Advertisement

ಕೊಕ್ಕರೆ ಬೆಳ್ಳೂರಲ್ಲಿ ಪಕ್ಷಿಗಳ ಸಂತಾನೋತ್ಪತ್ತಿಗೆ ಅಡ್ಡಿ

04:43 PM Nov 03, 2019 | Suhan S |

ಮಂಡ್ಯ: ಜಿಲ್ಲೆಯ ಪ್ರಸಿದ್ಧ ಪಕ್ಷಿಧಾಮ ಕೊಕ್ಕರೆ ಬೆಳ್ಳೂರಿನಲ್ಲಿ ಮರಗಳ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಪ್ರತಿ ವರ್ಷ ಇಲ್ಲಿಗೆ ವಲಸೆ ಬರುವ ಹಕ್ಕಿಗಳ ಸಂತಾನೋತ್ಪತ್ತಿಗೆ ಅಡ್ಡಿಯಾಗಿದ್ದು, ಸುರಕ್ಷಿತ ತಾಣಗಳಿಗೆ ಪಕ್ಷಿಗಳು ಹುಡುಕಾಟ ನಡೆಸಿವೆ.

Advertisement

ಜನವಸತಿ ಪ್ರದೇಶಗಳು ಇರುವ ಕಡೆ ಎತ್ತರಕ್ಕೆ ಬೆಳೆದಿರುವ ಮರಗಳಲ್ಲಿ ಮಾತ್ರ ಗೂಡು ಕಟ್ಟಿ ಸಂತಾನೋತ್ಪತ್ತಿ ಮಾಡುವುದು ಕೊಕ್ಕರೆ ಬೆಳ್ಳೂರಿಗೆ ವಲಸೆ ಬರುವ ಹಕ್ಕಿಗಳ ವೈಶಿಷ್ಟé. ಆದರೆ, ಜನವಸತಿ ಪ್ರದೇಶಗಳಲ್ಲಿ ಬೆಳೆದಿರುವ ಮರಗಳ ಸಂಖ್ಯೆ ಕುಸಿಯುತ್ತಿರುವುದು ಪಕ್ಷಿ ಪ್ರಿಯರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ, ಪಕ್ಷಿಧಾಮದ ವ್ಯಾಪ್ತಿಯಲ್ಲಿ ಬೆಳೆ ನಿಂತಿರುವ ಮರಗಳನ್ನು ಉಳಿಸುವಲ್ಲಿ ಹಾಗೂ ಹೊಸದಾಗಿ ಮರ ಬೆಳೆಸುವುದಕ್ಕೆ ಅರಣ್ಯ ಇಲಾಖೆ ನಿರಾಸಕ್ತಿ ವಹಿಸಿರುವುದರಿಂದ ಮುಂದಿನ ದಿನಗಳಲ್ಲಿ ಸಂತಾನೋತ್ಪತ್ತಿಗೆ ಬರುವ ಪಕ್ಷಿಗಳು ಬೇರೆಡೆಗೆ ವಲಸೆ ಹೋಗುವ ಆತಂಕ ಮೂಡಿದೆ. ಕೊಕ್ಕರೆ ಬೆಳ್ಳೂರು ಜಿಲ್ಲೆಯ ರಂಗನತಿಟ್ಟು, ಹೇಮಗಿರಿ, ಗೆಂಡೆಹೊಸಹಳ್ಳಿಯ ಪರಿಸರಕ್ಕಿಂತಲೂ ಭಿನ್ನ. ಊರ ಮಧ್ಯೆ ಇರುವ ಹುಣಸೆ, ಗೊಬ್ಬಳಿ ಸೇರಿ ಹತ್ತಾರು ಮರಗಳ ಮೇಲೆ ಬೇರೆಡೆಗಳಿಂದ ವಲಸೆ ಬಂದು ನೆಲೆಯೂರುವ ಕೊಕ್ಕರೆಗಳು ಗೂಡು ಕಟ್ಟಿ ಮರಿ ಮಾಡಿ ಸ್ವಸ್ಥಾನಕ್ಕೆ ಹಿಂತಿರುಗುತ್ತವೆ. ಹೆಜ್ಜಾರ್ಲೆ, ಸ್ಪಾರ್ಕ್‌ಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತವೆ.

ಮರಗಳ ಸಂಖ್ಯೆ ಕ್ಷೀಣಕ್ಕೆ ಕಾರಣ: ಕೊಕ್ಕರೆ ಬೆಳ್ಳೂರಿನಲ್ಲಿ ಸರ್ಕಾರಿ ಭೂಮಿ ಇಲ್ಲ. ಜಮೀನಿನಲ್ಲಿ ಬೆಳೆದಿರುವ ಮರಗಳೆಲ್ಲವೂ ಊರಿನ ಜನರಿಗೆ ಸೇರಿದ್ದಾಗಿದೆ. ಬಿರುಗಾಳಿ ಮಳೆಗೆ ಅನೇಕ ಮರ ಉರುಳಿ ಬೀಳುತ್ತಿದ್ದರೆ, ನೀರಿನ ಕೊರತೆಯಿಂದಲೂ ಮರಗಳು ಒಣಗುತ್ತಿವೆ. ಅಲ್ಲದೆ, ಹೆಜ್ಜಾರ್ಲೆಗಳಿಗೆ ಮೀನು ಪ್ರಮುಖ ಆಹಾರವಾಗಿದ್ದು, ತಿಂದ ಮೀನಿನಿಂದ ಹೊರ ಬೀಳುವ ತ್ಯಾಜ್ಯ ಮರಗಳ ಮೇಲೆ ಬಿದ್ದು ಮರಗಳು ಸತ್ವ ಕಳೆದುಕೊಳ್ಳುತ್ತಿವೆ ಎನ್ನುವ ಮಾತುಗಳೂ ಇವೆ. ಹೀಗೆ ವಿವಿಧ ಕಾರಣಗಳಿಂದಾಗಿ ಕೊಕ್ಕರೆ ಬೆಳ್ಳೂರಿನಲ್ಲಿ ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ.

ಸರ್ಕಾರಿ ಭೂಮಿ ಇಲ್ಲ: ಕೊಕ್ಕರೆ ಬೆಳ್ಳೂರಿನಲ್ಲಿ ಮರ ಬೆಳೆಸುವುದಕ್ಕೆ ಅಲ್ಲಿ ಯಾವುದೇ ಸರ್ಕಾರಿ ಭೂಮಿ ಇಲ್ಲ. ರೈತರ ಜಮೀನುಗಳಲ್ಲಿರುವ ಮರಗಳನ್ನು ಉಳಿಸಿಕೊಳ್ಳುವುದೊಂದೇ ಅರಣ್ಯ ಇಲಾಖೆಗೆ ಇರುವ ಏಕೈಕ ಮಾರ್ಗ. ಆ ಮರಗಳನ್ನು ಉಳಿಸಿಕೊಳ್ಳುವ ಹಾಗೂ ರೈತರ ಮನವೊಲಿಸಿ ಮರ ಬೆಳೆಸುವುದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ನಿರಾಸಕ್ತಿ ವಹಿಸಿದ್ದಾರೆ. ಇದೂ ಸಹ ಕೊಕ್ಕರೆ ಬೆಳ್ಳೂರು ಪಕ್ಷಿಧಾಮ ಆಕರ್ಷಣೆ ಕಳೆದುಕೊಳ್ಳುವುದಕ್ಕೆ ಮತ್ತೂಂದು ಪ್ರಮುಖ ಕಾರಣವಾಗಿದೆ.

ಜನವಸತಿ ಪ್ರದೇಶದಿಂದ ದೂರ ಇರುವ ಬನ್ನಹಳ್ಳಿ ವ್ಯಾಪ್ತಿಯಲ್ಲಿ ಮರಗಳ ಸಂಖ್ಯೆ ಹೆಚ್ಚಾಗಿದ್ದರೂ ಹೆಜ್ಜಾರ್ಲೆಗಳಾಗಲಿ, ಸ್ಪಾರ್ಕ್‌ಗಳಾಗಲಿ ಅಲ್ಲಿಗೆ ತೆರಳಿ ಗೂಡುಕಟ್ಟಿ ಮರಿ ಮಾಡುವುದಿಲ್ಲ. ಜನವಸತಿ ಪ್ರದೇಶಗಳೊಂದಿಗೆ ಹಿಂದಿನಿಂದಲೂ ನಂಟನ್ನು ಬೆಳೆಸಿಕೊಂಡಿರುವ ಹೆಜ್ಜಾರ್ಲೆಗಳು ಇಲ್ಲಿಯೇ ನೆಲೆಯೂರುವುದಕ್ಕೆ ಬಯಸುತ್ತಿವೆ ಎನ್ನುವುದು ಸ್ಥಳೀಯರು ಹೇಳುವ ಮಾತು.

Advertisement

1916ರಲ್ಲಿ ಕೊಕ್ಕರೆ ಬೆಳ್ಳೂರಿನಲ್ಲಿ ಪ್ಲೇಗ್‌ ಕಾಣಿಸಿಕೊಂಡಿತ್ತು. ಆ ಸಮಯದಲ್ಲಿ ಊರಿನ ಜನರೆಲ್ಲರೂ ಸ್ವಲ್ಪ ದೂರಕ್ಕೆ ಬಂದು ತಾತ್ಕಾಲಿಕ ಶೆಡ್‌ ನಿರ್ಮಿಸಿ ವಾಸಿಸುತ್ತಿದ್ದರು. ಆಗಲೂ ಪಕ್ಷಿಗಳು ಜನ ವಾಸಿಸುತ್ತಿದ್ದ ಸ್ಥಳ ಬಿಟ್ಟು ತಾತ್ಕಾಲಿಕ ಶೆಡ್‌ಗಳ ಬಳಿ ಇದ್ದ ಮರಗಳ ಮೇಲೆ ಬಂದು ನೆಲೆಸಿದ್ದವು ಎಂದು ನಮ್ಮ ತಾತ ಹೇಳುತ್ತಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಹೆಜ್ಜಾರ್ಲೆ ಬಳಗದ ಅಧ್ಯಕ್ಷ ಲಿಂಗೇಗೌಡ. ಗ್ಸಾಂಡರ್ 1970ನೇ ಇಸವಿಯಲ್ಲಿ ಹೆಜ್ಜಾರ್ಲೆ, ಸ್ಪಾರ್ಕ್‌ಗಳು ಕೊಕ್ಕರೆ ಬೆಳ್ಳೂರು ಹೊರತುಪಡಿಸಿ ರಾಜ್ಯದ ಬೇರಾವುದೇ ಭಾಗದಲ್ಲೂ ಕಂಡುಬರುತ್ತಿರಲಿಲ್ಲ. ಆದರೆ, ಮರಗಳ ಸಂಖ್ಯೆ ಕಡಿಮೆಯಾದಂತೆ ಪಕ್ಷಿಗಳು ಬೇರೆ ತಾಣ ಆಶ್ರಯಿಸಲಾರಂಭಿಸಿದವು. ಇದರ ಪರಿಣಾಮ ರಂಗನತಿಟ್ಟು, ಕುಕ್ಕರಹಳ್ಳಿ, ಕಾರಂಜಿ ಕೆರೆಗಳಲ್ಲೂ ಪೆಲಿಕಾನ್‌ಗಳು ನೆಲೆಯೂರುವುದಕ್ಕೆ ಆರಂಭಿಸಿದವು ಎನ್ನುತ್ತಾರೆ.

ಕರಾಳ 3ವರ್ಷ: ಕಳೆದ 3 ವರ್ಷದಿಂದ ಹೆಜ್ಜಾಲೆಗಳ ಪಾಲಿಗೆ ಕರಾಳ ವರ್ಷವೇ ಆಗಿತ್ತು. ಕಾರಣ, ಜಂತುಹುಳು ಕಾರಣದಿಂದ ಹಲವು ಪಕ್ಷಿಗಳು ಮೃತಪಟ್ಟಿದ್ದವು. 2016ರಲ್ಲಿ 8, 2017ರಲ್ಲಿ 59 ಮತ್ತು 2018ರಲ್ಲಿ 12 ಕೊಕ್ಕರೆ ಮೃತಪಟ್ಟಿದ್ದವು. ಇದು ಕಣ್ಣಿಗೆ ಕಂಡ ಮಾಹಿತಿಯಾದರೆ, ಅದೆಷ್ಟೋ ಪಕ್ಷಿಗಳು ಅಸ್ವಸ್ಥಗೊಂಡು ಅರಣ್ಯ ಪ್ರದೇಶ, ನಿರ್ಜನ ಪ್ರದೇಶದಲ್ಲಿ ಬಿದ್ದು ಕಾಣದಂತಾದವು.

 

ಮರ ಬೆಳೆಸಲು ಉತ್ತೇಜನ :  ಕೊಕ್ಕರೆ ಬೆಳ್ಳೂರು ವ್ಯಾಪ್ತಿಯಲ್ಲಿ ಹೆಚ್ಚು ಮರ ಬೆಳೆಸಲು ಸ್ಥಳೀಯರನ್ನು ಉತ್ತೇಜಿಸಲಾಗುತ್ತಿದೆ. ಹಾಲಿ ಕೊಕ್ಕರೆ ಬೆಳ್ಳೂರು ವ್ಯಾಪ್ತಿಯಲ್ಲಿ 224 ಮರ ಗುರುತಿಸಿ ವಾರ್ಷಿಕ 2 ಲಕ್ಷ ರೂ. ವೆಚ್ಚದಲ್ಲಿ ಅವುಗಳನ್ನು ಕಾಪಾಡಿಕೊಂಡು ಬರಲಾಗುತ್ತಿದೆ. ಈಗಲೂ ಜನರಿಗೆ ತಮ್ಮ ಜಮೀನುಗಳಲ್ಲಿ ಹೆಚ್ಚು ಮರ ಬೆಳೆಯುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಇಲಾಖಾ ವತಿಯಿಂದ ಮರ ನೆಟ್ಟು ಬೆಳೆಸುವುದಕ್ಕೆ ಅಲ್ಲಿ ಅರಣ್ಯ ಅಥವಾ ಸರ್ಕಾರಿ ಜಾಗವಿಲ್ಲ ಎಂದು ಮದ್ದೂರು ವಲಯ ಅರಣ್ಯಾಧಿಕಾರಿ ಅಲೆಗ್ಸಾಂಡರ್ ತಿಳಿಸಿದ್ದಾರೆ.

 

ವರ್ಷದಿಂದ ವರ್ಷಕ್ಕೆ ಹೆಚ್ಚಾಗದ ಪಕ್ಷಿಗಳು :  ಪ್ರತಿ ವರ್ಷ ಸುಮಾರು 2 ಸಾವಿರದಿಂದ 2500 ಪಕ್ಷಿಗಳು ಆಗಮಿಸುತ್ತವೆ ಎಂಬ ಅಂದಾಜಿದೆ. ಆದರೆ, ನಂತರದ ವರ್ಷವೂ ಅಷ್ಟೇ ಸಂಖ್ಯೆಯಲ್ಲಿ ಪಕ್ಷಿಗಳ ಆಗಮನವಾಗುತ್ತಿದೆ. ಸಂತಾನೋತ್ಪತ್ತಿ ಮುಗಿಸಿ ಮರಿಗಳೊಂದಿಗೆ ಹಾರಿಹೋಗುವ ಪಕ್ಷಿಗಳು ನಂತರದ ವರ್ಷಗಳಲ್ಲಿ ಬರುವಾಗಲೂ ಅದೇ ಪ್ರಮಾಣದಲ್ಲಿವೆ. ಹಾಗಾದರೆ ಉಳಿದ ಪಕ್ಷಿಗಳು ಎಲ್ಲಿ ಆಶ್ರಯ ಪಡೆಯುತ್ತಿವೆ ಎನ್ನುವುದು ಯಾರ ಅರಿವಿಗೂ ಬಾರದಂತಾಗಿದೆ. ಹೆಜ್ಜಾರ್ಲೆ ಬಳಗದಲ್ಲಿ ಹಿಂದೆಲ್ಲಾ 15ಕ್ಕೂ ಹೆಚ್ಚು ಮಂದಿ ಇದ್ದರು. ಈಗ ಉಳಿದಿರೋದು ನಾನೊಬ್ಬ ಮಾತ್ರ. ನಾನು ಇರುವವರೆಗೂ ನನ್ನ ಕೈಲಾದಷ್ಟು ಪಕ್ಷಿಗಳ ಉಳಿವಿಗೆ ಶ್ರಮಿಸುತ್ತೇನೆ ಎಂದು ಹೆಜ್ಜಾರ್ಲೆ ಬಳಗದ ಅಧ್ಯಕ್ಷ ಲಿಂಗೇಗೌಡ ಹೇಳುವ ಮಾತು.

 

ನಿರ್ವಹಣೆ ವೈಫ‌ಲ್ಯ :  ರಂಗನತಿಟ್ಟು ಪಕ್ಷಿಧಾಮಕ್ಕೆ ಬರುವ ಪಕ್ಷಿಗಳ ಗಣತಿ ಮಾಡಲಾಗುತ್ತದೆಯೇ ವಿನಃ ಕೊಕ್ಕರೆ ಬೆಳ್ಳೂರಿನಲ್ಲಿ ಪಕ್ಷಿಗಳ ಗಣತಿ ನಡೆಯುವುದೇ ಇಲ್ಲ. ವರ್ಲ್ಡ್ ವೈಲ್ಡ್‌ ಫ‌ಂಡ್‌ ಫಾರ್‌ ಫಾರೆಸ್ಟ್‌ (ಡಬ್ಲ್ಯುಡಬ್ಲ್ಯುಎಫ್) ಸುಮಾರು 3 ವರ್ಷದಿಂದ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದರೂ ಅದು ಸಮರ್ಪಕವಾಗಿಲ್ಲ. ಕೆರೆ-ಕಟ್ಟೆ ಅಭಿವೃದ್ಧಿಪಡಿಸಿ ಪಕ್ಷಿಗಳಿಗೆ ಶುದ್ಧ ನೀರು, ಆಹಾರ ಸಿಗುವಂತೆ ಮಾಡುವ, ಅವುಗಳ ಸಂತಾನೋತ್ಪತ್ತಿಗೆ ಪೂರಕ ವಾತಾವರಣ ಸೃಷ್ಟಿಸುವಲ್ಲಿ ಸಂಸ್ಥೆ ವಿಫ‌ಲವಾಗಿದೆ ಎಂಬ ಆರೋಪ ಕೇಳಿಬರುತ್ತಿವೆ. ರಾಷ್ಟ್ರೀಯ ಸಂರಕ್ಷಿತ ಪಕ್ಷಿಧಾಮ ಎಂದು ಘೋಷಿಸಲ್ಪಟ್ಟಿರುವ ಈ ಸ್ಥಳದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿದ್ದರೂ ಯಾರೂ ಅದರ ಬಗ್ಗೆ ಗಮನಹರಿಸದಿರುವುದು ಪಕ್ಷಿ ಪ್ರಿಯರಲ್ಲಿ ಬೇಸರ ಮೂಡಿಸಿದೆ.

 

-ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next