೊಡಮಾಡ ಲಾಯಿತು. ವಿಶ್ವದ ಇತಿಹಾಸದಲ್ಲಿ ದಾಖಲಾಗಿರುವ ಹೃದಯಸ್ಪರ್ಶಿ ನಡೆಯಿದು. ಇನ್ನೇನು ಹನ್ನೊಂದು ತಿಂಗಳು ಕಳೆದರೆ ಚಂದ್ರನ ಮೇಲೆ ಮಾನವ ಪಾದವೂರಿದ ಸಾಹಸಕ್ಕೆ (ಜುಲೈ 16, 1969) ಅರ್ಧ ಶತಮಾನ ತುಂಬುತ್ತದೆ. ಆ ಫ‌ಲಕ ಚಂದ್ರನಲ್ಲಿ ರಾರಾಜಿಸಿದೆ: “ಇಲ್ಲಿ ಮೊಟ್ಟಮೊದಲ ಬಾರಿಗೆ ಭೂ ಗ್ರಹದ ಮಾನವರು ಹೆಜ್ಜೆಗಳನ್ನಿರಿಸಿದರು. ನಾವು ಶಾಂತಿಯಿಂದ ಮನುಕುಲದ ಪರವಾಗಿ ಬಂದೆವು’. ಭೂಮಿಯ ನಿವಾಸಿಗಳು ಅತಿಕ್ರಮಿಗಳಲ್ಲ, ಶಾಂತಿಪ್ರಿ ಯರೆನ್ನುವುದನ್ನು ಅಮೆರಿಕ ಇಡೀ ವಿಶ್ವ ಕುಟುಂಬದ ಪರವಾಗಿ  ಈ ಪರಿ ಬಿಂಬಿಸಿದ್ದು ಅತಿಶಯ. 

ಪ್ರಜಾಪ್ರಭುತ್ವ ಬಹುಮತದ ಆಳ್ವಿಕೆಯಾದರೂ ದೇಶದ ಎಲ್ಲ ನಾಗರಿಕರಿಗೂ ಸಮಾನ ಹಕ್ಕು, ಅವಕಾಶಗಳು ಜೊತೆಗೆ ಅದು ನಮ್ಮ ಸಂವಿಧಾನ ಅನ್ವಯ ಅಲ್ಪಸಂಖ್ಯಾತರಿಗೆ ಕೆಲವು ನಿರ್ದಿಷ್ಟ ಸವಲತ್ತುಗಳನ್ನೂ ಒದಗಿಸುವ ಬದ್ಧತೆ ಹೊಂದಿರಬೇಕು. ಇಲ್ಲವಾದಲ್ಲಿ ಪ್ರಜಾಸತ್ತೆಯ ಪ್ರಭುತ್ವವೇ ಪ್ರಜಾಪ್ರಭುತ್ವವನ್ನು ಅಲಕ್ಷಿಸಿದಂತಾಗುತ್ತದೆ. 

ಸ್ವಾತಂತ್ರ್ಯ ಎಂಬ ಪದವೇ ಅದ್ಭುತ. ಅದರಲ್ಲಿ ಚೈತನ್ಯವಿದೆ, ಕನಸಿದೆ, ಆಶಾವಾದವಿದೆ. ಹೊಸ ಹೊಸ ಕೌಶಲ ರೂಢಿಸಿಕೊಳ್ಳಲು, ಹೊಸ ಶಖೆ ಪ್ರವೇಶಿಸಲು ನಮ್ಮ ಸಾಮರ್ಥ್ಯವನ್ನು ನಾವೇ ನಿಷ್ಕರ್ಷಿಸುವ ಅವಕಾಶವೇ ಸ್ವಾತಂತ್ರ್ಯ ಎನ್ನಬಹುದು. ಸ್ವಾತಂತ್ರ್ಯ ಮನೆಯಂಗಳದಿಂದಲೇ ಆರಂಭಗೊಳ್ಳಬೇಕಿದೆ. ಮಕ್ಕಳಿಗೆ ತಮಗೆ ಆಸಕ್ತಿಯಿರುವ ವಿಷಯದಲ್ಲಿ ವ್ಯಾಸಂಗ ಕೈಗೊಳ್ಳಲು ಪೋಷಕರು ಅನುವು ಮಾಡಿಕೊಡಬೇಕು. ಹಾಡುಗಾರಿಕೆ, ವಾದ್ಯ ಸಂಗೀತ, ಶಿಲ್ಪ ಕಲೆ, ಚಿತ್ರ ಕಲೆ, ನಟನೆ, ನಾಟ್ಯ  ಮುಂತಾದವುಗಳಿಗೆ ಮಕ್ಕಳು ಆಕರ್ಷಿತರಾಗುವ ಅನೇಕ ಸಂದರ್ಭಗಳಿರುತ್ತವೆ. ಪೋಷಕರು ಮಕ್ಕಳ ಆಸಕ್ತಿಯನ್ನು ಗುರುತಿಸಿ ಅದನ್ನು ಉತ್ತೇಜಿಸಬೇಕೇ ಪರಂತು ಇದನ್ನೇ ಓದು, ಅದನ್ನೇ ಆಯ್ಕೆ ಮಾಡಿಕೊ ಎಂದು ಒತ್ತಾಯಿಸಬಾರದು.

ಬಿಂಡಿಗನವಿಲೆ ಭಗವಾನ್‌

Advertisement

Udayavani is now on Telegram. Click here to join our channel and stay updated with the latest news.

Next