ಕಾಸರಗೋಡು: ಅಂತಾ ರಾಜ್ಯ ಸಂಪರ್ಕ ಕಲ್ಪಿಸುವ ಪಳ್ಳತ್ತಡ್ಕ ಸೇತುವೆ ಶಿಥಿಲಗೊಳ್ಳುತ್ತಿದ್ದು, ಆತಂಕ ಸೃಷ್ಟಿಗೆ ಕಾರಣವಾಗಿದೆ. ಕರ್ನಾಟಕದ ಪುತ್ತೂರು ಸಂಪರ್ಕಿಸಲು ಬದಿಯಡ್ಕ ರಸ್ತೆಯಲ್ಲಿ ಸಾಗುವ ಸಂದರ್ಭದಲ್ಲಿ ಸಿಗುವ ಪಳ್ಳತ್ತಡ್ಕದಲ್ಲಿರುವ ಈ ಸೇತುವೆ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದೆ. ಸೇತುವೆಯ ಮೇಲ್ಭಾಗದ ರಸ್ತೆಯಲ್ಲಿ ಹೊಂಡಗುಂಡಿ ನಿರ್ಮಾಣವಾಗಿದ್ದು, ಸುಗಮ ವಾಹನ ಸಂಚಾರಕ್ಕೆ ಸಾಧ್ಯವಾಗುತ್ತಿಲ್ಲ. ಚಾಲಕರು ಸಾಹಸ ದಿಂದ ವಾಹನ ಚಲಾಯಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಈ ರಸ್ತೆಯಲ್ಲಿ ದಿನಾ ನೂರಾರು ವಾಹನಗಳು ಸಾಗುತ್ತಿದ್ದು, ಘನ ವಾಹನ ಸಂಚರಿಸುವ ಸಂದರ್ಭದಲ್ಲಿ ಸೇತುವೆಯ ಅಡಿ ಭಾಗದ ಸಿಮೆಂಟ್‌ನ ಹಾಳೆಗಳು ಉದುರಿ ಬೀಳುತ್ತಿವೆ. ಸೇತುವೆಯ ಕಾಂಕ್ರೀಟ್ ಸಿಮೆಂಟ್ ಇದೇ ರೀತಿ ಉದುರಿ ಬೀಳುವುದು ಮುಂದು ವರಿದರೆ ಸೇತುವೆಗೆ ಅಪಾಯದ ಭೀತಿ ಎದುರಾಗ ಲಿದೆ. ಸೇತುವೆಯ ಪಿಲ್ಲರ್ ಗಳಲ್ಲಿ ಅಲ್ಲಲ್ಲಿ ಸಿಮೆಂಟ್ ಎದ್ದು ಹೋಗಿ ಕಬ್ಬಿಣದ ರಾಡ್‌ಗಳು ಗೋಚರಿಸುತ್ತಿವೆ. ಸೇತುವೆಯ ಮೇಲ್ಭಾಗವೂ ಶೋಚನೀಯ ಸ್ಥಿತಿ ಯಲ್ಲಿದ್ದು ಹೊಂಡ ಬಿದ್ದಿರುವ ಅಲ್ಲಲ್ಲಿ ಕಬ್ಬಿಣದ ರಾಡ್‌ಗಳು ಕಾಣಿಸುತ್ತಿವೆ. ಈ ಕಬ್ಬಿಣದ ರಾಡ್‌ಗಳು ಮುಂದಿನ ದಿನಗಳಲ್ಲಿ ತುಕ್ಕು ಹಿಡಿದು ಅಪಾಯಕ್ಕೆ ದಾರಿ ಮಾಡಿಕೊಡಲಿವೆೆ. ಸೇತುವೆಯ ಒಂದು ಭಾಗ ಯಾವುದೇ ಕ್ಷಣ ಕುಸಿದು ಬೀಳಬಹುದೆಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಪುತ್ತೂರಿಗೆ ಸಾಗುವಾಗ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಅಗಲ ಕಿರಿದಾದ ಸೇತುವೆಗಳಿವೆ. ಆದರೆ ಅವುಗಳು ಇನ್ನೂ ಗಟ್ಟಿಮುಟ್ಟಾಗಿವೆೆ. ಆದರೆ ಇಂತಹ ಸಂದರ್ಭದಲ್ಲೇ ಹೊಸ ತಾಂತ್ರಿಕತೆ ಬಳಸಿ ನಿರ್ಮಿಸಿದ ಪಳ್ಳತ್ತಡ್ಕ ಸೇತುವೆ ಶಿಥಿಲಗೊಳ್ಳುತ್ತಿರುವುದು ಆತಂಕಕಾರಿಯಾಗಿದೆ.
Advertisement
ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದ ಚೆರ್ಕಳ-ಕಲ್ಲಡ್ಕ ರಸ್ತೆಯ ದುರಸ್ತಿಗಾಗಿ ನಡೆದ ನಿರಂತರ ಹೋರಾಟದ ಪರಿಣಾಮ ವಾಗಿ ಈ ರಸ್ತೆ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿದ್ದು ನಿಧಾನಗತಿ ಯಲ್ಲಿ ಸಾಗುತ್ತಿದೆ. ಈ ರಸ್ತೆಯಲ್ಲಿ ಸಿಗುವ ಮುಖ್ಯ ಸೇತುವೆಯೇ ಪಳ್ಳತ್ತಡ್ಕ ಸೇತುವೆ. ಈ ಸೇತುವೆ ಅತೀ ದೊಡ್ಡ ಸೇತುವೆಯೂ ಆಗಿದೆ. ಸೇತುವೆ ಮೇಲಿನ ರಸ್ತೆ ಅತೀ ಹೆಚ್ಚು ಹದಗೆಟ್ಟಿದೆ. ಸೇತುವೆ ಮೇಲಿನ ರಸ್ತೆಯಲ್ಲಿ ಹೊಂಡಗುಂಡಿ ನಿರ್ಮಾಣವಾಗಿದ್ದು ಜಲ್ಲಿ ಮೇಲೆದ್ದು, ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.
ಹದಗೆಟ್ಟ ರಸ್ತೆ-ಕಿತ್ತುಹೋದ ಸೇತುವೆ
ಬದಿಯಡ್ಕ-ಪುತ್ತೂರು ರಸ್ತೆಯಲ್ಲಿ ಪಳ್ಳತ್ತಡ್ಕದಲ್ಲಿರುವ ಪಳ್ಳತ್ತಡ್ಕ ಸೇತುವೆಯನ್ನು ಆಶ್ರಯಿಸಿ ದಿನಾ ನೂರಾರು ವಾಹನಗಳು ಓಡಾಡುತ್ತಿವೆ. ಸೇತುವೆಯ ಅಡಿಭಾಗ ಶೋಚನೀಯ ಸ್ಥಿತಿಗೆ ತಲುಪಿರುವುದರಿಂದ ಎಂತಹ ಗಂಡೆದೆಯ ವ್ಯಕ್ತಿಯೂ ಭಯ ಪಡುವುದರಲ್ಲಿ ಅಚ್ಚರಿಯಿಲ್ಲ.