ಚಾಮರಾಜನಗರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ರಾಜ್ಯ ಸರ್ಕಾರ ಅಗೌರವ ತೋರಿದೆ ಎಂದು ಆರೋಪಿಸಿ ತಾಲೂಕಿನ ಚಂದಕವಾಡಿ ಹೋಬಳಿಯ ಡಾ.ಬಿ.ಆರ್. ಅಂಬೇಡ್ಕರ್ ಸಂಘಗಳ ಒಕ್ಕೂಟದ ವತಿಯಿಂದ ಚಂದಕವಾಡಿ ಬಸ್ ನಿಲ್ದಾಣದಲ್ಲಿ ರಸ್ತೆ ತಡೆ ನಡೆಸಲಾಯಿತು. ಚಂದಕವಾಡಿ ಗ್ರಾಮದ ಬಸ್ ನಿಲ್ದಾಣದ ವೃತ್ತದಲ್ಲಿ ಸಮಾವೇಶಗೊಂಡ ಅಂಬೇಡ್ಕರ್ ಸಂಘ ಒಕ್ಕೂಟದ ಕಾರ್ಯಕರ್ತರು, ರಾಜ್ಯ ಸರ್ಕಾರ, ಶಿಕ್ಷಣ ಇಲಾಖೆ ವಿರುದ್ಧ ಧಿಕ್ಕಾರ ಕೂಗಿ ಟೈರ್‌ಗೆ ಬೆಂಕಿ ಹಚ್ಚಿ ಅಕ್ರೋಶ ವ್ಯಕ್ತಪಡಿಸಿದರು. ಒಂದು ಗಂಟೆ ಕಾಲ ರಸ್ತೆತಡೆ ನಡೆಸಿದ ಹಿನ್ನಲೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಯಿತು.
ಸೇವೆಯಿಂದ ವಜಾಗೊಳಿಸಿ: ಬಿಎಸ್‌ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ.ಮ.ಕೃಷ್ಣಮೂರ್ತಿ ಮಾತನಾಡಿ, ಶಿಕ್ಷಣ ಇಲಾಖೆಯು ಶಾಲಾ-ಕಾಲೇಜುಗಳಲ್ಲಿ ಸಂವಿಧಾನ ದಿನಾಚರಣೆ ಆಚರಿಸುವಂತೆ ಹೊರಡಿಸಿರುವ ಸುತ್ತೋಲೆ ಕೈಪಿಡಿಯಲ್ಲಿ ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆದಿಲ್ಲ ಎಂದು ತಪ್ಪು ಸಂದೇಶ ಪ್ರಕಟಿಸಿದ್ದಾರೆ. ಈ ಮೂಲಕ ಡಾ.ಬಿ.ಆರ್.ಅಂಬೇಡ್ಕರ್‌ಗೆ ಅಗೌರವ ತೋರಿಸಿರುವ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅವರನ್ನು ಸೇವೆಯಿಂದ ವಜಾಗೊಳಿಸಿಬೇಕು. ಘಟನೆ ಕುರಿತು ಬೇಜಾವಾಬ್ದಾರಿ ಹೇಳಿಕೆ ನೀಡುತ್ತಿರುವ ಶಿಕ್ಷಣ ಸಚಿವ ಸುರೇಶ್‌ಕುಮಾರ್ ನೈತಿಕಹೊಣೆಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಸಂವಿಧಾನ, ಅಂಬೇಡ್ಕರ್ ಬೇರೆ ಮಾಡಲು ಅಸಾಧ್ಯ: ಡಾ.ಬಿ.ಆರ್.ಅಂಬೇಡ್ಕರ್ ದಿನಾಚರಣೆಯನ್ನು ವಿಶ್ವ ಜ್ಞಾನದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತದೆ. ಸಂವಿಧಾನ ರಚನೆ ಸಂದರ್ಭದಲ್ಲಿ ಅನೇಕ ಚರ್ಚೆಗಳು ಆಗಿದ್ದು, ಅಂಬೇಡ್ಕರ್ ಅವರೊಬ್ಬರೇ 3 ಸಾವಿರ ಪ್ರಶ್ನೆಗಳಿಗೆ ಸಮಂಜಸವಾಗಿ ಉತ್ತರಿಸಿದ್ದಾರೆ. ಅಂಬೇಡ್ಕರ್ ಅವರು ಸಂಪೂರ್ಣವಾಗಿ ಸಂವಿಧಾನ ಬರೆದಿದ್ದಾರೆ. ಸಂವಿಧಾನ ಮತ್ತು ಅಂಬೇಡ್ಕರ್ ಬೇರೆ ಮಾಡಲು ಸಾಧ್ಯವಿಲ್ಲ. ಕೇಂದ್ರ, ರಾಜ್ಯ ಸರ್ಕಾರ ಸಂವಿಧಾನವನ್ನು ತಿರುಚುವ ಪ್ರಯತ್ನ ಮಾಡುವ ಮೂಲಕ ಅಂಬೇಡ್ಕರ್ ಅವರಿಗೆ ಅಗೌರವ ನೀಡುವ ಕೆಲಸ ಮಾಡುತ್ತಿರುವುದು ಖಂಡನೀಯವಾದದ್ದು ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಬಿಎಸ್‌ಪಿ ಜಿಲ್ಲಾ ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ತಾಲೂಕು ಅಧ್ಯಕ್ಷ ಎಸ್.ಪಿ.ಮಹೇಶ್, ಪ್ರಧಾನ ಕಾರ್ಯದರ್ಶಿ ಅರಳೀಪುರ ಮಹದೇವಸ್ವಾಮಿ, ಅಂಬೇಡ್ಕರ್ ಸೇನೆ ತಾಲೂಕು ಅಧ್ಯಕ್ಷ ನಲ್ಲೂರು ಮಹದೇವಸ್ವಾಮಿ, ಆಲೂರು ನಾಗೇಂದ್ರ, ವಾಸು, ಗೂಳೀಪುರ ನಂಜುಂಡ ಸ್ವಾಮಿ, ರಾಜೇಂದ್ರ, ಕುಮಾರಸ್ವಾಮಿ, ಶಂಕರ್ ದಡದಹಳ್ಳಿ, ದೊಡ್ಡರಾಯಪೇಟೆ ಸಿದ್ದರಾಜು, ಸಿರಾಜ್, ಕುಮಾರ್, ಮಹದೇವ ಪ್ರಸಾದ್ ಹಾಗೂ ಚಂದಕವಾಡಿ, ನಲ್ಲೂರು, ಹುರುಳಿನಂಜಪುರ, ಸಗರೂರು, ಹೊಂಡರಬಾಳು, ದಡದಹಳ್ಳಿ, ನಾಗವಳ್ಳಿ, ಜ್ಯೋತಿಗೌಡನಪುರ ಗ್ರಾಮಗಳ ಅಂಬೇಡ್ಕರ್ ಸಂಘಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಯುವಕರು ಭಾಗವಹಿಸಿದ್ದರು.