Advertisement

ಅತೃಪ್ತರು ಮತ್ತು ರಾಜಕೀಯ ಗಣಿತ

12:00 AM Jul 25, 2019 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರ ವಿಶ್ವಾಸ ಮತ ಕಳೆದುಕೊಂಡು ಪತನವಾಗಿದೆ. ಬಿಜೆಪಿ ಅಧಿಕಾರಕ್ಕೆ ಏರಲು ಕ್ಷಣಗಣನೆ ಆರಂಭವಾಗಿದೆ. ಮೈತ್ರಿ ಸರ್ಕಾರ ವಿಶ್ವಾಸಮತದಲ್ಲಿ ಸೋಲು ಅನುಭವಿಸಲು ಅತೃಪ್ತ ಶಾಸಕರ ಪಾತ್ರವೇ ಅತಿ ಮುಖ್ಯವಾಗಿದೆ. ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸಿ ಮುಂಬೈ ಹೋಟೆಲ್‌ ಸೇರಿರುವ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ರೆಬೆಲ್‌ ಶಾಸಕರ ಭವಿಷ್ಯ, ಸದ್ಯ ಸ್ಪೀಕರ್‌ ರಮೇಶ್‌ ಕುಮಾರ್‌ ಅವರ ಕೈಯಲ್ಲಿದೆ.

Advertisement

ರಾಜೀನಾಮೆ ಅಂಗೀಕಾರ ಮಾಡಿದಲ್ಲಿ ಮುಂದಿನ 6 ತಿಂಗಳಲ್ಲಿ ನಡೆಯಬಹುದಾದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ರೆಬೆಲ್‌ ಶಾಸಕರಿಗೆ ಅವಕಾಶ ಇರುತ್ತದೆ. ಅನರ್ಹಗೊಳಿಸಿದರೆ ಆರು ವರ್ಷ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇರುವುದಿಲ್ಲ. ಒಂದು ವೇಳೆ, ಕಾಂಗ್ರೆಸ್‌-ಜೆಡಿಎಸ್‌ ಒಟ್ಟಾಗಿ ಅತೃಪ್ತರ ವಿರುದ್ಧ ಸೆಣಸಿದರೆ ಆ ಕ್ಷೇತ್ರಗಳು ಜಾತಿ, ಹಣ ಸೇರಿದಂತೆ ವಿವಿಧ ಲೆಕ್ಕಾಚಾರಗಳಿಂದಾಗಿ ಪ್ರತಿಷ್ಠೆಯ ಕಣಗಳಾಗಲಿವೆ.

2018ರ ಮೇ 12ರಂದು ಚುನಾವಣೆ ನಡೆದಿದ್ದು, ಮೇ 15ಕ್ಕೆ ಫ‌ಲಿತಾಂಶ ಹೊರ ಬಿದ್ದಿತ್ತು. 105 ಸ್ಥಾನ ಪಡೆದ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಕಾಂಗ್ರೆಸ್‌ 79 ಹಾಗೂ ಜೆಡಿಎಸ್‌ 37, ಪಕ್ಷೇತರರು 2 ಹಾಗೂ ಬಿಎಸ್‌ಪಿ 1 ಸೀಟು ಗೆದ್ದಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದ ಗುರುತಿನಡಿ ಸ್ಪರ್ಧಿಸಿ ಗೆದ್ದಿರುವ ಕೆಲವು ಶಾಸಕರು ಈಗ ರಾಜೀನಾಮೆ ನೀಡಿದ್ದಾರೆ. ಮುಂದೆ ಚುನಾವಣೆಯಾದರೆ ಇದೇ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆ ಇದೆಯೇ ಎಂಬುದರ ಕಿರು ಚಿತ್ರಣ ಇಲ್ಲಿದೆ.

ಯಶವಂತಪುರ: ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಟಿ.ಸೋಮಶೇಖರ್‌ ಅವರು 1,15,273 ಮತಗಳನ್ನು ಪಡೆಯುವ ಮೂಲಕ ಜೆಡಿಎಸ್‌ನ ಟಿ.ಎನ್‌ ಜವರಾಯಿಗೌಡ ವಿರುದ್ಧ 10,711 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರು. ಮುಂದೆ ಉಪಚುನಾವಣೆ ನಡೆದರೆ, ಬಿಜೆಪಿ ಬೆಂಬಲ ಸೋಮಶೇಖರ್‌ ಅವರಿಗೆ ಸಿಕ್ಕಿದರೂ ಗೆಲವು ಅಷ್ಟು ಸುಲಭವಿಲ್ಲ. ಕಳೆದ ಚುನಾವಣೆಯಲ್ಲಿ ನಟ ಜಗ್ಗೇಶ್‌ ಬಿಜೆಪಿಯಿಂದ ಸ್ಪರ್ಧಿಸಿದ್ದರೂ ಮೂರನೇ ಸ್ಥಾನ ಪಡೆದಿದ್ದರು.

ಕೆ.ಆರ್‌.ಪುರ: ಕಾಂಗ್ರೆಸ್‌ ಅಭ್ಯರ್ಥಿ ಬೈರತಿ ಬಸವರಾಜ ಅವರು 1,35,404 ಮತ ಪಡೆದು ಬಿಜೆಪಿಯ ನಂದೀಶ್‌ ರೆಡ್ಡಿ ವಿರುದ್ಧ 32,729 ಮತಗಳ ಅಂತರದಲ್ಲಿ ಜಯಿಸಿದ್ದರು. ನಂದೀಶ್‌ ರೆಡ್ಡಿ ಪ್ರಬಲ ಪೈಪೋಟಿ ನೀಡಿದ್ದರು. ಈಗ ಬಿಜೆಪಿ ನಂದೀಶ್‌ ರೆಡ್ಡಿಯವರ ಮನವೊಲಿಸಿದರೆ ಮಾತ್ರ ಬೈರತಿ ಬಸವರಾಜ ಅವರ ಗೆಲವು ಸುಲಭವಾಗುತ್ತದೆ. ಇಲ್ಲವಾದರೆ ಜಿದ್ದಾಜಿದ್ದಿನ ಹೋರಾಟ ನಡೆಯಲಿದೆ.

Advertisement

ರಾಜರಾಜೇಶ್ವರಿ ನಗರ: ನಕಲಿ ಮತದಾರರ ಚೀಟಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕ್ಷೇತ್ರದಲ್ಲಿ ಸ್ವಲ್ಪ ವಿಳಂಬವಾಗಿ ಮತದಾನ ನಡೆದಿತ್ತು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮುನಿರತ್ನ ಅವರು  1,08,064 ಮತಗಳನ್ನು ಪಡೆದು ಬಿಜೆಪಿಯ ಮುನಿರಾಜುಗೌಡ ವಿರುದ್ಧ 25,492 ಮತಗಳ ಅಂತರದಲ್ಲಿ ಜಯಿಸಿದ್ದರು. ಜೆಡಿಎಸ್‌ನಿಂದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದಲ್ಲಿ ಮುನಿರತ್ನ ಗೆಲುವು ಇನ್ನಷ್ಟು ಕಠಿಣವಾಗಲಿದೆ.

ಮಹಾಲಕ್ಷ್ಮೀ ಲೇಔಟ್‌: ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಕೆ.ಗೋಪಾಲಯ್ಯ ಅವರು 88,218 ಮತ ಪಡೆದು ಬಿಜೆಪಿಯ ನೆ.ಲ.ನರೇಂದ್ರಬಾಬು ವಿರುದ್ಧ 41,100 ಮತಗಳ ಅಂತರದಲ್ಲಿ ಜಯಿಸಿದ್ದರು. ಚುನಾವಣೆಗೆ ಮೊದಲು ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಬಂದಿದ್ದ ನರೇಂದ್ರಬಾಬು ಅವರು ಗೋಪಾಲಯ್ಯ ವಿರುದ್ಧ ಸ್ಪರ್ಧೆ ಮಾಡಿದ್ದರು. ಮತ್ತೆ ಚುನಾವಣೆ ನಡೆದರೆ ಅಭ್ಯರ್ಥಿ ಆಯ್ಕೆ ಬಿಜೆಪಿಗೆ ಹೆಚ್ಚು ಕಗ್ಗಂಟಾಗಲಿದೆ.

ಶಿವಾಜಿನಗರ: ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಅಲ್ಪಸಂಖ್ಯಾತರ ನಾಯಕ ರೋಷನ್‌ ಬೇಗ್‌ 59,742 ಮತ ಪಡೆದು ಬಿಜೆಪಿಯ ಕಟ್ಟಾ ಸುಬ್ರಹ್ಮಣ್ಯನಾಯ್ಡು ವಿರುದ್ಧ 15,040 ಮತಗಳ ಅಂತರದಲ್ಲಿ ಜಯಿಸಿದ್ದರು. ರೋಷನ್‌ ಬೇಗ್‌ ಅವರಿಗೆ ಇಲ್ಲಿ ತಮ್ಮದೇ ಮತ ಬ್ಯಾಂಕ್‌ ಇದೆ. ಪಕ್ಷ ಅಷ್ಟೇನೂ ಮುಖ್ಯವಾಗದೇ ಇದ್ದರೂ, ಕಾಂಗ್ರೆಸ್‌ ಓಟು ಕೂಡ ಹೆಚ್ಚಿದೆ. ಎದುರಾಳಿ ಯಾರು ಎಂಬುದು ಮುಖ್ಯವಾಗುತ್ತದೆ.

ಚಿಕ್ಕಬಳ್ಳಾಪುರ: ಕಾಂಗ್ರೆಸ್‌ ಅಭ್ಯರ್ಥಿ ಡಾ.ಕೆ.ಸುಧಾರಕ್‌ ಅವರು 82,006 ಮತ ಪಡೆದು ಜೆಡಿಎಸ್‌ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ ವಿರುದ್ಧ 30,431 ಮತಗಳ ಗೆಲವು ಸಾಧಿಸಿದ್ದರಾದರೂ ಪಕ್ಷೇತರ ಅಭ್ಯರ್ಥಿ ನವೀನ್‌ ಕಿರಣ್‌ 29,433 ಮತ ಪಡೆದಿದ್ದರು. ಬಿಜೆಪಿ ಇಲ್ಲಿ ಅಷ್ಟೇನೂ ಪ್ರಬಲವಾಗಿಲ್ಲ. ಹೀಗಾಗಿ, ಸುಧಾಕರ್‌ ಮುಂದಿನ ಭವಿಷ್ಯ ಪಕ್ಷಾಧಾರಿತವಾಗಿಯೇ ಇದೆ.

ಹೊಸಕೋಟೆ: ಕಾಂಗ್ರೆಸ್‌ ಅಭ್ಯರ್ಥಿ ಎಂ.ಟಿ.ಬಿ.ನಾಗರಾಜ ಅವರು 98,824 ಮತ ಪಡೆದು ಸಂಸದ ಬಿ.ಎನ್‌.ಬಚ್ಚೇಗೌಡ ಅವರ ಪುತ್ರ ಬಿಜೆಪಿಯ ಶರತ್‌ ಬಚ್ಚೇಗೌಡ ವಿರುದ್ಧ 7,597 ಮತಗಳ ಅಂತರದಲ್ಲಿ ಜಯಿಸಿದ್ದರು. ಎಂಟಿಬಿ ನಾಗರಾಜ ಹಾಗೂ ಬಚ್ಚೇಗೌಡ ಇಬ್ಬರು ತಮ್ಮ ಮಕ್ಕಳನ್ನು ರಾಜಕೀಯವಾಗಿ ಬೆಳೆಸಲು ಎಲ್ಲ ರೀತಿಯ ವೇದಿಕೆ ಸಿದ್ಧಮಾಡಿಕೊಂಡಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಉಪಚುನಾವಣೆ ನಡೆದರೆ ಹಲವಾರು ಅಂಶಗಳು ಪ್ರಮುಖವಾಗುತ್ತವೆ. ಪಕ್ಷದ ನಿರ್ಣಯವೂ ಅತಿ ಮುಖ್ಯವಾಗಲಿದೆ.

ಕೆ.ಆರ್‌.ಪೇಟೆ: ಜೆಡಿಎಸ್‌ ಅಭ್ಯರ್ಥಿ ನಾರಾಯಣ ಗೌಡ ಅವರು 88,016 ಮತ ಪಡೆದು ಕಾಂಗ್ರೆಸ್‌ನ ಚಂದ್ರಶೇಖರ್‌ ವಿರುದ್ಧ 17,119 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರು. ಇಲ್ಲಿ ಬಿಜೆಪಿ ಪ್ರಾಬಲ್ಯ ಅಷ್ಟೇನೂ ಇಲ್ಲದೇ ಇರುವುದರಿಂದ ಜೆಡಿಎಸ್‌ ಅಭ್ಯರ್ಥಿಗಳ ವರ್ಚಸ್ಸಿನ ಆಧಾರದಲ್ಲಿ ಮುಂದಿನ ಚುನಾವಣೆ ಫ‌ಲಿತಾಂಶ ನಿರ್ಧಾರವಾಗಲಿದೆ.

ಹುಣಸೂರು: ಕಾಂಗ್ರೆಸ್‌ ಬಿಟ್ಟು ಜೆಡಿಎಸ್‌ ಸೇರಿ ಜೆಡಿಎಸ್‌ನಿಂದಲೇ ಸ್ಪರ್ಧೆ ಮಾಡಿದ ಎಚ್‌.ವಿಶ್ವನಾಥ್‌ ಅವರು 91,667 ಮತಗಳನ್ನು ಗಳಿಸಿ, ಕಾಂಗ್ರೆಸ್‌ನ ಮಂಜುನಾಥ್‌ ವಿರುದ್ಧ 8,575 ಮತಗಳ ಅಂತರದಲ್ಲಿ ಜಯಸಿದ್ದರು. ಸಿದ್ದರಾಮಯ್ಯ ಅವರ ತಂತ್ರಗಾರಿಕೆ ನಡೆದರೆ ಹುಣಸೂರಿನಲ್ಲಿ ಎಚ್‌.ವಿಶ್ವನಾಥ್‌ ಅವರಿಗೆ ಗೆಲವು ದೂರದ ಮಾತಾಗಬಹುದು.

ಯಲ್ಲಾಪುರ: ಕಾಂಗ್ರೆಸ್‌ ಅಭ್ಯರ್ಥಿ ಶಿವರಾಮ ಹೆಬ್ಟಾರ್‌ ಅವರು 66,290 ಮತ ಪಡೆದಿದ್ದರೂ, ಬಿಜೆಪಿಯ ವಿ.ಎಸ್‌.ಪಾಟೀಲ್‌ 64,807 ಮತ ಪಡೆದಿದ್ದರು. ಒಂದು ಹಂತದಲ್ಲಿ ಬಿಜೆಪಿ ಜಯ ಸಾಧಿಸಲಿದೆ ಎಂದೇ ಅಂದುಕೊಂಡಿದ್ದರೂ ಅಂತಿಮವಾಗಿ ಶಿವರಾಮ ಹೆಬ್ಟಾರ್‌ 1,483 ಮತಗಳ ಅಂತರದಲ್ಲಿ ಜಯಿಸಿದ್ದರು. ಇಲ್ಲಿ ಮತ್ತೆ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆಯೇ ಫೈಟ್‌ ನಡೆಯಲಿದೆ. ಅಭ್ಯರ್ಥಿ ಯಾರು ಎಂಬುದು ಅತಿ ಮುಖ್ಯವಾಗಿರುತ್ತದೆ.

ಗೋಕಾಕ್‌: ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ರಮೇಶ್‌ ಜಾರಕಿಹೋಳಿಯವರು 90,249 ಮತ ಪಡೆದು ಬಿಜೆಪಿಯ ಅಶೋಕ್‌ ಪೂಜಾರಿ ವಿರುದ್ಧ 14,280 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರು. ಕ್ಷೇತ್ರದಲ್ಲಿ ರಮೇಶ್‌ ಅವರಿಗೆ ವೈಯಕ್ತಿಕ ವರ್ಚಸ್ಸು ಇರುವುದರಿಂದ ಮುಂದಿನ ಚುನಾವಣೆಯಲ್ಲೂ ಸುಲಭವಾಗಿ ಗೆಲ್ಲುವ ಸಾಧ್ಯತೆ ಇದೆ.

ವಿಜಯನಗರ: ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಆನಂದ್‌ ಸಿಂಗ್‌ 83,214 ಮತ ಪಡೆದು ಬಿಜೆಪಿಯ ಗವಿಯಪ್ಪ ವಿರುದ್ಧ 8,228 ಮತಗಳ ಅಂತರದಲ್ಲಿ ಜಯಿಸಿದ್ದರು. ಈ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದರೆ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ.

ಅಥಣಿ: ಕಾಂಗ್ರೆಸ್‌ ಅಭ್ಯರ್ಥಿ ಮಹೇಶ್‌ ಈರಣ್ಣಗೌಡ ಕುಮಠಳ್ಳಿ ಅವರು 82,094 ಮತ ಪಡೆದು ಬಿಜೆಪಿಯ ಲಕ್ಷ್ಮಣ ಸಂಗಪ್ಪ ಸವದಿ ವಿರುದ್ಧ 2,331 ಮತಗಳ ಅಂತರದ ಜಯ ಸಾಧಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಇರುವುದರಿಂದ ಬಿಜೆಪಿ ಹೊಸ ಅಭ್ಯರ್ಥಿಗೆ ಟಿಕೆಟ್‌ ನೀಡುವುದು ಅಷ್ಟು ಸುಲಭವಿಲ್ಲ. ಕಾಂಗ್ರೆಸ್‌ಗೂ ಮತಬ್ಯಾಂಕ್‌ ಇಲ್ಲಿದೆ.

ಮಸ್ಕಿ: ಕಾಂಗ್ರೆಸ್‌ನ ಪ್ರತಾಪ್‌ ಗೌಡ ಪಾಟೀಲ್‌ ಅವರು 60,387 ಮತ ಪಡೆದು ಬಿಜೆಪಿಯ ಬಸನಗೌಡ ತುರುವಿಹಾಳ್‌ ವಿರುದ್ಧ 213 ಮತಗಳ ಅಂತರದಲ್ಲಿ ಜಯಿಸಿದ್ದರು. ಗೆಲುವಿನ ಅಂತರ ಕಡಿಮೆ ಇರುವುದರಿಂದ ಬಿಜೆಪಿ ಅಭ್ಯರ್ಥಿ ಮತ್ತೂಮ್ಮೆ ಟಿಕೆಟ್‌ ಕೇಳುವುದರಲ್ಲಿ ಯಾವುದೇ ಅನುಮಾನ ಇಲ್ಲ. ಹಾಗೆಯೇ ಕಾಂಗ್ರೆಸ್‌ ಕೂಡ ಫೈಟ್‌ ನೀಡಬಹುದಾದ ಕ್ಷೇತ್ರ ಇದಾಗಿದೆ.

ಹಿರೇಕೇರೂರು: ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಬಿ.ಸಿ.ಪಾಟೀಲ್‌ ಅವರು 72,461 ಮತ ಪಡೆದು ಬಿಜೆಪಿಯ ಯು.ಬಿ.ಬಣಕಾರ ವಿರುದ್ಧ ಕೇವಲ 555 ಮತಗಳ ಅಂತರದಲ್ಲಿ ಜಯಿಸಿದ್ದರು. ಈಗ ಮತ್ತೆ ಚುನಾವಣೆಯಾದರೆ ಬಿಜೆಪಿ ಅಭ್ಯರ್ಥಿ ಯಾರು ಎಂಬುದರ ಆಧಾರದಲ್ಲಿ ಗೆಲವು ನಿರ್ಧಾರವಾಗುವ ಸಾಧ್ಯತೆ ಹೆಚ್ಚಿದೆ.

ಕಾಗವಾಡ: ಕಾಂಗ್ರೆಸ್‌ ಅಭ್ಯರ್ಥಿ ಶ್ರೀಮಂತ ಪಾಟೀಲ್‌ 83,060 ಮತ ಪಡೆದು ಬಿಜೆಪಿಯ ರಾಜು ಭರಮಗೌಡ ಕಾಗೆ ವಿರುದ್ಧ 32,942 ಸಾವಿರ ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರು. ಮುಂದೆ ಚುನಾವಣೆ ನಡೆದರೂ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ನಡೆಯಲಿದೆ. ಜಾತಿ ಆಧಾರದಲ್ಲಿ ಮತ ಲೆಕ್ಕಾಚಾರವೂ ನಡೆಯಲಿದೆ.

ರಾಣೆಬೆನ್ನೂರು: ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆರ್‌.ಶಂಕರ್‌ ಅವರು 63,910 ಮತ ಪಡೆದು ಹಿಂದಿನ ಸರ್ಕಾರದಲ್ಲಿ ಸ್ಪೀಕರ್‌ ಆಗಿದ್ದ ಕಾಂಗ್ರೆಸ್‌ನ ಕೆ.ಬಿ.ಕೋಳಿವಾಡ ಅವರನ್ನು 4,338 ಮತಗಳಿಂದ ಸೋಲಿಸಿದ್ದರು. ಇಲ್ಲಿ ಪುನಃ ಚುನಾವಣೆ ನಡೆದರೆ ಪಕ್ಷೇತರ ಅಭ್ಯರ್ಥಿ ಗೆಲುವು ಅನುಮಾನವಾದರೂ, ರಾಷ್ಟ್ರೀಯ ಪಕ್ಷದ ಚಿಹ್ನೆಯಡಿ ಸುಲಭ ಗೆಲುವು ಸಾಧಿಸುವ ಸಾಧ್ಯತೆ ಹೆಚ್ಚಿದೆ.

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next