ಬಳ್ಳಾರಿ: ರಾಜ್ಯ ಸರ್ಕಾರ ಮೂರು ವರ್ಷಗಳ ಬಳಿಕ ಕೈಗೆತ್ತಿಕೊಂಡಿದ್ದ ಶಿಕ್ಷಕರ ವರ್ಗಾವಣೆಗೆ ನಗರಪ್ರದೇಶದಲ್ಲಿನ ಶಿಕ್ಷಕರೇ ಮುಳುವಾಗಿ ಪರಿಣಮಿಸಿದ್ದಾರೆ. ಅನಾರೋಗ್ಯದ ನೆಪವೊಡ್ಡಿ ಶಿಕ್ಷಕರ ಮಾತೃಸಂಘದಿಂದ ಸರ್ಕಾರದ ಮೇಲೆ ಒತ್ತಡ ಹೇರಿ ಇಡೀ ವರ್ಗಾವಣೆ ಪ್ರಕ್ರಿಯೆನ್ನೇ ಸ್ಥಗಿತಗೊಳಿಸಲು ಕಾರಣವಾಗಿದ್ದಾರೆ ಎಂದು ರಾಜ್ಯ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಹಕಾರ್ಯದರ್ಶಿ ಮುತ್ತಣ್ಣ ಹುಬ್ಬಳ್ಳಿ ಆರೋಪಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮೂರು ವರ್ಷಗಳ ಬಳಿಕ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಈಚೆಗೆ ಚಾಲನೆ ನೀಡಿತ್ತು. 2017ರ ತಿದ್ದುಪಡಿ ಕಾಯ್ದೆ ಪ್ರಕಾರ ನಗರ ಪ್ರದೇಶದಲ್ಲಿ 10 ವರ್ಷ ಸೇವೆ ಸಲ್ಲಿಸಿದ್ದ ಶಿಕ್ಷಕರು ಗ್ರಾಮೀಣ ಭಾಗಕ್ಕೆ ಹೋಗಬೇಕು. ಈ ನಿಯಮದ ಪ್ರಕಾರ ಗ್ರಾಮೀಣ ಪ್ರದೇಶಕ್ಕೆ ಹೋಗಿ ಕಾರ್ಯನಿರ್ವಹಿಸಲಾಗದ ನಗರ ಪ್ರದೇಶದ ಶೇ. 15ರಷ್ಟು ಶಿಕ್ಷಕರು, ಶಿಕ್ಷಕರ ಮಾತೃ ಸಂಘದ ರಾಜ್ಯಾಧ್ಯಕ್ಷರಿಂದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರಿಗೆ ಒತ್ತಡ ಹೇರಿ ಇಡೀ ವರ್ಗಾವಣೆ ಪ್ರಕ್ರಿಯೆಯನ್ನೇ ಸ್ಥಗಿತಗೊಳ್ಳುವಂತೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದಲ್ಲಿ ಕೆಲ ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಶೇ. 85ರಷ್ಟು ಶಿಕ್ಷಕರಿಗೆ ತೊಂದರೆ ನೀಡಿದ್ದಾರೆ. ಹಾಗಾಗಿ ಸರ್ಕಾರ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಕೂಡಲೇ 2017ರ ನಿಯಮದ ಪ್ರಕಾರ ಕೂಡಲೇ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದು ಆಗ್ರಹಿಸಿ ಡಿ. 3 ರಂದು ಹುಬ್ಬಳ್ಳಿಯಲ್ಲಿ ಮತ್ತು ಡಿ.10 ರಂದು ಬೆಳಗಾವಿ ಅಧಿವೇಶನದ ವೇಳೆ ಸಂಘದ ರಾಜ್ಯ ಘಟಕದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದವರು ತಿಳಿಸಿದರು.
ನಗರ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಹಲವು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಂತೆ ಗ್ರಾಮೀಣ ಭಾಗದಲ್ಲೂ ದಶಕಗಳ ಕಾಲ ನೂರಾರು ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮೀಣ ಭಾಗದ ಎಲ್ಲ ಶಿಕ್ಷಕರು ನಗರ ಪ್ರದೇಶಕ್ಕೆ ವರ್ಗಾವಣೆ ಕೇಳಲ್ಲ. ಕೆಲವರು ತಮ್ಮ ತಮ್ಮ ಗ್ರಾಮಗಳಿಗೂ ವರ್ಗಾವಣೆ ಬಯಸುವವರೂ ಇದ್ದಾರೆ. ಇದನ್ನು ಗಮನಿಸದೆ, ಕೇವಲ ನಗರ ಪ್ರದೇಶದ ಶಿಕ್ಷಕರ ಸಮಸ್ಯೆಗಳನ್ನಷ್ಟೇ ಆಲಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲೂ ಇಂಥಹ ಸಮಸ್ಯೆಗಳ ನಡುವೆಯೂ ನೂರಾರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದವರು ದೂರಿದರು.
ಕೂಡಲೇ ವರ್ಗಾವಣೆ ಪ್ರಕ್ರಿಯೆ ಆರಂಭಿಸಬೇಕು. ಕೌನ್ಸೆಲಿಂಗ್ ನಡೆಸಿ ಶೈಕ್ಷಣಿಕ ವರ್ಷದ ಅಂತ್ಯಕ್ಕೆ ವರ್ಗಾವಣೆಗೊಂಡ ಶಿಕ್ಷಕರನ್ನು ಬಿಡುಗಡೆಗೊಳಿಸಬೇಕು. ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿ ಸುತ್ತಿರುವ ಶಿಕ್ಷಕರಿಗೆ ತಿಂಗಳಿಗೆ 2500 ರೂ. ಪರಿಹಾರ ಭತ್ಯೆ ನೀಡಬೇಕು. ಎನ್‌ಪಿಎಸ್ ಪದ್ಧತಿ ರದ್ದುಗೊಳಿಸಿ, ಈ ಹಿಂದಿನ ಓಪಿಎಸ್ ಪದ್ಧತಿ ಜಾರಿಗೊಳಿಸಬೇಕು. ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಶೇ. 50ರಷ್ಟು ಪ್ರಾಥಮಿಕ ಶಿಕ್ಷಕರಿಗೆ ಮುಂಬಡ್ತಿ ನೀಡಬೇಕು. ಈ ಹಿಂದೆ ಇದ್ದ ಗ್ರಾಮೀಣ ಶಿಕ್ಷಕರಿಗೆ ಕೃಪಾಂಕ ನೀಡಬೇಕು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ತಾಲೂಕು ಅಧ್ಯಕ್ಷ ಬಿ.ಎಚ್. ಗೌಡ, ರಾಜಶೇಖರ್, ಆನಂದ್, ಬಸವರಾಜ್, ಹುಸೇನ್‌ಪೀರ್, ಪರಶುರಾಮ, ಬಸವಸಿದ್ದಪ್ಪ ಸೇರಿದಂತೆ ಇತರರಿದ್ದರು.