Advertisement

ವಿವಾದಾತ್ಮಕ ಸ್ವರೂಪ ಪಡೆದ ಪ್ರೆಸ್‌ ರೂಂ ಬದಲಾವಣೆ 

08:44 AM Oct 13, 2018 | |

ಬೆಂಗಳೂರು: ವಿಧಾನಸೌಧ ನೆಲಮಹಡಿಯ ಕೊಠಡಿ ಸಂಖ್ಯೆ 9 ರಲ್ಲಿ ಮುಖ್ಯಮಂತ್ರಿ, ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಪತ್ರಿಕಾಗೋಷ್ಠಿಗೆ ಸ್ಥಳಾವಕಾಶ ಕಲ್ಪಿಸಿಕೊಡಲು ಹೊರಡಿಸಿರುವ ಆದೇಶ ವಿವಾದಾತ್ಮಕ ಸ್ವರೂಪ ಪಡೆದಿದೆ. ಪ್ರಸ್ತುತ ವಿಧಾನಸೌಧ ಮೂರನೇ ಮಹಡಿಯಲ್ಲಿ ಮಾಧ್ಯಮದವರಿಗೆ ಪ್ರಸ್‌ರೂಂ ವ್ಯವಸ್ಥೆ ಇದ್ದು, ಸಮ್ಮೇಳನ ಸಭಾಂಗಣ ಅಥವಾ ಸಮಿತಿ ಕೊಠಡಿ, ಸಚಿವರ ಕೊಠಡಿಗಳಲ್ಲಿ ಪತ್ರಿಕಾಗೋಷ್ಠಿ ನಡೆಸಲಾಗುತ್ತಿದೆ. ಇದೀಗ ವಿಧಾನಸೌಧ ಮೊದಲನೇ ಮಹಡಿಯಲ್ಲಿ ಅದಕ್ಕೆ ಅವಕಾಶ ಕಲ್ಪಿಸಿದ್ದು, ಮೂರನೇ ಮಹಡಿ ಹಾಗೂ ಸಚಿವರ ಕೊಠಡಿಗಳಿಗೆ
ಮಾಧ್ಯಮದವರಿಗೆ ನಿರ್ಬಂಧ ಹೇರುವ ಉದ್ದೇಶ ಇದರ ಹಿಂದಿದೆ ಎಂಬ ಆರೋಪ ಕೇಳಿಬರುತ್ತಿದೆ.

Advertisement

ವಿಧಾನಸೌಧಕ್ಕೆ ಮಾಧ್ಯಮದವರ ಪ್ರವೇಶ ನಿಯಂತ್ರಣ ಉದ್ದೇಶದಿಂದಲೇ 3 ನೇ ಮಹಡಿಯಲ್ಲಿರುವ ಪ್ರಸ್‌ರೂಂ ಬಂದ್‌ ಮಾಡಿ ಮೊದಲನೇ ಮಹಡಿಗೆ ವರ್ಗಾಯಿಸಲಾಗಿದೆ. ಇನ್ನು ಮುಂದೆ ಮಾಧ್ಯಮದದವರಿಗೆ ಮೊದಲನೇ ಮಹಡಿಗೆ ಮಾತ್ರ ಪ್ರವೇಶ ಇರುತ್ತದೆ ಎಂದು ಹೇಳಲಾಗಿದೆ. ಇದು ಮಾಧ್ಯಮದವರ ಆಕ್ರೋಶಕ್ಕೂ ಕಾರಣವಾಗಿದೆ. ಮತ್ತೂಂದೆಡೆ ಮಾಧ್ಯಮದವರು ವಿಧಾನಸೌಧ ಪ್ರವೇಶಕ್ಕೂ ಹಲವು ನಿಯಮ ರೂಪಿಸಲಾಗಿದ್ದು ಹೊಸ ಪಾಸ್‌ ವ್ಯವಸ್ಥೆ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಆದರೆ, ಆ ಪಾಸ್‌ ವ್ಯವಸ್ಥೆಯಿಂದ ಮಾಧ್ಯಮದ ವರಿಗೆ ಕಷ್ಟವಾಗಲಿದೆ ಎಂದು ಹೇಳ ಲಾಗುತ್ತಿದೆ. ಈ ಮಧ್ಯೆ, ವಿಧಾನಸೌಧ ಮೊದಲ ಮಹಡಿಯ 9 ನೇ ಸಂಖ್ಯೆಯ ಕೊಠಡಿಯಲ್ಲಿ ಪತ್ರಿಕಾಗೋಷ್ಠಿಗೆ ಅವಕಾಶ ಕಲ್ಪಿಸಿಕೊಡುವ ಆದೇಶಕ್ಕೆ ವಿಧಾನಸೌಧ ಮಹಿಳಾ ಸಿಬ್ಬಂದಿ ವಿರೋಧ ವ್ಯಕ್ತಪಡಿಸಿದ್ದಾರೆ.   ಕೊಠಡಿ ಸಂಖ್ಯೆ 9 ಮಹಿಳೆಯರ  ಶೌಚಾಲಯ ಪಕ್ಕದಲ್ಲೇ ಇರುವುದರಿಂದ ಅಲ್ಲಿ ಮಾಧ್ಯಮದವರು ಬರುವುದರಿಂದ ನಮಗೆ ಮುಜುಗರ ಉಂಟಾಗುತ್ತದೆ ಎಂದು ದೂರಿದ್ದಾರೆ.

ಮಾಧ್ಯಮ ಕೊಠಡಿ ಬದಲಾವಣೆ ಬಗ್ಗೆ ಮಾಧ್ಯಮದವರಿಗೆ ಅಸಮಾಧಾನವಿದೆ. ದೇವರಾಜ ಅರಸು ಕಾಲದಲ್ಲಿ ನೀಡಿದ ಕೊಠಡಿ ಅದೇ ಮಾಧ್ಯಮದವರಿಗೆ ಹೊಂದಾಣಿಕೆಯಾಗಿದೆ. ಅದನ್ನೇ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
● ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

ಯಾವುದೇ ಕಾರಣಕ್ಕೂ ವಿಧಾನಸೌಧದಲ್ಲಿ ಮಾಧ್ಯಮಗಳ ನಿಯಂತ್ರಣ ಸಾಧ್ಯವಿಲ್ಲ. ಹೇಗೆ ನಿರ್ಬಂಧಿಸಿದರೂ ಮಾಧ್ಯ ಮದವರು ಮಾಹಿತಿಯನ್ನು ಪಡೆದೇ ಪಡೆಯುತ್ತಾರೆ. ವಿಧಾನಸೌಧಕ್ಕೆ ಮಾಧ್ಯಮ ನಿಯಂತ್ರಿಸುವ ಪ್ರಸ್ತಾಪದ ಬಗ್ಗೆ ನನಗೆ ಮಾಹಿತಿ ಇಲ್ಲ.
● ಪ್ರಿಯಾಂಕ್‌ ಖರ್ಗೆ, ಸಮಾಜ ಕಲ್ಯಾಣ ಸಚಿವ

ಸರ್ಕಾರ ಮತ್ತು ಮಾಧ್ಯಮಗಳು ಜತೆಯಾಗಿ ಕಾರ್ಯ ನಿರ್ವಹಿಸಬೇಕು. ಯಾರ ಹಕ್ಕನ್ನು ಯಾರೂ ಕಸಿದುಕೊಳ್ಳಲು ಅಧಿಕಾರವಿಲ್ಲ. ವಿಧಾನಸೌಧಕ್ಕೆ ಮಾಧ್ಯಮಗಳ ನಿರ್ಬಂಧದ ಗೊಂದಲ ಕುರಿತು ಸಿಎಂ ಜತೆ ಚರ್ಚಿಸಿ ಪರಿಹರಿಸಲಾಗುವುದು. 
● ಕೃಷ್ಣ ಬೈರೇಗೌಡ, ಸಂಸದೀಯ ವ್ಯವಹಾರಗಳ ಸಚಿವ.

Advertisement
Advertisement

Udayavani is now on Telegram. Click here to join our channel and stay updated with the latest news.

Next