Advertisement

ಪಂಜಾಬ್‌ ಅತೃಪ್ತಿ ಸ್ಫೋಟ 

11:44 PM Sep 20, 2021 | Team Udayavani |

ಚಂಡೀಗಢ/ಪಂಜಾಬ್‌: ಪಂಜಾಬ್‌ನಲ್ಲಿ ನೂತನ ಮುಖ್ಯಮಂತ್ರಿಯ ಪ್ರಮಾಣ ಸ್ವೀಕಾರದ ಬೆನ್ನಲ್ಲೇ ಕಾಂಗ್ರೆಸ್‌ ಪಕ್ಷದೊಳಗಿನ ಆಂತರಿಕ ಭಿನ್ನಮತ ಸ್ಫೋಟಗೊಂಡಿದೆ. ಚರಣ್‌ಜಿತ್‌ ಸಿಂಗ್‌ ಚನ್ನಿ ಅವರು ಸಿಎಂ ಆಗಿ ಪ್ರಮಾಣ ಸ್ವೀಕರಿಸಿದ ಬಳಿಕ ಪಂಜಾಬ್‌ ಉಸ್ತುವಾರಿ ಹರೀಶ್‌ ರಾವತ್‌ ಅವರು ನೀಡಿದ ಹೇಳಿಕೆ ಪಕ್ಷದ ನಾಯಕರಲ್ಲೇ ಅಸಮಾಧಾನ ಮೂಡಿಸಿದೆ.

Advertisement

“ಮುಂದಿನ ಚುನಾವಣೆಯನ್ನು ಪಿಸಿಸಿ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ನೇತೃತ್ವದಲ್ಲೇ ಎದುರಿಸಲಾಗುವುದು’ ಎಂದು ಹರೀಶ್‌ ರಾವತ್‌ ಹೇಳಿರುವುದೇ ಇದಕ್ಕೆ ಕಾರಣ. ರಾವತ್‌ ಹೇಳಿಕೆಗೆ ಪಕ್ಷದ ಪ್ರಮುಖ ನಾಯಕರಾದ ಸುನೀಲ್‌ ಜಾಖರ್‌ ಅವರು ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ. ಈ ಹೇಳಿಕೆಯಿಂದ ದಿಗ್ಭ್ರಮೆಗೊಂಡಿದ್ದೇನೆ ಎಂದು ಜಾಖರ್‌ ಹೇಳಿದ್ದಾರೆ.

“ಉನ್ನತ ಹುದ್ದೆಯಲ್ಲಿರುವ ಸಂಕುಚಿತ ಮನೋಭಾವದ, ಸಣ್ಣ ಮನಸ್ಸಿನ ಕೆಲವು ಜನರು ಈಗ ಜನಾಂಗ/ಜಾತಿಯ ಆಧಾರದಲ್ಲಿ ಪಂಜಾಬ್‌ ಅನ್ನು ವಿಭಜಿಸಲು ಹೊರಟಿದ್ದಾರೆ. ಇವರೆಲ್ಲ ಗುರುವಿನ ಸಂದೇಶವನ್ನು ಮರೆತವರು’ ಎಂದು ಜಾಖರ್‌ ಟ್ವೀಟ್‌ ಮಾಡಿದ್ದಾರೆ.

ಮಾಜಿ ಸಿಎಂ ಕ್ಯಾ| ಅಮರೀಂದರ್‌ ಸಿಂಗ್‌ ಅವರ ಆಪ್ತರಾಗಿರುವ ಜಾಖರ್‌ ಅವರು ಕೂಡ ಸಿಎಂ ಹುದ್ದೆ ಯ ರೇಸ್‌ನಲ್ಲಿದ್ದರು. ಆದರೆ ಕೊನೇ ಕ್ಷಣದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಚನ್ನಿ ಅವರನ್ನು ಸಿಎಂ ಸ್ಥಾನದಲ್ಲಿ ಕೂರಿಸಿತು. ಇನ್ನು, ರಾವತ್‌ ಹೇಳಿಕೆಗೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾದ ಕಾಂಗ್ರೆಸ್‌ ಮುಖ್ಯ ವಕ್ತಾರ ರಣದೀಪ್‌ ಸುಜೇìವಾಲ, “ಮುಖ್ಯಮಂತ್ರಿ ಚನ್ನಿ ಮತ್ತು ನವಜೋತ್‌ ಸಿಧು ಇಬ್ಬರೂ ಪಕ್ಷದ ಮುಖಗಳು. ಹೀಗಾಗಿ ಇವರಿಬ್ಬರ ನೇತೃತ್ವದಲ್ಲೇ ಚುನಾವಣೆ ಎದುರಿಸಲಾಗುತ್ತದೆ’ ಎಂದಿದ್ದಾರೆ.

ರೈತರ ವಿದ್ಯುತ್‌, ನೀರಿನ ಬಿಲ್‌  ಮನ್ನಾ: ಸಿಎಂ ಘೋಷಣೆ :

Advertisement

ಪಂಜಾಬ್‌ನ ಮೊದಲ ದಲಿತ ಮುಖ್ಯಮಂತ್ರಿಯಾಗಿ ಚರಣ್‌ಜಿತ್‌ ಸಿಂಗ್‌ ಚನ್ನಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರ ಜತೆಗೆ ಹಿರಿಯ ನಾಯಕರಾದ ಸುಖ್‌ಜಿಂದರ್‌ ಸಿಂಗ್‌ ರಾಂಧವಾ ಮತ್ತು ಒ.ಪಿ. ಸೋನಿ ಅವರು ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಸಿಎಂ ಚನ್ನಿ, ರಾಜ್ಯದ ರೈತರ ಬಾಕಿಯಿರುವ ನೀರು ಮತ್ತು ವಿದ್ಯುತ್‌ ಬಿಲ್‌ಗಳನ್ನು ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ. “ನಾನು ನಿಜವಾದ ಆಮ್‌ ಆದ್ಮಿ (ಜನಸಾಮಾನ್ಯ). ರಿಕ್ಷಾವಾಲನಾಗಿದ್ದ ನನಗೆ ಈಗ ಸಿಎಂ ಹುದ್ದೆ ನೀಡಿದ ಕಾಂಗ್ರೆಸ್‌ ಹೈಕಮಾಂಡ್‌ಗೆ ಧನ್ಯವಾದಗಳು’ ಎಂದಿದ್ದಾರೆ. ಸಣ್ಣ ಮನೆಗಳಿಗೆ ಉಚಿತ ನೀರು ಪೂರೈಕೆ, ವಿದ್ಯುತ್‌ ಶುಲ್ಕ ಕಡಿತ ಮಾಡುತ್ತೇನೆ. ಮರಳು ಮಾಫಿಯಾಗೆ ಕಡಿವಾಣ ಹಾಕುತ್ತೇನೆ ಎಂದೂ ಹೇಳಿದ್ದಾರೆ. ಇದೇ ವೇಳೆ, ಪ್ರಧಾನಿ ಮೋದಿ ಟ್ವೀಟ್‌ ಮಾಡಿ, ನೂತನ ಸಿಎಂ ಚನ್ನಿ ಅವರನ್ನು ಅಭಿನಂದಿಸಿದ್ದಾರೆ.

ಕೆಲವು ತಿಂಗಳ ಮಟ್ಟಿಗಷ್ಟೇ ಚನ್ನಿ ಅವರನ್ನು ಕಾಂಗ್ರೆಸ್‌ ಸಿಎಂ ಮಾಡಿದೆ. ಇದು ದಲಿತ ಮತಗಳನ್ನು ಸೆಳೆಯಲು ಕಾಂಗ್ರೆಸ್‌ ಮಾಡಿರುವ ಸಂಚು. ಇದು ಆ ಪಕ್ಷದ ಹಳೆಯ ಚಾಳಿ.-ದುಶ್ಯಂತ್‌ ಕುಮಾರ್‌ ಗೌತಮ್‌, ಬಿಜೆಪಿ ಪ್ರಧಾನ ಕಾರ್ಯದರ್ಶಿ

ಕಾಂಗ್ರೆಸ್‌ “ಎಲೆಕ್ಷನ್‌ ಸ್ಟಂಟ್‌’ ಬಗ್ಗೆ ದಲಿತರು ಎಚ್ಚರಿಕೆ ಯಿಂದಿರಬೇಕು. ಆ ಪಕ್ಷ ಯಾವತ್ತೂ ದಲಿತರ ಮೇಲೆ ನಂಬಿಕೆಯಿಟ್ಟಿಲ್ಲ. ಎಲ್ಲ ಪಕ್ಷಗಳಿಗೂ ಬಿಕ್ಕಟ್ಟಿನ ಸಮಯದಲ್ಲಿ ಮಾತ್ರ ದಲಿತರು ನೆನಪಾಗುತ್ತಾರೆ.-ಮಾಯಾವತಿ, ಬಿಎಸ್ಪಿ ನಾಯಕಿ

Advertisement

Udayavani is now on Telegram. Click here to join our channel and stay updated with the latest news.

Next