Advertisement

ತಾಂತ್ರಿಕ ಅತಿಥಿ ಉಪನ್ಯಾಸಕರಿಗೆ ಅಗೌರವ

02:24 PM Sep 20, 2022 | Team Udayavani |

ಹುಬ್ಬಳ್ಳಿ: ತಾಂತ್ರಿಕ ಕಾಲೇಜುಗಳ ಅತಿಥಿ ಉಪನ್ಯಾಸಕರ ಗೌರವ ಹೆಚ್ಚಳ ವಿಚಾರದಲ್ಲಿ ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

Advertisement

ಸರ್ಕಾರಿ ಪದವಿ ಹಾಗೂ ತಾಂತ್ರಿಕ ಕಾಲೇಜುಗಳ ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳ ನಿಟ್ಟಿನಲ್ಲಿ ಸರ್ಕಾರ ಸಮಿತಿ ರಚಿಸಿತ್ತು. ಸಮಿತಿ ಶಿಫಾರಸಿನಂತೆ ಪದವಿ ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳ ಮಾಡಲಾಗಿದ್ದು, ತಾಂತ್ರಿಕ ಕಾಲೇಜುಗಳ ಅತಿಥಿ ಉಪನ್ಯಾಸಕರ ವಿಚಾರದಲ್ಲಿ ಮೌನ ತಾಳಿದ್ದು ನೋಡಿದರೆ ತಮ್ಮನ್ನು ಮಲತಾಯಿ ಮಕ್ಕಳಂತೆ ಸರ್ಕಾರ ಪರಿಗಣಿಸುತ್ತಿದೆಯೇ ಎಂಬ ನೋವು ತಾಂತ್ರಿಕ ಕಾಲೇಜುಗಳ ಅತಿಥಿ ಉಪನ್ಯಾಸಕರನ್ನು ಆವರಿಸಿದೆ.

ನಾವೇನು ತಪ್ಪು ಮಾಡಿದ್ದೇವೆ?:

ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಗೌರವಧನ ವನ್ನು 9,000 ರೂ.ನಿಂದ 12,000ರೂ.ಗೆ ಹೆಚ್ಚಿಸಲಾಗಿದೆ. ಅದೇ ರೀತಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅತಿಥಿ ಶಿಕ್ಷಕರ ಗೌರವಧನವನ್ನು ಕ್ರಮವಾಗಿ 7,500 ರೂ. ಇದ್ದದ್ದು, 10,000 ಹಾಗೂ 8, 000 ರೂ. ಇದ್ದದ್ದು 10,500ರೂ.ಗಳಿಗೆ ಹೆಚ್ಚಿಸಲಾಗಿದೆ. ಸರ್ಕಾರಿ ಎಂಜಿನಿಯ ರಿಂಗ್‌ ಕಾಲೇ ಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿರುವ ನಾವು ಎಂಟೆಕ್‌ ಮುಗಿಸಿದ್ದೇವೆ. ಕಳೆದ ಹಲವು ವರ್ಷ ಗಳಿಂದ ಬೋಧನೆಯಲ್ಲಿದ್ದೇವೆ. ಆದರೂ ನಮ್ಮ ಗೌರವಧನದಲ್ಲಿ ಒಂದು ರೂ. ಹೆಚ್ಚಳ ಮಾಡದೆ ನಮ್ಮನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಹಲವು ಅತಿಥಿ ಉಪನ್ಯಾಸಕರು ಅಳಲು ತೋಡಿಕೊಂಡಿದ್ದಾರೆ.

ಸರ್ಕಾರಿ ತಾಂತ್ರಿಕ ಕಾಲೇಜುಗಳ ಅತಿಥಿ ಉಪನ್ಯಾಸ ಕರಿಗೆ ಗೌರವಧನವನ್ನು ತಾಂತ್ರಿಕ ಶಿಕ್ಷಣ ಇಲಾಖೆಯಿಂದ ನೀಡಲಾಗುತ್ತದೆ. ಆದರೆ, ಕಾಲೇಜುಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಡಿ ಕಾರ್ಯನಿರ್ವಹಣೆಗೆ ಒಳಪಟ್ಟಿವೆ. ಕೋವಿಡ್‌ ನಂತರದಲ್ಲಿ ವಿಟಿಯು ತಾಂತ್ರಿಕ ಶಿಕ್ಷಣದ ಸೆಮ್‌ಗಳನ್ನು ಒಂದೇ ಸಲಕ್ಕೆ ಆರಂಭಿಸುತ್ತಿಲ್ಲವಾಗಿದ್ದು, ಇದರಿಂದ ಅತಿಥಿ ಉಪನ್ಯಾಸಕರ ಕಾರ್ಯಭಾರವೂ ಸಮರ್ಪಕವಾಗಿ ಸಿಗುತ್ತಿಲ್ಲ ಎಂಬುದು ಹಲವು ಅತಿಥಿ ಉಪನ್ಯಾಸಕರ ಅನಿಸಿಕೆ. ಸರ್ಕಾರ ಇತರರಂತೆ ನಮ್ಮನ್ನು ಅತಿಥಿ ಉಪನ್ಯಾಸಕರೆಂದು ಪರಿಗಣಿಸಿ, ಕನಿಷ್ಠ 25 ಸಾವಿರ ರೂ. ಗಳ ಗೌರವಧನವನ್ನಾದರೂ ನೀಡಲಿ ಎಂಬುದು ಅನೇಕರ ಒತ್ತಾಯವಾಗಿದೆ.

Advertisement

ಪದವಿ ಕಾಲೇಜಿಗಳಿರುವ ಕಾಳಜಿ ನಮಗೇಕಿಲ್ಲ?:

ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಕಾರ್ಯಭಾರ ಹಾಗೂ ಗೌರವಧನ ಹೆಚ್ಚಳ ನಿಟ್ಟಿನಲ್ಲಿ ಕ್ರಮ ಕೈಗೊಂಡ ಸರ್ಕಾರ ಕಳೆದ ಜ.14ರಂದು ಆದೇಶ ಹೊರಡಿಸಿತ್ತು. ಅದರ ಅತಿಥಿ ಉಪನ್ಯಾಸಕರಿಗೆ ನೀಡಲಾಗುತ್ತಿದ್ದ ಗರಿಷ್ಠ 8-10 ತಾಸುಗಳ ಕಾರ್ಯಭಾರ ಬದಲಾಗಿ 15 ತಾಸುಗಳ ಕಾರ್ಯಭಾರ ನೀಡಿಕೆ ಜತೆಗೆ ಐದು ವರ್ಷಕ್ಕಿಂತ ಹೆಚ್ಚಿನ ಕಾಲದಿಂದ ಸೇವೆ ಸಲ್ಲಿಸುತ್ತಿರುವ ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿದವರಿಗೆ ಮಾಸಿಕ 32,000 ರೂ. ಗೌರವಧನ, ಐದು ವರ್ಷಕ್ಕಿಂತ ಕಡಿಮೆ ಕಾಲಾವಧಿಯ ಹಾಗೂ ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿದವರಿಗೆ 30,000 ಸಾವಿರ ರೂ., ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಕಾಲದಿಂದ ಸೇವೆಯಲ್ಲಿದ್ದರೂ ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಪೂರೈಸದ ಅತಿಥಿ ಉಪನ್ಯಾಸಕರಿಗೆ ಮಾಸಿಕ 28,000 ರೂ. ಗೌರವಧನ ನಿಗದಿಪಡಿಸಲಾಗಿದೆ.

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯ ಸರ್ಕಾರಿ ಪದವಿ ಹಾಗೂ ತಾಂತ್ರಿಕ ಕಾಲೇಜುಗಳ ಅತಿಥಿ ಉಪನ್ಯಾಸಕರ ಸೇವಾ ಭದ್ರತೆ, ಗೌರವಧ ಹೆಚ್ಚಳ ಅಧ್ಯಯನಕ್ಕೆಂದು ಸರ್ಕಾರ ಕುಮಾರ ನಾಯಕ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದರೂ, ಸರ್ಕಾರ ಸಮಿತಿ ಶಿಫಾರಸಿನಂತೆ ಪದವಿ ಕಾಲೇಜು ಉಪನ್ಯಾಸಕರಿಗೆ ಗೌರವಧನವನ್ನು 2,8000ದಿಂದ 32,000 ರೂ.ವರೆಗೆ ಹೆಚ್ಚಳ ಮಾಡಿದೆ. ಆದರೆ, ನಮ್ಮ ಬಗ್ಗೆ ಯಾವುದೇ ಕ್ರಮ ಇಲ್ಲವಾಗಿದೆ.

ಸೇವಾ ಭದ್ರತೆ ಇಲ್ಲದೆಯೇ, ಕಾಲೇಜಿನ ಪೂರ್ಣಾವಧಿ ಡಿ ದರ್ಜೆ ನೌಕರನ ವೇತನಕ್ಕಿಂತಲೂ ಕಡಿಮೆ ವೇತನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಗೌರವಧನ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇದೆ. ಈ ನಿಟ್ಟಿನಲ್ಲಿ ಅನೇಕ ಹೋರಾಟಗಳು ಆಗಿವೆ. ಅತಿಥಿ ಶಿಕ್ಷಕರು, ಉಪನ್ಯಾಸಕರ ಒತ್ತಾಯ-ಹೋರಾಟದ ಹಿನ್ನೆಲೆಯಲ್ಲಿ ಸರ್ಕಾರ ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಮಿತಿ ರಚಿಸಿತ್ತು. ತಮಗೆ ಗೌರವಧನ ಹೆಚ್ಚಳ ಆಗಲಿದೆ ಎಂಬ ಖುಷಿಯ ನಿರೀಕ್ಷೆಯಲ್ಲಿದ್ದ ರಾಜ್ಯದ ಸುಮಾರು 15 ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಮತ್ತದೆ ನಿರಾಸೆ ಎದುರಾಗಿದೆ.

ಶಾಲಾ-ಕಾಲೇಜುಗಳಲ್ಲಿ ಅತಿಥಿ ಶಿಕ್ಷಕ-ಉಪನ್ಯಾಸಕರಾದವರಿಗೆ 7-10 ತಿಂಗಳ ಅವಧಿಗೆ ಗೌರವಧನ ನಿಗದಿ ಮಾಡಿ ನೀಡಲಾಗುತ್ತದೆ. ಹೆಚ್ಚು ಕಡಿಮೆ ಕಾಯಂ ಶಿಕ್ಷಕ-ಉಪನ್ಯಾಸಕರು ಮಾಡುವಷ್ಟು ಬೋಧನೆಯನ್ನು ಇವರು ಮಾಡಿದರೂ ಸಿಗುವ ಗೌರವಧನ ಅತ್ಯಲ್ಪವಾಗಿತ್ತು. ಗೌರವಧ ಹೆಚ್ಚಳ, ಸೇವಾ ಕಾಯಂ ಇನ್ನಿತರೆ ಬೇಡಿಕೆ ನಿಟ್ಟಿನಲ್ಲಿ ಸರ್ಕಾರಿ ಪದವಿ ಕಾಲೇಜು ಉಪನ್ಯಾಸಕರು ನಿರಂತರ ಹೋರಾಟ ಕೈಗೊಂಡಿದ್ದರು. ಕಳೆದ ಕೆಲ ತಿಂಗಳಿಂದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳ ಅತಿಥಿ ಉಪನ್ಯಾಸಕರು ಸಹ ಸಂಘ ರಚಿಸಿಕೊಂಡು ತಮ್ಮ ಬೇಡಿಕೆಗಳ ಒತ್ತಾಯ, ಮನವಿ ಕೈಗೊಂಡಿದ್ದರು.

2021ರ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ಚಳಿಗಾಲ ಅಧಿವೇಶನ ವೇಳೆ ಅತಿಥಿ ಉಪನ್ಯಾಸಕರ ಬೇಡಿಕೆಗೆ ಸ್ಪಂದಿಸಿದ್ದ ಸರ್ಕಾರ ಉನ್ನತ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಿ.ಕುಮಾರ ನಾಯಕ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಮೂವರು ಸದಸ್ಯರನ್ನು ಸಮಿತಿಗೆ ನೇಮಿಸಿ ಡಿ.15ರಂದು ಅಧಿಸೂಚನೆ ಹೊರಡಿಸಲಾಗಿತ್ತು.

ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ನೀಡುವ ಕುರಿತು ಕಾನೂನಾತ್ಮಕ ಅವಕಾಶಗಳು, ಇತರೆ ರಾಜ್ಯಗಳಲ್ಲಿ ಅನುಸರಿಸಿರುವ ಹಾಗೂ ಕೈಗೊಂಡಿರುವ ಕ್ರಮಗಳು ಪರಿಶೀಲಿಸಿ ಅಭಿಪ್ರಾಯ ತಿಳಿಸುವುದು, ಇನ್ನಿತರೆ ಕ್ರಮಗಳ ಕುರಿತಾಗಿ ಮಾಹಿತಿ ಸಂಗ್ರಹ ಮಾಡಿ ಪರಿಶೀಲಿಸಿ ಒಂದು ತಿಂಗಳೊಳಗೆ ವರದಿ ನೀಡುವಂತೆ ಸೂಚಿಸಲಾಗಿತ್ತು. ಅದರಂತೆ ಸಮಿತಿ ಸರ್ಕಾರಕ್ಕೆ ವರದಿ ಒಪ್ಪಿಸಿತ್ತು.

ಅನುದಾನ ಹಂಚಿಕೆಯಲ್ಲೂ ತಾರತಮ್ಯ

ರಾಜ್ಯದ 15 ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ 627 ಬೋಧಕರ ಮಂಜೂರಾತಿ ಹುದ್ದೆಗಳು ಇದ್ದು ಅದರಲ್ಲಿ 277 ಜನ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ನಮಗೆ ವಾರಕ್ಕೆ 8 ತಾಸು ಕಾರ್ಯಭಾರ ನೀಡಲಾಗಿದ್ದು, ತಿಂಗಳಿಗೆ 32 ತಾಸು ಬೋಧನೆ ಮಾಡಿದರೆ ನಮಗೆ ಸಿಗುವ ಗೌರವಧನ 15 ಸಾವಿರ ರೂ. ಮಾತ್ರ ಆಗಿದೆ. ಕಾಯಂ ಉಪನ್ಯಾಸಕರಿಗೆ 16 ತಾಸು ಕಾರ್ಯಭಾರ ನೀಡಲಾಗಿದ್ದು, ಅವರಿಗೆ ಕನಿಷ್ಠ 57,700ದಿಂದ 70,000 ರೂ.ವರೆಗೆ ವೇತನ ಇದೆ. ನೀಡುವ ಗೌರವಧನವೂ ಪ್ರತಿ ತಿಂಗಳು ನೀಡಲ್ಲ. ಬಜೆಟ್‌ ಬಂದಾಗಲೇ ನೀಡಲಾಗುತ್ತದೆ. ಸರ್ಕಾರಿ ತಾಂತ್ರಿಕ ಕಾಲೇಜುಗಳ ಅತಿಥಿ ಉಪನ್ಯಾಸಕರ ಗೌರವಧನ ನೀಡಿಕೆಗೆಂದು ರಾಜ್ಯ ಸರ್ಕಾರ 1.43 ಕೋಟಿ ಅನುದಾನವನ್ನು 15 ಸರ್ಕಾರಿ ತಾಂತ್ರಿಕ ಕಾಲೇಜುಗಳಿಗೆ ಜುಲೈನಲ್ಲಿ ಬಿಡುಗಡೆ ಮಾಡಿದೆ. ಮೂರು ಕಾಲೇಜುಗಳಲ್ಲಿ ಮಾತ್ರ ಹಂಚಿಕೆ ಆಗಿದ್ದು, ಇನ್ನುಳಿದ 12 ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಗೌರವಧನವನ್ನೇ ನೀಡಿಲ್ಲ.

ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ತಾಂತ್ರಿಕ ಶಿಕ್ಷಣದಲ್ಲಿ ಸುಧಾರಣೆಗೆ ಮುಂದಾಗಿದ್ದಾರೆ. ಜತೆಗೆ ನಮ್ಮ ಗೌರವಧನ ಹೆಚ್ಚಳ, ಸೇವೆ ಕಾಯಂ ವಿಚಾರದಲ್ಲೂ ಗಮನ ಹರಿಸಬೇಕು. ಕುಮಾರ ನಾಯಕ ನೇತೃತ್ವದ ಸಮಿತಿಯಲ್ಲಿ ತಾಂತ್ರಿಕ ಕಾಲೇಜುಗಳ ಅತಿಥಿ ಉಪನ್ಯಾಸಕರ ವಿಚಾರ ಇದ್ದರೂ ಇದುವರೆಗೂ ನಮ್ಮ ಬಗ್ಗೆ ಕ್ರಮ ಇಲ್ಲದಿರುವುದು ನೋವು ತರಿಸಿದೆ. ●ಜಿ.ಬಿ.ಮನುಕುಮಾರ, ರಾಜ್ಯಾಧ್ಯಕ್ಷ, ಎಂಜಿನಿಯರಿಂಗ್‌ ಕಾಲೇಜು ಅರೆಕಾಲಿಕ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘ

●ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next