Advertisement

ಪೈಪ್‌ಲೈನ್‌ ದುರಸ್ತಿ ಹೆಸರ‌ಲ್ಲಿ ಅವ್ಯವಹಾರ

10:27 AM Jun 08, 2019 | Team Udayavani |

ಬ್ಯಾಡಗಿ: ಮಾಸಣಗಿ ಗ್ರಾಮದಲ್ಲಿ ಪೈಪ್‌ಲೈನ್‌ ದುರಸ್ತಿ ಹೆಸರಿನಲ್ಲಿ ಲಕ್ಷಾಂತರ ಹಣ ಅವ್ಯವಹಾರ ನಡದಿರುವ ಬಗ್ಗೆ ಆರೋಪಗಳಿವೆ. ಕಳೆದ ಹಲವು ದಿನಗಳಿಂದ ಮಾಹಿತಿ ಕೇಳುತ್ತಿದ್ದರೂ ಸಮರ್ಪಕವಾಗಿ ಉತ್ತರಿಸುತ್ತಿಲ್ಲ, ಕಾಮಗಾರಿ ನಡೆಸದೇ ಹಣ ಬಳಕೆ ಮಾಡಲಾಗಿದೆ. ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ನಡೆಸಿ ಇದಕ್ಕೊಂದು ತಾರ್ಕಿಕ ಅಂತ್ಯ ಕಂಡುಕೊಳ್ಳೋಣ ಎಂದು ತಾಪಂ ಉಪಾಧ್ಯಕ್ಷೆ ಶಾಂತವ್ವ ದೇಸಾಯಿ ತಾಪಂ ಮಾಸಿಕ ಕೆಡಿಪಿ ಸಭೆಯಲ್ಲಿ ಬಿಗಿಪಟ್ಟು ಹಿಡಿದರು.

Advertisement

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ವಿಷಯದ ಕುರಿತು ಮಾತನಾಡಿದ ಶಾಂತಮ್ಮ, ಮಾಸಣಗಿ ಗ್ರಾಮದಲ್ಲಿ ಪೈಪ್‌ಲೈನ್‌ ದುರಸ್ತಿಗೆ 5 ಲಕ್ಷ ರೂ. ಹಾಗೂ 7 ಲಕ್ಷ ರೂ. ವೆಚ್ಚ ಮಾಡಿ ಕಾಮಗಾರಿ ಮುಕ್ತಾಯವಾದ ಬಗ್ಗೆ ಪ್ರಗತಿ ವರದಿಯಲ್ಲಿ ಸುಳ್ಳು ಮಾಹಿತಿ ನೀಡಿದ್ದೀರಿ, ಈ ಹಿಂದೆ ಮಾಡಿದ ಕಾಮಗಾರಿಗೆ ಪುನಶ್ಚೇತನ ಮಾಡಲಾಗಿದೆ ಎಂದು ಹೊಸ ಬಿಲ್ ಸೃಷ್ಟಿ ಮಾಡಿ ಹಣ ಪಡೆದುಕೊಂಡಿರುವ ಬಗ್ಗೆ ಅನುಮಾನಗಳಿವೆ. ಕಾಮಗಾರಿ ನಡೆಸಲಾದ ಸ್ಥಳ ತೋರಿಸಿ ಎಂದು ಪಟ್ಟು ಹಿಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ಕಾಮಗಾರಿಗೆ 5 ಲಕ್ಷ ರೂ. ಖರ್ಚಾಗಿದ್ದು, ಈ ಕುರಿತಂತೆ ನಿಮ್ಮ ಗಮನಕ್ಕೆ ತಂದಿದ್ದೇನೆ ಮತ್ತು ಪಿಡಿಒ ಸಮ್ಮುಖದಲ್ಲಿ ಕಾಮಗಾರಿ ನಡೆಸಲಾಗಿದೆ ಎಂದರು.

ಕೃಷಿ ಇಲಾಖೆ ಪ್ರಗತಿ ಪರಿಶೀಲನಾ ಸಂದರ್ಭದಲ್ಲಿ ಮಾತನಾಡಿದ ತಾಪಂ ಅಧ್ಯಕ್ಷೆ ಸವಿತಾ ಸುತ್ತಕೋಟಿ, ತಾಲೂಕಿನಲ್ಲಿ ಕೃಷಿ ಇಲಾಖೆ ಹಾಗೂ ಕೃಷಿ ಅಧಿಕಾರಿಗಳು ಇದ್ದೂ ಇಲ್ಲದಂತಾಗಿದ್ದು, ಸರಕಾರದ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಪ್ರತಿ ಗ್ರಾಮ ಪಂಚಾಯಿತಿಗೊಂದರಂತೆ ನೀರಿನ ಸಂರಕ್ಷಣೆಗೆ ಚೆಕ್‌ ಡ್ಯಾಂ ನಿರ್ಮಾಣ ಮಾಡದೇ ಬೇಜವಾಬ್ದಾರಿತನ ತೋರಿದ್ದರಿಂದ ಬರಗಾಲದಲ್ಲಿ ನೀರಿಗೆ ಇನ್ನಷ್ಟು ಪರದಾಡುವಂತೆ ಮಾಡಿದ್ದೀರಿ ಎಂದು ಕೃಷಿ ಅಧಿಕಾರಿಯನ್ನು ತರಾಟೆ ತೆಗದುಕೊಂಡರು.

ಮಧ್ಯೆ ಪ್ರವೇಶಿಸಿ ಮಾತನಾಡಿದ ತಾಪಂ ಟಿಇಒ ಪರಶುರಾಮ ಪುಜಾರ, ಕೇವಲ ಚೆಕ್‌ ಡ್ಯಾಂಗಳಷ್ಟೆ ಅಲ್ಲ, ಜಲಾಮೃತ ಕಾರ್ಯಕ್ರಮದಲ್ಲಿ ಯಾವುದೇ ಒಂದು ಯೋಜನೆ ರೂಪಿಸಿಲ್ಲ. ಅದ್ಯಾವ ಪರಿ ಕಾರ್ಯ ನಿರ್ವಹಿಸುತ್ತಿದ್ದೀರಿ ಎಂಬುದಕ್ಕೆ ನಿಮ್ಮ ಮೌನವೇ ಉತ್ತರವಾಗಿದೆ ಎಂದರು.

Advertisement

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಹಾಯಕ ಕೃಷಿ ಅಧಿಕಾರಿ ಬಸವರಾಜ, ಈ ಕುರಿತಂತೆ ಶೀಘ್ರದಲ್ಲೆ ಕ್ರೀಯಾ ಯೋಜನೆ ರೂಪಿಸಿ ವರದಿ ಸಲ್ಲಿಸುವುದಾಗಿ ತಿಳಿಸಿದರು.

ಕಟ್ಟಡ ಹಸ್ತಾಂತರ ಯಾವಾಗ?: ಕೆಆರ್‌ಐಡಿಎಫ್‌ ಹಾಗೂ ಪಶು ಸಂಗೋಪನಾ ಇಲಾಖೆ ಪ್ರಗತಿ ಪರಿಶೀಲನಾ ಸಂದರ್ಭದಲ್ಲಿ ಮಾತನಾಡಿದ ಡಾ| ಗೋಪಿನಾಥ, ಪಶು ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣವಾಗಿ ಈಗಾಗಲೇ ಸುಮಾರು ತಿಂಗಳು ಕಳೆಯುತ್ತ ಬಂದಿದೆ. ಇಷ್ಟಾದರೂ ಕೆಆರ್‌ಐಡಿಎಫ್‌ನಿಂದ ನೂತನ ಕಟ್ಟಡ ಹಸ್ತಾಂತರ ಮಾಡಿಲ್ಲ. ಹೀಗಾಗಿ ವೈದ್ಯರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಪಶುಗಳಿಗೆ ಚಿಕಿತ್ಸೆ ನೀಡುವುದು ಕಷ್ಟವಾಗಿದ್ದು, ರೈತರಿಂದ ತೆಗಳಿಕೆ ಮಾತುಗಳನ್ನು ಕೇಳುವಂತಾಗಿದೆ. ಕೂಡಲೇ ಕಟ್ಟಡವನ್ನು ಹಸ್ತಾಂತರ ಮಾಡುವಂತೆ ಆಗ್ರಹಿಸಿದರು.

ಇದಕ್ಕುತ್ತರಿಸಿದ ಕೆಆರ್‌ಐಡಿಎಫ್‌ ಅಧಿಕಾರಿ, ಕಟ್ಟಡ ನಿರ್ಮಾಣಕ್ಕೆ ಟೆಂಡರ್‌ ಹಣಕ್ಕಿಂತ ಹೆಚ್ಚಿನ ಹಣ ಖರ್ಚಾಗಿದೆ. ಈ ಕುರಿತು ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಖರ್ಚಾದ ಹೆಚ್ಚಿನ ಹಣ ನೀಡುವ ಭರವಸೆ ಇದ್ದು, ನಂತರ ಕಟ್ಟಡ ಹಸ್ತಾಂತರ ಮಾಡುವುದಾಗಿ ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಡಾ| ಗೋಪಿನಾಥ, ಅನುದಾನ ಬಿಡುಗಡೆಯಾಗುವುದು ಅನುಮಾನ. ಅಲ್ಲಿಯವರೆಗೂ ಕಾಯುವುದು ಕಷ್ಟ. ಆದ್ದರಿಂದ ಕೂಡಲೇ ಕಟ್ಟಡ ಹಸ್ತಾಂತರ ಮಾಡುವಂತೆ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next