ಸಾಗರ: ರೈತ ಸಂಘದ ಪದಾಧಿಕಾರಿಗಳನ್ನು ಅಗೌರವದಿಂದ ನಡೆಸಿಕೊಂಡಿರುವ ಗ್ರಾಮಾಂತರ ಪೊಲೀಸ್ ಠಾಣೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಶುಕ್ರವಾರ ರೈತ ಸಂಘದ ಡಾ. ಎಚ್.ಗಣಪತಿಯಪ್ಪ ಬಣದ ವತಿಯಿಂದ ಡಿವೈಎಸ್‌ಪಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ಗ್ರಾಮಾಂತರ ಠಾಣೆ ಅಧಿಕಾರಿಗಳ ವರ್ತನೆ ರೈತ ವಿರೋಧಿಯಾಗಿದೆ. ರೈತರಿಗೆ ಅಗೌರವ ತರುವ ರೀತಿಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ನಡೆದುಕೊಂಡಿದ್ದಾರೆ. ಈಚೆಗೆ ಚಿಕ್ಕನೆಲ್ಲೂರು ಸಂತೋಷ್ ಅಣ್ಣೋಜಿರಾವ್ ಎಂಬುವವರಿಗೆ ಆಗಿರುವ ಅನ್ಯಾಯದ ವಿರುದ್ಧ ನ್ಯಾಯ ಕೊಡಿಸಲು ರೈತ ಸಂಘ ಗ್ರಾಮಾಂತರ ಠಾಣೆಗೆ ಹೋಗಲಾಗಿತ್ತು. ಅ. 30ರಂದು ಠಾಣೆಗೆ ಹೋಗಿದ್ದಾಗ ಪೊಲೀಸ್ ಅಧಿಕಾರಿಗಳು ರೈತ ಸಂಘದ ಜೊತೆ ದಬ್ಬಾಳಿಕೆ ರೀತಿಯಲ್ಲಿ ವರ್ತನೆ ಮಾಡಿದ್ದಾರೆ ಎಂದು ದೂರಿದರು.
ಸಂತೋಷ್ ಅಣ್ಣೋಜಿರಾವ್ ಅವರಿಗೆ ಸೂಕ್ತ ನ್ಯಾಯ ದೊರಕಿಸಿಕೊಡಲು ರೈತ ಸಂಘದ ಪದಾಧಿಕಾರಿಗಳು ಏಕೆ ಬಂದಿದ್ದೀರಿ ಎಂದು ಪೊಲೀಸ್ ಅಧಿಕಾರಿಗಳು ದಬಾಯಿಸಿದ್ದಾರೆ.
ಹಾಗಾದರೆ ತಮ್ಮ ಸಂಘಟನೆಯಲ್ಲಿ ಸಕ್ರಿಯವಾಗಿರುವ ಪದಾಧಿಕಾರಿಗಳಿಗೆ ಅನ್ಯಾಯವಾದಾಗ ಠಾಣೆಗೆ ಹೋಗುವುದೇ ತಪ್ಪೇ ಎಂದು ಪ್ರಶ್ನಿಸಿದ ಅವರು, ಶಾಸಕ ಗೋಪಾಲಕೃಷ್ಣ ಬೇಳೂರು ತಾಲೂಕಿನಲ್ಲಿ ರೈತರಿಗೆ ಪೊಲೀಸ್ ಅಧಿಕಾರಿಗಳಿಂದ ಆಗುತ್ತಿರುವ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು. ತಕ್ಷಣ ಪೊಲೀಸ್ ಅಧಿಕಾರಿ ರೈತರ ಬಳಿ ಕ್ಷಮೆಯಾಚನೆ ಮಾಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ರೈತ ಸಂಘವು ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತ ಸಂಘದ ಪ್ರಮುಖರಾದ ರಮೇಶ್ ಈ. ಕೆಳದಿ, ಹೊಯ್ಸಳ ಗಣಪತಿಯಪ್ಪ ಮಾತನಾಡಿದರು. ಪ್ರತಿಭಟನೆಯಲ್ಲಿ ಡಾ. ರಾಮಚಂದ್ರಪ್ಪ ಮನೆಘಟ್ಟ, ಭದ್ರೇಶ್ ಬಾಳಗೋಡು, ಚಂದ್ರು ಆಲಳ್ಳಿ, ಶಿವು ಮೈಲಾರಿಕೊಪ್ಪ, ಚಂದ್ರು ಪೂಜಾರಿ, ಚಂದ್ರು ಶಿರವಂತೆ ಇನ್ನಿತರರು ಹಾಜರಿದ್ದರು.