ಹೊಸದಿಲ್ಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಸೋಮವಾರ ಪ್ರಾರಂಭವಾಗಲಿದ್ದು, ಪ್ರತಿಪಕ್ಷಗಳು ಸಂಸತ್ತಿಗೆ ಅಡ್ಡಿಪಡಿಸಿದರೆ “ಕೆಟ್ಟ ಫಲಿತಾಂಶ” ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಭಾನುವಾರ ಹೇಳಿದ್ದಾರೆ.
ಪ್ರತಿಪಕ್ಷಗಳು ಸಂಸತ್ತಿಗೆ ಅಡ್ಡಿಪಡಿಸಿದರೆ, ಇಂದು ಬಂದಿರುವುದಕ್ಕಿಂತ ಕೆಟ್ಟ ಫಲಿತಾಂಶವನ್ನು ಎದುರಿಸಬೇಕಾಗುತ್ತದೆ ಎಂದು ಸಚಿವರು ಹೇಳಿದರು.
ಸಂಸತ್ ನ ಚಳಿಗಾಲದ ಅಧಿವೇಶನವು ಡಿಸೆಂಬರ್ 4ರಿಂದ 22ರವರೆಗೆ ನಡೆಯಲಿದೆ. ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ವಿರುದ್ಧದ ‘ನಗದು-ಪ್ರಶ್ನೆ’ ಆರೋಪಗಳು ಸೇರಿ ಹಲವು ವಿಚಾರದ ಕುರಿತು ಚರ್ಚೆಯಾಗುವ ಸಾಧ್ಯತೆಯಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸರ್ಕಾರವು ಎಲ್ಲಾ ವಿಚಾರಗಳ ಚರ್ಚೆಗೆ ಸಿದ್ದವಿದೆ, ಆದರೆ ನಿಯಮಾನುಸಾರವಾಗಿ ಇದು ನಡೆಯಬೇಕು ಎಂದರು.
“15 ದಿನದ ಅಧಿವೇಶನವಿದೆ.. ರಚನಾತ್ಮಕ ಚರ್ಚೆಗಳ ವಾತಾವರಣವನ್ನು ಕಾಯ್ದುಕೊಳ್ಳಬೇಕು ಎಂದು ನಾವು ವಿನಂತಿಸಿದ್ದೇವೆ. ಚರ್ಚೆಗಳು ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಅನುಸರಿಸಬೇಕು. ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಸರ್ಕಾರ ಸಿದ್ಧವಾಗಿದೆ. ಸರ್ಕಾರ ರಚನಾತ್ಮಕ ಚರ್ಚೆಗೆ ಸಂಪೂರ್ಣ ಸಿದ್ಧವಾಗಿದೆ” ಎಂದು ಜೋಶಿ ಹೇಳಿದರು.