Advertisement

ಎಲುಬಿಲ್ಲದ ನಾಲಗೆಯ ಚಾಳಿ

10:11 AM Dec 12, 2019 | mahesh |

ಮಹಿಳೆಯರ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡುವ ರಾಜಕಾರಣಿಗಳಲ್ಲಿ ಸೂಕ್ಷ್ಮತೆಯ ಪ್ರಜ್ಞೆಯೊಂದನ್ನು ಜನಾಭಿಪ್ರಾಯದ ಮೂಲಕ ಮೂಡಿಸುವ ಉದ್ದೇಶದಿಂದ ಪತ್ರಿಕೆ ಈ ಅಭಿಯಾನವನ್ನು ಹಮ್ಮಿಕೊಂಡಿದೆ. ಇದಕ್ಕೆ ಓದುಗರು ಬಹು ಸಂಖ್ಯೆಯಲ್ಲಿ ಪ್ರತಿಸ್ಪಂದಿಸಿದ್ದು, ಆಯ್ದವುಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ಇನ್ನುಳಿದವುಗಳನ್ನು ನಾಳೆ ಪ್ರಕಟಿಸಲಾಗುವುದು.

Advertisement

ಜನನಾಯಕನ ಸ್ಥಾನಕ್ಕೇ ಅವಮಾನ
ಹೆಣ್ಣಿನ ಬಗೆಗಿನ ಅವಹೇಳನಕಾರಿ ಹೇಳಿಕೆ ನೀಡುವುದು ಜನನಾಯಕನ ಸ್ಥಾನಕ್ಕೇ ಅವಮಾನ. ವೋಟು ಕೇಳಲು ಬಂದಾಗ ಅಮ್ಮ, ಅಕ್ಕ ಎನ್ನುವವರು ಇಂದು ತಮಗೂ ಹೆಣ್ಣಿಗೂ ಸಂಬಂಧವಿಲ್ಲದಂತೆ ಮಾತನಾಡುತ್ತಿದ್ದಾರೆ. ಅಗೌರವಯುತ ಹೇಳಿಕೆ ನೀಡಿದ ಪ್ರತಿಯೊಬ್ಬರೂ ಅತ್ಯಾಚಾರಗಳ ವಿರುದ್ಧ ಧ್ವನಿ ಎತ್ತಿದ್ದರೆ ಇಂದು ಇಂಥ ಅವಮಾನಕರ ಪರಿಸ್ಥಿತಿ ಬರುತ್ತಿರಲಿಲ್ಲ.
– ಪವಿತ್ರಾ ಭಟ್‌, ಪುತ್ತೂರು

ನಾಲಗೆ ಮೇಲೆ ಹಿಡಿತವಿರಲಿ
ಜನನಾಯಕರು ಮಹಿಳೆಯರ ಬಗ್ಗೆ ಅಪಮಾನಕಾರಿ ಹೇಳಿಕೆ ನೀಡಬಾರದು. ಅವರಿಗೆ ಅಭಿಮಾನಿಗಳು-ಹಿಂಬಾಲಕರು ಇರುತ್ತಾರೆ. ಈ ಅಸಂಬದ್ಧ ಹೇಳಿಕೆ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಇನ್ಮುಂದೆ ಮಹಿಳೆಯರ ಬಗ್ಗೆ ಮಾತಾಡುವಾಗ ನಾಲಗೆ ಮೇಲೆ ಹಿಡಿತವಿರಲಿ ಮನಬಂದಂತೆ ಮಾತಾಡುವುದು ನಿಲ್ಲಲಿ ಎಂದು ಆಶಿಸುತ್ತೇವೆ.
– ವೈ.ಎನ್‌. ವೆಂಕಟೇಶಮೂರ್ತಿ ಭಟ್ಟ, ಕೋಟೇಶ್ವರ

ಕ್ಷಮೆ ಯಾಚಿಸುವವರೆಗೆ ಬಿಡಬೇಡಿ
ಎಲ್ಲೇ ಅಹಿತಕರ ಘಟನೆ ನಡೆದರೆ ಹೆಣ್ಣನ್ನೇ ಮೊದಲು ದೂಷಿಸುತ್ತಾರೆ. ನಮ್ಮ ಮನೆಯಲ್ಲೂ ತಾಯಿ, ತಂಗಿ, ಹೆಂಡತಿ, ಮಗಳ ರೂಪದಲ್ಲಿ ಹೆಣ್ಣು ಇದ್ದಾಳೆ. ನಾಳೆ ಅವಳಿಗೂ ಈ ಪರಿಸ್ಥಿತಿ ಬಂದಲ್ಲಿ, ಅದನ್ನು ನಾವು ಹೇಗೆ ಸಹಿಸಿಕೊಳ್ಳುತ್ತೇವೆ ಎಂಬ ಆಲೋಚನೆ ಪ್ರತಿಯೊಬ್ಬರ ಮನಸಲ್ಲಿ ಬಂದರೆ ಯಾರೂ ಕೀಳು ಅಭಿರುಚಿಯ ಹೇಳಿಕೆ ನೀಡಲು ಸಾಧ್ಯವಿಲ್ಲ.
– ಚಿನ್ಮಯಿ ಶೆಣೈ, ಬೆಳ್ಮಣ್ಣು

ಚುನಾವಣೆಯಲ್ಲಿ ಸೋಲಿಸಿ, ಪಾಠ ಕಲಿಸಿ
ಹೆಣ್ಣು ಮತ್ತು ಅತ್ಯಾಚಾರದ ಕುರಿತಾಗಿ ರಾಜಕಾರಣಿಗಳು ನೀಡುವ ಹೇಳಿಕೆಗಳನ್ನು ಕೇಳಲು ನಾಚಿಕೆಯಾಗುತ್ತದೆ. ಮಹಿಳೆಯರ ಬಗ್ಗೆ ಕಿಂಚಿತ್ತೂ ಗೌರವವಿಲ್ಲದ ನಾಯಕರನ್ನು ಜನರು ಪದೇ ಪದೇ ಆಯ್ಕೆ ಮಾಡಿ ಸಂಸತ್ತಿಗೆ ಕಳುಹಿಸುತ್ತಾರೆ. ಇಂಥ ವ್ಯಕ್ತಿಗಳನ್ನು ಮೊದಲು ಚುನಾವಣೆಯಲ್ಲಿ ಸೋಲಿಸಿ ಪಾಠ ಕಲಿಸಬೇಕು. ಉತ್ತಮ ಸಮಾಜಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಇಂಥವರಿಂದ ಅಪಾಯವಿದೆ
-ಸರ್ಫಾನ್‌ , ತುರ್ಕಳಿಕೆ

Advertisement

ದೊಡ್ಡವರ ಸಣ್ಣತನ
ರಾಜಕಾರಣಿಗಳು ನಮ್ಮೆದುರೇ ಬಣ್ಣದ ಮಾತನಾಡಿ, ನಮ್ಮಿಂದಲೇ ಮತ ಪಡೆದು ನಮ್ಮ ದೇಶದ ಹೆಣ್ಣುಮಕ್ಕಳ ಬಗ್ಗೆ ನಾಲಗೆ ಹರಿಬಿಡುತ್ತಾರೆ. ಹೆಣ್ಣಿನ ಮೌಲ್ಯವನ್ನು ಹಾಸ್ಯಕ್ಕೆ ಬಳಸಿಕೊಳ್ಳುತ್ತಾರೆ. ಅದೇ ಐಶ್ವರ್ಯಾ ರೈ ಅವರ ಮಗಳ್ಳೋ ಮೊಮ್ಮಗಳ್ಳೋ ಆಗಿದ್ದರೆ ಅವರು ಹೀಗೆ ಮಾತನಾಡುತ್ತಿದ್ದರೇ?
ನಾವೇ ಆರಿಸಿದವರಲ್ಲವೇ ಈ ಮಹಾನುಭಾವರು?.
– ಪ್ರಜ್ವಲ್‌ ಎನ್‌.ಆರ್‌., ಮಂಡ್ಯ

ರೂಪವೇ ಮಹಿಳೆಗೆ ಮುಳ್ಳಾಯಿತು
ಈ ಸೃಷ್ಟಿ ಹೆಣ್ಣಿಗೆ ವಿಶೇಷ ಶಕ್ತಿಯನ್ನು ಕಲ್ಪಿಸಿದೆ. ಇಂದು ಆಕೆಯ ರೂಪವೇ ಅವಳಿಗೆ ಮಗ್ಗುಲ ಮುಳ್ಳಾಗಿ ಪರಿಣಮಿಸಿದೆ. ಮಹಿಳಾ ದಿನದಂದು ಮಾತ್ರ ಆಕೆಯನ್ನು ಗೌರವಿಸುವುದಲ್ಲದೆ ಅನುದಿನವೂ ಗೌರವದಿಂದ ನಡೆಸಿಕೊಂಡರೆ ಮಾತ್ರ ಸಾರ್ಥಕತೆ ಸಿಗಲಿದೆ.
ವಿದ್ಯಾ ಶೆಣೈ, ಕುಂದಾಪುರ

ಕೀಳು ಹೇಳಿಕೆ ಖಂಡನೀಯ
ಜನಪ್ರತಿನಿಧಿಗಳ ಮಾತು ಜವಾಬ್ದಾರಿ ಯುತವಾಗಿರಬೇಕು. ಕೀಳು ಹೇಳಿಕೆ ನೀಡುವ
ಅವರು ಕ್ಷೇತ್ರದ ಮತದಾರರನ್ನು ಹೇಗೆ ನಡೆಸಿ ಕೊಂಡಾರು? ಸರಕಾರಗಳು ಮಹಿಳೆಯರ ರಕ್ಷಣೆಗೆ ಹಲವು ಯೋಜನೆಗಳನ್ನು ಕೈಗೊಂಡರೂ ಸರಕಾರದಲ್ಲಿರುವವರ ಇಂತಹ ನಡೆ ಖಂಡನೀಯ.
– ಸೂರ್ಯಕಾಂತ ಶೆಟ್ಟಿ, ಬಂಟ್ವಾಳ

ಜನ ನಾಯಕನನ್ನೇ ತಿರಸ್ಕರಿಸಿ
ಜನನಾಯಕರು ಯಾರೇ ಇರಲಿ, ಮಹಿಳೆಯ ಗೌರವಕ್ಕೆ ಚ್ಯುತಿ ತರುವ, ಕೀಳು ಅಭಿರುಚಿಯ ಹೇಳಿಕೆಗಳನ್ನು ನೀಡಬಾರದು. ಒಂದು ವೇಳೆ ಅಂತಹ ಹೇಳಿಕೆಗಳನ್ನು ನೀಡಿದರೆ ಅವರನ್ನು ಮೊದಲು ಜನರು ತಿರಸ್ಕರಿಸಬೇಕು. ಆಗ ಮಾತ್ರ ಅವರಿಗೆ ತಮ್ಮ ತಪ್ಪಿನ ಅರಿವಾಗಬಹುದು.
– ಗಣೇಶ್‌ ನಾಯ್ಕ…, ಕೊಕ್ಕರ್ಣೆ

ಸರಿಯಾದ ಪಾಠ ಕಲಿಸಿ
ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಿಗೆ ಬಹಳ ಗೌರವ. ಆದರೆ ಸಮಾಜವನ್ನು ತಿದ್ದುವ ರಾಜಕಾರಣಿಗಳ ಬಾಯಲ್ಲಿ ಹೆಣ್ಣಿನ ಬಗ್ಗೆ ಇಷ್ಟೊಂದು ಕೀಳು ಮಟ್ಟದ ಹೇಳಿಕೆ ಬರುತ್ತದೆ ಎಂದರೆ ಅದು ನಮ್ಮ ದೇಶದ ದುರಂತವೆ ಸರಿ. ಇವರಿಗೆಲ್ಲ ಪಕ್ಷ ಭೇದ ಮರೆತು ಮುಂಬರುವ ದಿನಗಳಲ್ಲಿ ಸರಿಯಾದ ಪಾಠ ಕಲಿಸಬೇಕಿದೆ.
– ಸತೀಶ್‌ ಭಂಡಾರಿ, ನಾಳ

Advertisement

Udayavani is now on Telegram. Click here to join our channel and stay updated with the latest news.

Next