Advertisement

ರಾತ್ರಿ ಕಂಡ ಬಾವಿಗೆ ಬಿದ್ದ ಹೊರಟ್ಟಿ : ಸಿದ್ದು

04:58 PM Jun 09, 2022 | Team Udayavani |

ಧಾರವಾಡ: ಬಿಜೆಪಿ ಪಕ್ಷ ಸೇರಿರುವ ಬಸವರಾಜ ಹೊರಟ್ಟಿ ಅವರು ರಾತ್ರಿ ಕಂಡ ಬಾವಿಯಲ್ಲಿ ಹಗಲು ಹೋಗಿ ಬಿದ್ದಿದ್ದು, ಅವರನ್ನು ಸೋಲಿಸಿ ಶಿಕ್ಷಕರು ಬಸವರಾಜ ಗುರಿಕಾರ ಅವರನ್ನು ಗೆಲ್ಲಿಸುತ್ತಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

Advertisement

ವಿಧಾನ ಪರಿಷತ್‌ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಸವರಾಜ ಗುರಿಕಾರ ಪರವಾಗಿ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹೊರಟ್ಟಿ ಅವರು ರಾಜಕೀಯ ಜೀವನ ಆರಂಭಿಸಿದ್ದೇ ಜನತಾ ಪರಿವಾರದಿಂದ. ಜನತಾ ಪಾರ್ಟಿ, ಜನತಾ ದಳ, ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಹೊರಟ್ಟಿ ಅವರು ಕೋಮುವಾದಿ ಬಿಜೆಪಿ ಸೇರುತ್ತಾರೆಂದು ನಾನೂ ನಿರೀಕ್ಷಿಸಿರಲಿಲ್ಲ. ಆದರೆ 42 ವರ್ಷಗಳ ಕಾಲ ಅವರನ್ನು ಗೆಲ್ಲಿಸಿ ದಾಖಲೆ ಮಾಡಲಾಗಿದೆ. ಇದೀಗ ಯಾವುದೇ ಫಲಾಪೇಕ್ಷೆಗಳೇ ಇಲ್ಲದೆ ಶಿಕ್ಷಕರಿಗಾಗಿ ಹೋರಾಟ ನಡೆಸುತ್ತಾ ಬಂದಿರುವ ಬಸವರಾಜ ಗುರಿಕಾರ ಅವರನ್ನು ಆಯ್ಕೆ ಮಾಡುವ ಸರದಿ ಬಂದಿದೆ ಎಂದರು.

ಮೋದಿ ಬಗ್ಗೆ ಸಿದ್ದು ವ್ಯಂಗ್ಯ: ತಮ್ಮ ಭಾಷಣದುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ತೀವ್ರ ವ್ಯಂಗ್ಯವಾಡಿದ ಸಿದ್ದರಾಮಯ್ಯ ಅವರು, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಶೇ.40 ಲಂಚ ಇದೆ ಎಂದು ಪ್ರಧಾನಿಗೆ ದೂರು ಬರೆದು ಜೂನ್‌ 7ಕ್ಕೆ ಒಂದು ವರ್ಷವಾಯಿತು. ಆದರೆ ಈವರೆಗೂ ಯಾರ ಮೇಲೂ ಕ್ರಮ ಕೈಗೊಂಡಿಲ್ಲ. ಬದಲಿಗೆ ಸಂತೋಷ್‌ ಎಂಬ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿತು. ಈ ಪ್ರಕರಣದಲ್ಲೇ ಈಶ್ವರಪ್ಪ ರಾಜೀನಾಮೆ ನೀಡಿರುವುದು ಸರ್ಕಾರದಲ್ಲಿ ಭ್ರಷ್ಟಾಚಾರ ಇರುವುದು ಸಾಬೀತಾದಂತಾಗಿದೆ. ಹಾಗಿದ್ದರೆ ಪ್ರಧಾನಿ “ನಾ ಕಾವೂಂಗ, ನಾ ಕಾನೇ ದೂಂಗಾ’ ಎಂದಿದ್ದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು.

ಇನ್ನು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ ಸಿದ್ದರಾಮಯ್ಯ ಅವರು, 2013ರಿಂದ 2018ರವರೆಗೆ ಪ್ರತಿ ವರ್ಷ ಮೂರು ಲಕ್ಷದಂತೆ ಒಟ್ಟು 15 ಲಕ್ಷ ಮನೆಗಳನ್ನು ನಿರ್ಮಿಸಿ ವಸತಿ ರಹಿತರಿಗೆ ಹಂಚಲಾಗಿತ್ತು. ಆದರೆ 2018ರಿಂದ ಇಲ್ಲಿಯವರೆಗೆ ಒಂದು ಮನೆಯನ್ನೂ ಸರ್ಕಾರ ನಿರ್ಮಿಸಿ ಹಂಚಿಕೆ ಮಾಡಿಲ್ಲ. 2018ರ ಮಾರ್ಚ್‌ವರೆಗೆ ರಾಜ್ಯ ಸರ್ಕಾರದ ಮೇಲೆ 2.42ಲಕ್ಷ ಕೋಟಿ ಸಾಲ ಇತ್ತು. ಆದರೆ 2022ಕ್ಕೆ ಇದು ಏಕಾಏಕಿ 5.40ಲಕ್ಷ ಕೋಟಿಗೆ ಏರಿಕೆಯಾಗಿದ್ದು ಹೇಗೆ ? ಪ್ರತಿ ವರ್ಷ 44ಸಾವಿರ ಕೋಟಿ ಸಾಲ ತೀರಿಸಲಾಗುತ್ತಿದೆ. ಹೀಗಾದರೆ ರಾಜ್ಯ ಉದ್ದಾರವಾಗುವುದು ಹೇಗೆ ? ನಾನೇ ಮುಂದೆ ಮುಖ್ಯಮಂತ್ರಿಯಾಗಿ ಬಂದರೂ ಇದನ್ನು ಸರಿಪಡಿಸಲು ಕನಿಷ್ಠ ಎರಡು ವರ್ಷಗಳು ಬೇಕು ಎಂದರು.

Advertisement

ಕೊರೊನಾ ಸಂದರ್ಭ ಕಾರ್ಪೊರೇಟ್‌ ಕುಳಗಳ ಆದಾಯ 33ಲಕ್ಷ ಕೋಟಿ ರೂ.ಗೆ ಹೆಚ್ಚಳವಾಗಿದೆ. ಆದರೆ ಇದೇ ಸಂದರ್ಭದಲ್ಲಿ ಅವರಿಗೆ ವಿಧಿಸಲಾಗುತ್ತಿದ್ದ ತೆರಿಗೆ ಶೇ.33ರಿಂದ ಶೇ.22ಕ್ಕೆ ತಗ್ಗಿಸಲಾಗಿದೆ. ಇದರಿಂದ ರಾಜ್ಯಕ್ಕೆ ಬರಬೇಕಾದ ಒಂದು ಲಕ್ಷ ಕೋಟಿ ಖೋತಾ ಆಗಿದೆ. ಆದರೆ ಸರ್ಕಾರ ಮಾತ್ರ ಮಧ್ಯಮ ವರ್ಗ ಮತ್ತು ಬಡವರ ತಲೆ ಬೋಳಿಸುವ ಕೆಲಸ ಮಾಡುತ್ತಿದೆ. ಹೀಗಾಗಿ ಸಾಮಾಜಿಕ ಭದ್ರತೆ ಸದಾ ಕಾಪಾಡುವ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ವಿಧಾನ ಪರಿಷತ್‌ ಸದಸ್ಯ ಸಲೀಂ ಅಹ್ಮದ್‌, ಅಭ್ಯರ್ಥಿ ಬಸವರಾಜ ಗುರಿಕಾರ, ಶಾಸಕರಾದ ಶ್ರೀನಿವಾಸ ಮಾನೆ, ಕುಸುಮಾವತಿ ಶಿವಳ್ಳಿ, ವೀರಣ್ಣ ಮತ್ತಿಕಟ್ಟಿ, ಅನಿಲ ಪಾಟೀಲ, ಅಲ್ತಾಫ್‌ ಹಳ್ಳೂರ, ದೀಪಕ ಚಿಂಚೋರೆ, ಇಸ್ಮಾಯಿಲ್‌ ತಮಟಗಾರ ಇದ್ದರು.

ನಾನು ಶಿಕ್ಷಕರಿಂದ ಶಿಕ್ಷಕರಿಗೋಸ್ಕರ ಕೆಲಸ ಮಾಡಿದ್ದೇನೆ. ಶಿಕ್ಷಕರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ನನಗೆ ಈ ಬಾರಿ ಅವಕಾಶ ನೀಡಿ ಎಂದು ಶಿಕ್ಷಕರಲ್ಲಿ ಪ್ರಾರ್ಥಿಸುತ್ತೇನೆ. –ಬಸವರಾಜ ಗುರಿಕಾರ, ಕಾಂಗ್ರೆಸ್‌ ಅಭ್ಯರ್ಥಿ.

ಪಠ್ಯಪುಸ್ತಕದಲ್ಲಿ ಇತಿಹಾಸ ಪುರುಷರ ಪಠ್ಯಗಳನ್ನು ತಿರುಚಲಾಗಿದೆ. ಹಿಂದೂಗಳು ನಾವೆಲ್ಲರೂ ಒಂದು ಎನ್ನುವ ಬಿಜೆಪಿ ಕುವೆಂಪು, ನಾರಾಯಣಗುರು, ಭಗತ್‌ ಸಿಂಗ್‌, ಅಂಬೇಡ್ಕರ್‌ ಅವರಂಥ ಮಹಾನ್‌ ನಾಯಕರ ಬದುಕಿನ ಸತ್ಯವನ್ನು ತನಗೆ ಬೇಕಾದಂತೆ ತಿರುಚಿದೆ. ಅಂಬೇಡ್ಕರ್‌ ಪಾಠದಲ್ಲಿ ಸಂವಿಧಾನ ಶಿಲ್ಪಿ ಎಂಬ ಅಂಶವನ್ನೇ ಕೈಬಿಡಲಾಗಿದೆ. ವೈಚಾರಿಕತೆ, ವಿಜ್ಞಾನ ಹಾಗೂ ಸತ್ಯ ಹೇಳಬೇಕಾದ ಸರ್ಕಾರ ಪಠ್ಯ ಪರಿಷ್ಕರಣೆ ಹೆಸರಿನಲ್ಲಿ ಮೌಡ್ಯ ಬಿತ್ತುತ್ತಿದೆ.  -ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ.

Advertisement

Udayavani is now on Telegram. Click here to join our channel and stay updated with the latest news.

Next