ಬೆಂಗಳೂರು: ನಿಯಮ ಉಲ್ಲಂ ಸಿ ಹೈಕೋರ್ಟ್ ಆವರಣದಲ್ಲಿ “ಅನಂತು ವರ್ಸಸ್ ನುಸ್ರತ್’ ಚಿತ್ರದ ನಾಯಕ ನಟ ವಿನಯ್ ರಾಜ್‌ಕುಮಾರ್ ಅವರ ಫೋಟೋ ಶೂಟ್ ನಡೆಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ (ಪಿಐಎಲ್) ಪರಿವರ್ತಿಸಲಾಗಿದೆ.
ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎ.ಎಸ್. ಬೋಪಣ್ಣ ಅವರಿದ್ದ ಏಕಸದಸ್ಯ ಪೀಠ, ಅರ್ಜಿಯಲ್ಲಿ ಯಾವುದೇ ವೈಯುಕ್ತಿಕ ಹಿತಾಸಕ್ತಿ ಇಲ್ಲ. ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಲಿದೆ ಎಂದು ಅಭಿಪ್ರಾಯಪಟ್ಟು, ಈ ಅರ್ಜಿಯನ್ನು ವಿಭಾಗೀಯ ಪೀಠಕ್ಕೆ ವರ್ಗಾಯಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್‌ಗೆ ಸೂಚಿಸಿತು.
ಹೈಕೋರ್ಟ್ ಆವರಣ ಮತ್ತು ಬೆಂಗಳೂರು ವಕೀಲರ ಸಂಘದ ಗ್ರಂಥಾಯಲದಲ್ಲಿ 2017ರ ಆ.15ರಂದು “ಅನಂತು ವರ್ಸಸ್ ನುಸ್ರತ್’ ಚಿತ್ರಕ್ಕಾಗಿ ನಟ ವಿನಯ್ ರಾಜ್‌ಕುಮಾರ್ ಅವರ ಫೋಟೋ ಶೂಟ್ ನಡೆದಿತ್ತು ಇದನ್ನು ಪ್ರಶ್ನಿಸಿ ತಕರಾರು ಅರ್ಜಿ ಸಲ್ಲಿಸಲಾಗಿತ್ತು.
ಲಾಂಛನಗಳು ಮತ್ತು ಹೆಸರುಗಳು (ಅನುಚಿತ ನಿಯಂತ್ರಣ) ಕಾಯ್ದೆ-1950ರ ಪ್ರಕಾರ ಸಂಸತ್, ರಾಜ್ಯ ಶಾನಸಭೆ, ಸುಪ್ರೀಂಕೋರ್ಟ್, ರಾಜ್ಯ ಹೈಕೋರ್ಟ್, ಕೇಂದ್ರ ಸಚಿವಾಲಯ ಅಥವಾ ರಾಜ್ಯ ಸಚಿವಾಲಯ ಹಾಗೂ ಇತರೆ ಸರಕಾರಿ ಕಚೇರಿಗಳ ಹೆಸರು ಅಥವಾ ಈ ಮೇಲ್ಕಂಡ ಕಚೇರಿ ಕಟ್ಟಡಗಳ ಚಿತ್ರಗಳನ್ನು ಬಳಸುವುದು ನಿಷಿದ್ಧ.
ಈ ನಿಯಮ ಮತ್ತು ಹೈಕೋರ್ಟ್ ಭದ್ರತಾ ವ್ಯವಸ್ಥೆ ಉಲ್ಲಂ ಸಿ, ಹೈಕೋರ್ಟ್ ಆಚರಣದಲ್ಲಿ ವಿನಯ್ ರಾಜ್‌ಕುಮಾರ್ ಅವರ ಫೊಟೋ ಶೂಟ್ ನಡೆಸಲಾಗಿದೆ. ಅಲ್ಲದೇ ಹಳದಿ ನಾಮಫಲಕದ ವಾಹನ, ಮಾಧ್ಯಮದವರ ಕ್ಯಾಮರಾ ಹಾಗೂ ಲ್ಯಾಪ್‌ಟಾಪ್ ಸೇರಿ ಇನ್ನಿತರ ವಸ್ತುಗಳನ್ನು ಹೈಕೋರ್ಟ್ ಆವರಣದೊಳಗೆ ತರಲು ಹೈಕೋರ್ಟ್ ರಿಜಿಸ್ಟ್ರಾರ್ ಅನುಮತಿ ಪಡೆಯಬೇಕು. ಆದರೆ, ಫೋಟೋ ಶೂಟ್‌ಗೆ ಅನುಮತಿ ಪಡೆದಿಲ್ಲ.
ಹೈಕೋರ್ಟ್ ಸಹಾಯಕ ಪೊಲೀಸ್ ಆಯುಕ್ತರು ದಾಖಲಿಸಿದ ದೂರಿನ ಮೇಲೆ ಈವರೆಗೂ ವಿಧಾನಸೌಧ ಠಾಣೆ ಎಸ್‌ಐ ಯಾವುದೇ ಕ್ರಮ ಜರುಗಿಸಿಲ್ಲ. ಹೀಗಾಗಿ, ಎಸಿಪಿ ದೂರಿನ ತನಿಖೆ ನಡೆಸಲು ಮತ್ತು ಹೈಕೋರ್ಟ್ ಭದ್ರತಾ ವ್ಯವಸ್ಥೆ ಉಲ್ಲಂ ಸಿದವರನ್ನು ಬಂಧಿಸಿ, ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರುಪಡಿಸಲು ವಿಧಾನಸೌಧ ಠಾಣೆ ಎಸ್‌ಐಗೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.