ಮುಂಬೈ: ಅನರ್ಹತೆ ಅರ್ಜಿಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ಶಿವಸೇನೆಯ ಎರಡೂ ಬಣಗಳ ಶಾಸಕರಿಗೆ ಮಹಾರಾಷ್ಟ್ರ ಅಸೆಂಬ್ಲಿ ಸ್ಪೀಕರ್ ರಾಹುಲ್ ನರ್ವೇಕರ್ ಶನಿವಾರ ನೋಟಿಸ್ ನೀಡಿದ್ದಾರೆ. ಸಿಎಂ ಶಿಂಧೆ ಬಣದ 40 ಶಾಸಕರು ಮತ್ತು ಉದ್ಧವ್ ಠಾಕ್ರೆ ಬಣದ 14 ಶಾಸಕರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಇತ್ತೀಚೆಗಷ್ಟೇ ಅನರ್ಹತೆ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಸ್ಪೀಕರ್‌ಗೆ ಸೂಚಿಸಿ ಎಂದು ಕೋರಿ ಉದ್ಧವ್ ಬಣ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಇದೇ ವೇಳೆ, ತಮ್ಮ 24 ವರ್ಷ ಹಳೆಯ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯನ್ನು ಮತ್ತೆ ಸಂಘಟಿಸುವುದಾಗಿ ಶನಿವಾರ ಪುನರುಚ್ಚರಿಸಿರುವ ಎನ್‌ಸಿಪಿ ವರಿಷ್ಠ ಶರದ್ ಪವಾರ್, “ನಾನು ದಣಿದಿಲ್ಲ, ನಿವೃತ್ತಿಯೂ ಆಗಿಲ್ಲ” ಎಂದಿದ್ದಾರೆ. ಮಾಜಿ ಪ್ರಧಾನಿ ಅಟಲ್ ಅವರು ಹಿಂದೊಮ್ಮೆ ಆಡಿದ್ದ ಮಾತನ್ನೇ ಶರದ್ ಪುನರುಚ್ಚರಿಸಿದ್ದಾರೆ. ಅಡ್ವಾಣಿ ಅವರಿಗೆ ಪಕ್ಷದ ನಾಯಕತ್ವವನ್ನು ಹಸ್ತಾಂತರಿಸುವ ವೇಳೆ ಅಟಲ್‌ಜೀ, “ನೈದರ್ ಟೈರ್ಡ್, ನಾರ್ ರಿಟೈರ್ಡ್” ಎಂದು ಹೇಳಿದ್ದರು.
ಶಿಂಧೆ ರಾಜೀನಾಮೆ?
ಈ ನಡುವೆ ಉದ್ಧವ್ ಠಾಕ್ರೆ ಅವರ ಪುತ್ರ, ಮಾಜಿ ಸಚಿವ ಆದಿತ್ಯ ಠಾಕ್ರೆ ಅವರು ಶನಿವಾರ ಮಾತನಾಡಿ, “ಸಿಎಂ ಏಕನಾಥ ಶಿಂಧೆ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಲಾಗಿದೆ. ಸರ್ಕಾರದಲ್ಲಿ ಸದ್ಯದಲ್ಲೇ ದೊಡ್ಡಮಟ್ಟದ ಬದಲಾವಣೆ ಆಗಲಿದೆ’ ಎಂದಿದ್ದಾರೆ.