ನವದೆಹಲಿ: ಕ್ರಿಮಿನಲ್ ಪ್ರಕರಣದಲ್ಲಿ ದೋಷಿಯಾಗಿ ಹತ್ತು ವರ್ಷ ಜೈಲುಶಿಕ್ಷೆಗೊಳಗಾಗಿ ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡಿದ್ದ ಎನ್ ಸಿಪಿ ಮುಖಂಡ ಮೊಹಮ್ಮದ್ ಫೈಜಲ್ ಅವರ ಅನರ್ಹತೆಯನ್ನು ಲೋಕಸಭೆ ಸೆಕ್ರೆಟರಿಯೇಟ್ ಬುಧವಾರ (ಮಾರ್ಚ್ 29) ರದ್ದುಗೊಳಿಸಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:ಧೋನಿ ಇನ್ನು ಹಲವು ಸೀಸನ್ ಆಡುವಷ್ಟು ಫಿಟ್ ಆಗಿದ್ದಾರೆ: ಟೀಮ್ ಇಂಡಿಯಾ ಆಟಗಾರ
ಲಕ್ಷದ್ವೀಪದ ಸಂಸದರಾಗಿರುವ ಫೈಜಲ್ ತನ್ನನ್ನು ದೋಷಿ ಎಂದು ತೀರ್ಪು ನೀಡಿ ಶಿಕ್ಷೆ ವಿಧಿಸಿರುವ ಸೆಷನ್ಸ್ ಕೋರ್ಟ್ ಆದೇಶದ ವಿರುದ್ಧ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ಸೆಷನ್ಸ್ ಕೋರ್ಟ್ ಆದೇಶ ಮತ್ತು ಶಿಕ್ಷೆಯನ್ನು ಅಮಾನತುಗೊಳಿಸಿ ತೀರ್ಪು ನೀಡಿದೆ.
ಕೇರಳ ಹೈಕೋರ್ಟ್ 2023ರ ಜನವರಿ 25ರಂದು ತೀರ್ಪು ನೀಡಿದ್ದರು ಕೂಡಾ ಅನರ್ಹಗೊಂಡಿದ್ದ ಮೊಹಮ್ಮದ್ ಸದಸ್ಯತ್ವವನ್ನು ಲೋಕಸಭೆ ಸೆಕ್ರೆಟರಿಯೇಟ್ ರದ್ದುಪಡಿಸಿಲ್ಲವಾಗಿತ್ತು. ಈ ಹಿನ್ನೆಲೆಯಲ್ಲಿ ಲೋಕಸಭೆ ಸದಸ್ಯತ್ವವನ್ನು ಅರ್ಹಗೊಳಿಸಬೇಕೆಂದು ಕೋರಿ ಮೊಹಮ್ಮದ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಇದೀಗ ಲೋಕಸಭಾ ಸೆಕ್ರೆಟರಿಯೇಟ್ ಮೊಹಮ್ಮದ್ ಫೈಜಲ್ ಅವರ ಲೋಕಸಭೆ ಸದಸ್ಯತ್ವ ಸ್ಥಾನ ಅನರ್ಹತೆಯನ್ನು ರದ್ದುಪಡಿಸಿ ಪ್ರಕಟನೆ ಹೊರಡಿಸಿದೆ. ಕೇರಳ ಹೈಕೋರ್ಟ್ ಆದೇಶ ಮತ್ತು ಶಿಕ್ಷೆಯನ್ನು ಅಮಾನತು ಮಾಡಿದ್ದರಿಂದ ಫೈಜಲ್ ಅವರ ಅನರ್ಹತೆಯನ್ನು ರದ್ದುಪಡಿಸಿರುವ ಕ್ರಮ ಸ್ವಾಗತಿಸುವುದಾಗಿ ಎನ್ ಸಿಪಿ ರಾಷ್ಟ್ರೀಯ ವಕ್ತಾರ ಕ್ಲೈಡೇ ಕ್ರಾಸ್ಟೋ ತಿಳಿಸಿದ್ದಾರೆ.
2009ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಸಚಿವ ದಿ.ಪಿ.ಎಂ.ಸಹೀದ್ ಅವರ ಅಳಿಯ ಮೊಹಮ್ಮದ್ ಸಾಲಿಹ್ ಅವರ ಹತ್ಯೆಗೆ ಪ್ರಯತ್ನಿಸಲಾಗಿತ್ತು. ಈ ಪ್ರಕರಣದಲ್ಲಿ ಲಕ್ಷದ್ವೀಪದ ಕವರಟ್ಟಿ ಸೆಷನ್ಸ್ ಕೋರ್ಟ್ ಫೈಜಲ್ ಸೇರಿದಂತೆ ಮೂವರಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಫೈಜಲ್ ಅವರನ್ನು ಜನವರಿ 2023ರ ಜನವರಿ 13ರಂದು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿತ್ತು.
ಕೋಲಾರದಲ್ಲಿ ಚುನಾವಣಾ ಪ್ರಚಾರದ ವೇಳೆ ವಂಚಕರೆಲ್ಲರೂ ಮೋದಿ ಉಪನಾಮ ಹೊಂದಿರುವುದೇಕೆ ಎಂದು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಗುಜರಾತ್ ಸೆಷನ್ಸ್ ಕೋರ್ಟ್ ಇತ್ತೀಚೆಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಗೆ 2 ವರ್ಷಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈ ನಿಟ್ಟಿನಲ್ಲಿ ಲೋಕಸಭಾ ಸೆಕ್ರೆಟರಿಯೇಟ್ ರಾಹುಲ್ ಗಾಂಧಿಯ ಲೋಕಸಭಾ ಸದಸತ್ವವನ್ನು ಅನರ್ಹಗೊಳಿಸಿತ್ತು. ಇದೀಗ ರಾಹುಲ್ ಅನರ್ಹತೆ ಪ್ರಕರಣದ ನಡುವೆಯೇ ಮೊಹಮ್ಮದ್ ಫೈಜಲ್ ಲೋಕಸಭಾ ಸದಸ್ಯತ್ವ ಮರಳಿ ಪಡೆದಿರುವ ಘಟನೆ ನಡೆದಿದೆ.